Site icon Vistara News

Maoists Killed: ಭದ್ರತಾ ಪಡೆಗಳ ಕಾರ್ಯಾಚರಣೆ; ಮತ್ತೆ 4 ಮಾವೋವಾದಿಗಳ ಹತ್ಯೆ

Maoists Killed

Maoists Killed

ರಾಂಚಿ: ಭದ್ರತಾ ಪಡೆ ಸೋಮವಾರ (ಜೂನ್‌ 17) ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ 4 ಮಾವೋವಾದಿಗಳನ್ನು ಹೊಡೆದುರುಳಿಸಿದೆ. ಹತ್ಯೆಗೀಡಾದವರ ಪೈಕಿ ಓರ್ವ ಮಹಿಳಾ ಮಾವೋವಾದಿಯೂ ಇದ್ದಾಳೆ ಎಂದು ಮೂಲಗಳು ತಿಳಿಸಿವೆ (Maoists Killed).

ಪೊಲೀಸರು ಹಾಗೂ ಭದ್ರತಾ ಪಡೆ ಈ ಜಂಟಿ ಕಾರ್ಯಾಚರಣೆ ಕೈಗೊಂಡಿದೆ. ಹತರಾದ ಮಾವೋವಾದಿಗಳಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಇಬ್ಬರನ್ನು ಬಂಧಿಸಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಅವರು ಈ ಬಗ್ಗೆ ಮಾಹಿತಿ ನೀಡಿ, “ಗುವಾ ಮತ್ತು ಜೆಟೆಯಾ ಪಿಎಸ್ ಪ್ರದೇಶಗಳ ಗಡಿಯಲ್ಲಿರುವ ಸರಂದಾ ಅರಣ್ಯಗಳಲ್ಲಿ ಸೋಮವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ನಮ್ಮ ಜಂಟಿ ಪಡೆಗಳು ಮಾವೋವಾದಿ ವಲಯ ಕಮಾಂಡರ್, ಉಪ-ವಲಯ ಕಮಾಂಡರ್, ಪ್ರದೇಶ ಕಮಾಂಡರ್ ಮತ್ತು ಮಹಿಳಾ ಮಾವೋವಾದಿ ಸೇರಿದಂತೆ ನಾಲ್ವರು ಮಾವೋವಾದಿಗಳನ್ನು ಹೊಡೆದುರುಳಿಸಿವೆ. ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಜಂಟಿ ತಂಡವು ಸೋಮವಾರ ಮುಂಜಾನೆ ಸರಂದಾ ಮೀಸಲು ಅರಣ್ಯದೊಳಗಿನ ಲುಕುಂಗ್ ರೈಕೆಲಾ ಕಾಡುಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ದಟ್ಟವಾದ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಮಾವೋವಾದಿಗಳು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದರು. ಈ ವೇಳೆ ಎನ್‌ಕೌಂಟರ್‌ ಆರಂಭವಾಗಿತ್ತು.

8 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಅಬುಜ್ಮಾರ್ಹ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಜೂನ್‌ 15ರಂದು ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 8 ಮಾವೋವಾದಿಗಳು ಸಾವನ್ನಪ್ಪಿದ್ದರು. ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಕಳೆದ ಕೆಲವು ದಿನಗಳಿಂದ ಅಬುಜ್ಮಾರ್ಹ್‌ ಒಳಗೊಂಡ ನಾರಾಯಣಪುರ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಅಬುಜ್ಮಾರ್ಹ್ ಒಂದು ಗುಡ್ಡಗಾಡು ಅರಣ್ಯ ಪ್ರದೇಶವಾಗಿದ್ದು, ಇದು ನಾರಾಯಣಪುರ, ಬಿಜಾಪುರ ಮತ್ತು ದಾಂತೇವಾಡ ಜಿಲ್ಲೆಗಳ ಮಧ್ಯದಲ್ಲಿದೆ. ಇದು 4,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದ್ದು ಮಾವೋವಾದಿಗಳ ಅಡುಗುತಾಣವಾಗಿ ಬದಲಾಗಿದೆ. ಜನ ಸಂಚಾರ ಕಡಿಮೆ ಇರುವ, ಭೌಗೋಳಿಕವಾಗಿ ಪ್ರತ್ಯೇಕವಾಗಿರುವ ಈ ಪ್ರದೇಶವನ್ನು ಮಾವೋವಾದಿಗಳ ಚಟುವಟಿಕೆಗಳ ಕೇಂದ್ರವೆಂದು ಪರಿಗಣಿಸಲಾಗಿದೆ.

ನಾರಾಯಣಪುರ, ಕಂಕರ್, ದಾಂತೇವಾಡ ಮತ್ತು ಕೊಂಡಗಾಂವ್ ಜಿಲ್ಲೆಗಳ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅಬುಜ್ಮಾರ್ಹ್ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಈ ನಾಲ್ಕು ಜಿಲ್ಲೆಗಳ ಜಿಲ್ಲಾ ರಿಸರ್ವ್ ಗಾರ್ಡ್ (DRG), ವಿಶೇಷ ಕಾರ್ಯಪಡೆ (STF) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ನ 53ನೇ ಬೆಟಾಲಿಯನ್ ಸಿಬ್ಬಂದಿಯನ್ನು ಒಳಗೊಂಡ ತಂಡ ಜೂನ್ 12ರಂದೇ ಇಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಮಾವೋವಾದಿಗಳು ದಾಳಿ ನಡೆಸಿದಾಗ ಗುಂಡಿನ ಚಕಮಕಿ ಆರಂಭವಾಗಿತ್ತು.

ಇದನ್ನೂ ಓದಿ: Encounter In Kanker: ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌; ಓರ್ವ ನಕ್ಸಲ್‌ ಸಾವು

ಏಪ್ರಿಲ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ 29 ಮಾವೋವಾದಿಗಳನ್ನು ಹತ್ಯೆ ಮಾಡಿದ್ದರು. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಈ ಎನ್‌ಕೌಂಟರ್‌ ನಡೆದಿತ್ತು. ಗುಪ್ತಚರದ ಖಚಿತ ಮಾಹಿತಿಯ ಮೇರೆಗೆ ಬಿಎಸ್ಎಫ್ (BSF) ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ (DRG) ಕಂಕರ್‌ನ ಚೋಟೆಬೆಟಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಿನಗುಂಡ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಮಾವೋವಾದಿಗಳನ್ನು ಕೊಂದಿದ್ದರು.

Exit mobile version