ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಒಬಿಸಿ (ಇತರೆ ಹಿಂದುಳಿದ ವರ್ಗ) ಮೀಸಲಾತಿ (Maratha Quota) ನೀಡಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟವು ಹಿಂಸಾತ್ಮಕವಾಗುತ್ತಿದೆ. ಮೀಸಲಾತಿಗೆ ಆಗ್ರಹಿಸಿ ನಿರಶನ ಆರಂಭಿಸಿರುವ ಮನೋಜ್ ಜರಾಂಗೆ ಅವರ ಆರೋಗ್ಯ ಸ್ಥಿತಿಯೂ ಹದಗೆಡುತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಯ ತೀವ್ರತೆಗೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮರಾಠ ಮೀಸಲಾತಿ ಕುರಿತಂತೆ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಅಲ್ಲದೆ, ಸರ್ಕಾರವೂ ಮೀಸಲಾತಿ ಪರವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.
“ಮನೋಜ್ ಜರಾಂಗೆ ಪಾಟೀಲ್ ಅವರು ಸರ್ಕಾರಕ್ಕೆ ಸಹಕಾರ ನೀಡಬೇಕು. ರಾಜ್ಯ ಸರ್ಕಾರವೂ ಮರಾಠ ಸಮುದಾಯದವರಿಗೆ ಮೀಸಲಾತಿ ನೀಡಲು ಬಯಸುತ್ತಿದೆ. ಮೀಸಲಾತಿ ನೀಡುವ ಕುರಿತು ಪ್ರಾಮಾಣಿಕ ಪ್ರಯತ್ನವನ್ನೂ ಮಾಡಲಾಗುತ್ತದೆ. ಆದರೆ, ಅಲ್ಲಿಯವರೆಗೆ ಮರಾಠ ಸಮುದಾಯದವರು ಶಾಂತಿಯಿಂದ ವರ್ತಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು” ಎಂದು ಸರ್ವಪಕ್ಷಗಳ ಸಭೆ ಬಳಿಕ ಏಕನಾಥ್ ಶಿಂಧೆ ಅವರು ಮನವಿ ಮಾಡಿದ್ದಾರೆ.
#WATCH | Maharashtra CM Eknath Shinde chairs all-party meeting on Maratha reservation in Mumbai pic.twitter.com/vJ3MIHx6sr
— ANI (@ANI) November 1, 2023
ಮರಾಠ ಮೀಸಲಾತಿ ನೀಡಬೇಕು ಎಂದು ಮನೋಜ್ ಜರಾಂಗೆ ಪಾಟೀಲ್ ಅವರು ಸರ್ಕಾರಕ್ಕೆ 40 ದಿನಗಳ ಗಡುವು ನೀಡಿದ್ದಾರೆ. ಇದು ಸರ್ಕಾರಕ್ಕೆ ತಲೆನೋವಾಗಿದೆ. ಆದರೂ, ಮರಾಠ ಮೀಸಲಾತಿ ನೀಡುವ ಕುರಿತು ವಿಶೇಷ ಅಧಿವೇಶನ ಕರೆಯದೆ, ಮೊದಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದಷ್ಟೇ, ಬೀಡ್ ಜಿಲ್ಲೆ ಮಾಜಲಗಾಂವ್‌ನಲ್ಲಿರುವ ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ, ಇದೇ ಜಿಲ್ಲೆಯ ಮತ್ತೊಬ್ಬ ಎನ್‌ಸಿಪಿ ಶಾಸಕ ಸಂದೀಪ್ ಕ್ಷೀರಸಾಗರ ನಿವಾಸಗಳಿಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಛತ್ರಪತಿ ಶಿವಾಜಿ ನಗರದಲ್ಲಿರುವ ಬಿಜೆಪಿ ಶಾಸಕ ಪ್ರಶಾಂತ್ ಬಂಬ್ ಅವರ ಕಚೇರಿಯನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದರು. ಎನ್‌ಸಿಪಿ ಕಚೇರಿಗೂ ಬೆಂಕಿ ಹಚ್ಚಲಾಗಿತ್ತು. ಈಗಾಗಲೇ ಏಕನಾಥ್ ಶಿಂಧೆ ಬಣದ ಇಬ್ಬರು ಸಂಸದರು, ಬಿಜೆಪಿಯ ಒಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮರಾಠ ಕಿಚ್ಚು; ಶಾಸಕರ ಮನೆಗೆ ಬೆಂಕಿ, ಶಿಂಧೆ ಬಣದ ಇಬ್ಬರು ಸಂಸದರ ರಾಜೀನಾಮೆ!
ಮರಾಠ ಮೀಸಲಾತಿಗೆ ಆಗ್ರಹಿಸಿ ಮನೋಜ್ ಜರಾಂಗೆ ಪಾಟೀಲ್ ಅವರು ಅಕ್ಟೋಬರ್ 25ರಿಂದಲೂ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಅವರು ಆರೋಗ್ಯ ತಪಾಸಣೆಗೂ ನಿರಾಕರಿಸಿದ್ದು, ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಪ್ರತಿಭಟನೆಯ ಕಾವು ಜಾಸ್ತಿಯಾಗುತ್ತಿದೆ. ಸಾರಿಗೆ ಬಸ್‌ಗಳು ಸೇರಿ ಹಲವು ವಾಹನಗಳಿಗೆ ಬೆಂಕಿ, ಸರ್ಕಾರದ ಆಸ್ತಿಪಾಸ್ತಿಯ ಧ್ವಂಸ ಪ್ರಕರಣಗಳೂ ಹೆಚ್ಚಾಗಿವೆ. ಒಟ್ಟಿನಲ್ಲಿ ಮರಾಠ ಮೀಸಲಾತಿ ಹೋರಾಟವು ಹಿಂಸಾರೂಪ ತಾಳಿದ್ದು, ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಹಾಗಾಗಿ, ಜರಾಂಗೆ ಅವರನ್ನು ಭೇಟಿಯಾಗುವುದು, ಸರ್ವಪಕ್ಷಗಳ ಸಭೆ ಸೇರಿ ಸರ್ಕಾರ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಇಷ್ಟಾದರೂ ಪ್ರತಿಭಟನೆ ತಹಬಂದಿಗೆ ಬಂದಿಲ್ಲ.