ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಒಬಿಸಿ (ಇತರೆ ಹಿಂದುಳಿದ ವರ್ಗ) ಮೀಸಲಾತಿ (Maratha Reservation) ನೀಡಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟವು ಹಿಂಸಾರೂಪ ತಾಳಿದೆ. ಜಲ್ನಾ, ಬೀಡ್ ಜಿಲ್ಲೆ (Beed District) ಸೇರಿ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಯು ಹಿಂಸೆಗೆ ತಿರುಗಿದೆ. ಎನ್‌ಸಿಪಿ ಶಾಸಕರ ಮನೆಗಳಿಗೆ ಬೆಂಕಿ (Set Ablaze) ಹಚ್ಚುವುದು, ಎನ್‌ಸಿಪಿ ಹಾಗೂ ಬಿಜೆಪಿ ಶಾಸಕರ ಕಚೇರಿಗಳನ್ನು ಧ್ವಂಸಗೊಳಿಸುವುದು ಸೇರಿ ಹಲವು ರೀತಿಯಲ್ಲಿ ಪ್ರತಿಭಟನೆಯನ್ನು ಕಾವೇರಿಸಲಾಗಿದೆ.
ಬೀಡ್ ಜಿಲ್ಲೆ ಮಾಜಲಗಾಂವ್‌ನಲ್ಲಿರುವ ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ, ಇದೇ ಜಿಲ್ಲೆಯ ಮತ್ತೊಬ್ಬ ಎನ್‌ಸಿಪಿ ಶಾಸಕ ಸಂದೀಪ್ ಕ್ಷೀರಸಾಗರ ನಿವಾಸಗಳಿಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಛತ್ರಪತಿ ಶಿವಾಜಿ ನಗರದಲ್ಲಿರುವ ಬಿಜೆಪಿ ಶಾಸಕ ಪ್ರಶಾಂತ್ ಬಂಬ್ ಅವರ ಕಚೇರಿಯನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ. ಎನ್‌ಸಿಪಿ ಕಚೇರಿಗೂ ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. “ನಾವೆಲ್ಲರೂ ಮನೆಯಲ್ಲಿ ಇದ್ದಾಗಲೇ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ನಾವು ಏನು ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ” ಎಂದು ಸೋಲಂಕೆ ತಿಳಿಸಿದ್ದಾರೆ.
#WATCH | Beed, Maharashtra: Maratha reservation agitators vandalised and set the residence of NCP MLA Prakash Solanke on fire. pic.twitter.com/8uAfmGbNCI
— ANI (@ANI) October 30, 2023
ಶಿಂಧೆ ಬಣದ ಇಬ್ಬರು ಸಂಸದರ ರಾಜೀನಾಮೆ
ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಇಬ್ಬರು ಸಂಸದರು ರಾಜೀನಾಮೆ ನೀಡುವ ಮೂಲಕ ಮರಾಠ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಹಿಂಗೋಲಿ ಸಂಸದ ಹೇಮಂತ್ ಪಾಟೀಲ್ ಹಾಗೂ ನಾಶಿಕ್ ಸಂಸದ ಹೇಮಂತ್ ಗೋಡ್ಸೆ ಅವರು ಲೋಕಸಭೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಎರಡು ಹಂತಗಳಲ್ಲಿ ಮರಾಠ ಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರೂ, ಸರ್ಕಾರ, ಸಿಎಂ ಮೇಲಿನ ಅಸಮಾಧಾನದಿಂದ ಇಬ್ಬರು ಸಂಸದರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಬಿಜೆಪಿ ಶಾಸಕ ಲಕ್ಷ್ಮಣ್ ಪವಾರ್ ಅವರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ಹದಗೆಡುತ್ತಿರುವ ಜರಾಂಗೆ ಆರೋಗ್ಯ ಸ್ಥಿತಿ
ಮರಾಠ ಮೀಸಲಾತಿಗೆ ಆಗ್ರಹಿಸಿ ಮನೋಜ್ ಜರಾಂಗೆ ಪಾಟೀಲ್ ಅವರು ಅಕ್ಟೋಬರ್ 25ರಿಂದಲೂ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಸೋಮವಾರ ಅವರು ಆರೋಗ್ಯ ತಪಾಸಣೆಗೂ ನಿರಾಕರಿಸಿದ್ದು, ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಪ್ರತಿಭಟನೆಯ ಕಾವು ಜಾಸ್ತಿಯಾಗುತ್ತಿದೆ. ಸಾರಿಗೆ ಬಸ್‌ಗಳು ಸೇರಿ ಹಲವು ವಾಹನಗಳಿಗೆ ಬೆಂಕಿ, ಸರ್ಕಾರದ ಆಸ್ತಿಪಾಸ್ತಿಯ ಧ್ವಂಸ ಪ್ರಕರಣಗಳೂ ಹೆಚ್ಚಾಗಿವೆ. ಒಟ್ಟಿನಲ್ಲಿ ಮರಾಠ ಮೀಸಲಾತಿ ಹೋರಾಟವು ಹಿಂಸಾರೂಪ ತಾಳಿದ್ದು, ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.