ಹೊಸದಿಲ್ಲಿ: ಛತ್ತೀಸ್‌ಗಢದ ಅಬುಜ್ಮಾರ್ಹ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 8 ಮಾವೋವಾದಿಗಳು ಸಾವನ್ನಪ್ಪಿದ್ದಾರೆ (Maoists Killed). ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಎರಡು ದಿನಗಳಿಂದ ಅಬುಜ್ಮಾರ್ಹ್ ಒಳಗೊಂಡ ನಾರಾಯಣಪುರ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.
ಅಬುಜ್ಮಾರ್ಹ್ ಒಂದು ಗುಡ್ಡಗಾಡು ಅರಣ್ಯ ಪ್ರದೇಶವಾಗಿದ್ದು, ಇದು ನಾರಾಯಣಪುರ, ಬಿಜಾಪುರ ಮತ್ತು ದಾಂತೇವಾಡ ಜಿಲ್ಲೆಗಳ ಮಧ್ಯದಲ್ಲಿದೆ. ಇದು 4,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದ್ದು ಮಾವೋವಾದಿಗಳ ಅಡುಗುತಾಣವಾಗಿ ಬದಲಾಗಿದೆ. ಜನ ಸಂಚಾರ ಕಡಿಮೆ ಇರುವ, ಭೌಗೋಳಿಕವಾಗಿ ಪ್ರತ್ಯೇಕವಾಗಿರುವ ಈ ಪ್ರದೇಶವನ್ನು ಮಾವೋವಾದಿಗಳ ಚಟುವಟಿಕೆಗಳ ಕೇಂದ್ರವೆಂದು ಪರಿಗಣಿಸಲಾಗಿದೆ.
#UPDATE | A total of 8 naxals killed so far in an encounter with security forces in Abujhmarh. One jawan died in the line of duty, two injured: Police official#Chhattisgarh
— ANI (@ANI) June 15, 2024
ನಾರಾಯಣಪುರ, ಕಂಕರ್, ದಾಂತೇವಾಡ ಮತ್ತು ಕೊಂಡಗಾಂವ್ ಜಿಲ್ಲೆಗಳ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಇಂದು ಬೆಳಿಗ್ಗೆ ಅಬುಜ್ಮಾರ್ಹ್ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಗುಂಡಿನ ಚಕಮಕಿ ಮುಂದುವರಿದಿದೆ.
ಈ ನಾಲ್ಕು ಜಿಲ್ಲೆಗಳ ಜಿಲ್ಲಾ ರಿಸರ್ವ್ ಗಾರ್ಡ್ (DRG), ವಿಶೇಷ ಕಾರ್ಯಪಡೆ (STF) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ನ 53ನೇ ಬೆಟಾಲಿಯನ್ ಸಿಬ್ಬಂದಿಯನ್ನು ಒಳಗೊಂಡ ತಂಡ ಜೂನ್ 12ರಂದು ಇಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಮಾವೋವಾದಿಗಳು ದಾಳಿ ನಡೆಸಿದಾಗ ಗುಂಡಿನ ಚಕಮಕಿ ಆರಂಭವಾಯಿತು.
ಇದನ್ನೂ ಓದಿ: Encounter In Kanker: ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್; ಓರ್ವ ನಕ್ಸಲ್ ಸಾವು
29ಕ್ಕೂ ಹೆಚ್ಚು ಮಾವೋವಾದಿಗಳ ಹತ್ಯೆ
ಏಪ್ರಿಲ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ 29 ಮಾವೋವಾದಿಗಳನ್ನು ಹತ್ಯೆ ಮಾಡಿದ್ದರು. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಈ ಎನ್‌ಕೌಂಟರ್ ನಡೆದಿತ್ತು. ಗುಪ್ತಚರದ ಖಚಿತ ಮಾಹಿತಿಯ ಮೇರೆಗೆ ಬಿಎಸ್ಎಫ್ (BSF) ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ (DRG) ಕಂಕರ್‌ನ ಚೋಟೆಬೆಟಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಿನಗುಂಡ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಮಾವೋವಾದಿಗಳನ್ನು ಕೊಂದಿದ್ದರು.
ಎನ್‌ಕೌಂಟರ್ ನಡೆದ ಸ್ಥಳದಿಂದ ಬಳಿಕ ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಾರ್ಯಾಚರಣೆಯ ಸ್ಥಳದಿಂದ ಏಳು ಏಕೆ ಸರಣಿ ರೈಫಲ್‌ಗಳು ಮತ್ತು ಮೂರು ಲೈಟ್ ಮೆಷಿನ್ ಗನ್‌ಗಳನ್ನೂ (LMGs) ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಗುಂಡಿನ ಚಕಮಕಿ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಹತರಾದ ಮಾವೋವಾದಿಗಳ ಪೈಕಿ ಉನ್ನತ ನಕ್ಸಲ್ ನಾಯಕ ಶಂಕರ್ ರಾವ್ ಕೂಡ ಸೇರಿದ್ದ. ಪೊಲೀಸ್ ಅಧಿಕಾರಿಗಳ ಪ್ರಕಾರ ಶಂಕರ್ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಹಲವು ವರ್ಷಗಳಿಂದ ಸಮಸ್ಯೆ
ಛತ್ತೀಸ್‌ಗಢವು ಹಲವು ದಶಕಗಳಿಂದ ನಕ್ಸಲೈಟ್, ಮಾವೋವಾದಿಗಳ ಭೀತಿ ಎದುರಿಸುತ್ತಿದೆ. ವಿಶೇಷವಾಗಿ ಬಸ್ತಾರ್ ಪ್ರದೇಶವು ನಕ್ಸಲ್ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಆಗಾಗ ಹಿಂಸಾಚಾರ ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯುತ್ತಲೇ ಇರುತ್ತದೆ. ನಕ್ಸಲರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವುದು, ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡುವುದು ಮತ್ತು ಶರಣಾಗುವ ನಕ್ಸಲರಿಗೆ ಪುನರ್ವಸತಿ ಕಲ್ಪಸಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದಾಗ್ಯೂ ಈ ಪ್ರಯತ್ನಗಳ ಹೊರತಾಗಿಯೂ ರಾಜ್ಯದಲ್ಲಿ ನಕ್ಸಲ್ ಹಾವಳಿ ಮುಂದುವರಿದಿದೆ.