Site icon Vistara News

Maratha Reservation: ಮರಾಠ ಮೀಸಲಾತಿ; ಮಹಾರಾಷ್ಟ್ರ ಸರ್ಕಾರದಿಂದ ಮಹತ್ವದ ನಿರ್ಧಾರ

marata

marata

ಮುಂಬೈ: ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಅದರಂತೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ (Maratha Reservation).

ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, 2018ರಲ್ಲಿ ಅಂದಿನ ರಾಜ್ಯ ಸರ್ಕಾರ ನೀಡಿದಂತೆಯೇ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಶೇಕಡಾ 10ರಷ್ಟು ಮೀಸಲಾತಿ ವಿಸ್ತರಿಸುವ ಮಸೂದೆಯನ್ನು ಮಂಡಿಸಿದರು. ಸುನಿಲ್ ಶುಕ್ರೆ ನೇತೃತ್ವದ ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗ (ಎಂಬಿಸಿಸಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಆಧಾರದ ಮೇಲೆ ಮೀಸಲಾತಿಯನ್ನು ವಿಸ್ತರಿಸಲಾಗಿದೆ.

ವರದಿಯಲ್ಲೇನಿದೆ?

21.22% ಮರಾಠರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇದು ಮಹಾರಾಷ್ಟ್ರದ ಸರಾಸರಿಗಿಂತ 17.4% ಹೆಚ್ಚು ಎಂದು ವರದಿ ಹೇಳಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರಲ್ಲಿ ಹೆಚ್ಚಿನವರು ಮರಾಠ ಸಮುದಾಯಕ್ಕೆ (94%) ಸೇರಿದವರು ಎಂದು ಅದು ಹೇಳಿದೆ. ಸಮುದಾಯವು ಕೃಷಿ ಆದಾಯದಲ್ಲಿ ಕುಸಿತ, ಭೂ ಹಿಡುವಳಿಗಳ ವಿಭಜನೆಯಂತಹ ಸಮಸ್ಯೆ ಎದುರಿಸುತ್ತಿದೆ. ಅಲ್ಲದೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯದ ಭಾಗವಹಿಸುವಿಕೆ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಸಮೀಕ್ಷೆ ವರದಿಯ ಆಧಾರದ ಮೇಲೆ ಅವರನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದವರೆಂದು ಘೋಷಿಸಲಾಗಿದೆ. ಈ ಮಧ್ಯೆ ಕೆಲವು ಮುಸ್ಲಿಂ ಮುಖಂಡರು ಸಮುದಾಯಕ್ಕೆ 5% ಮೀಸಲಾತಿ ನೀಡಬೇಕೆಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: Manoj Jarange Patil: ಮರಾಠ ಮೀಸಲಾತಿ ಹೋರಾಟಕ್ಕೆ ಜಯ; ಮನೋಜ್‌ ಜಾರಂಗೆ ಪ್ರತಿಭಟನೆ ಅಂತ್ಯ

ಹೋರಾಟ ನಡೆಸಿದ್ದ ಮನೋಜ್‌ ಜಾರಂಗೆ ಪಾಟೀಲ್‌

ಮಹಾರಾಷ್ಟ್ರದ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂದು ಇತ್ತೀಚೆಗೆ ಹೋರಾಟ ನಡೆಸುವ ಮೂಲಕ ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಂಗೆ ಪಾಟೀಲ್‌ ಸರ್ಕಾರದ ಗಮನ ಸೆಳೆದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version