Site icon Vistara News

ಮತ್ತೊಂದು ಮದುವೆ ಈಗಲೇ ಆಗಿ, ಯುಸಿಸಿ ಬಳಿಕ ಜೈಲು ಎಂದ ಹಿಮಂತ ಬಿಸ್ವಾ ಶರ್ಮಾ!

Himanta Biswa Sarma

Marry Again Now If You Want, Or Face Jail After UCC: Himanta Biswa Sarma To AIUDF Chief

ದಿಸ್ಪುರ: “ನನಗೆ ಈಗಲೂ ಮತ್ತೊಂದು ಮದುವೆಯಾಗುವ ತಾಕತ್ತಿದೆ” ಎಂದು ಹೇಳಿದ ಎಐಯುಡಿಎಫ್‌ ಪಕ್ಷದ ಮುಖ್ಯಸ್ಥ ಬದ್ರುದ್ದೀನ್‌ ಅಜ್ಮಲ್‌ (Badruddin Ajmal) ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ತಿರುಗೇಟು ನೀಡಿದ್ದಾರೆ. “ಮತ್ತೊಂದು ಮದುವೆಯಾಗುವುದಾದರೆ ಈಗಲೇ ಆಗಿ. ಲೋಕಸಭೆ ಚುನಾವಣೆ ಬಳಿಕ ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ (Uniform Civil Code) ಬರಲಿದ್ದು, ಆಗ ಮತ್ತೊಂದು ಮದುವೆಯಾದರೆ ಜೈಲಿಗೆ ಹೋಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಚುನಾವಣಾ ರ‍್ಯಾಲಿಯೊಂದರಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, “ಬದ್ರುದ್ದೀನ್‌ ಅಜ್ಮಲ್‌ ಅವರಿಗೆ ಇನ್ನೊಂದು ಮದುವೆಯಾಗುವ ಉಮೇದಿ ಇದೆ. ಹಾಗೊಂದು ವೇಳೆ ಅವರಿಗೆ ಮತ್ತೊಂದು ಮದುವೆಯಾಗುವ ಬಯಕೆ ಇದ್ದರೆ, ಈಗಲೇ ಮದುವೆಯಾಗಲಿ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಯುಸಿಸಿ ಜಾರಿಗೆ ಬರಲಿದೆ. ಆಗ ಬಹುಪತ್ನಿತ್ವ ಪದ್ಧತಿಯು ಕಾನೂನುಬಾಹಿರ ಎನಿಸಲಿದೆ. ಬದ್ರುದ್ದೀನ್‌ ಅಜ್ಮಲ್‌ ಅವರು ಆಗ ಮದುವೆಯಾದರೆ ಜೈಲಿಗೆ ಹೋಗಬೇಕಾಗುತ್ತದೆ” ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಬದ್ರುದ್ದೀನ್‌ ಅಜ್ಮಲ್‌ ಹೇಳಿದ್ದೇನು?

ಅಸ್ಸಾಂನ ಧುಬ್ರಿ ಕ್ಷೇತ್ರದ ಸಂಸದರೂ ಆಗಿರುವ 74 ವರ್ಷದ ಬದ್ರುದ್ದೀನ್‌ ಅಜ್ಮಲ್‌ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇತ್ತೀಚೆಗೆ ಮಾತನಾಡಿದ ಅವರು, “ಕಾಂಗ್ರೆಸ್‌ ಹಾಗೂ ಆ ಪಕ್ಷದ ಧುಬ್ರಿ ಅಭ್ಯರ್ಥಿ ರಕಿಬುಲ್‌ ಹುಸೇನ್‌ ಅವರು ನನಗೆ ವಯಸ್ಸಾಗಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ನಾನು ಇನ್ನೊಂದು ಮದುವೆಯಾಗುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇನೆ. ನಾನು ಮತ್ತೊಂದು ಮದುವೆಯಾಗಲು ಮುಖ್ಯಮಂತ್ರಿಯವರಿಗೆ ಇಷ್ಟವಿಲ್ಲದಿದ್ದರೂ, ಮತ್ತೊಂದು ಮದುವೆಯಾಗುವೆ” ಎಂದು ಹೇಳಿದ್ದರು. ಹಾಗಾಗಿ, ಹಿಮಂತ ಬಿಸ್ವಾ ಶರ್ಮಾ ಟಾಂಗ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಾಲಿ ಮುಸ್ಲಿಮರು ಬಹುಪತ್ನಿತ್ವ ತ್ಯಜಿಸಬೇಕು; ಹಿಮಂತ ಬಿಸ್ವಾ ಶರ್ಮಾ ಕಂಡಿಷನ್ಸ್‌ ಹೀಗಿವೆ

ಬಹುಪತ್ನಿತ್ವ ಪದ್ಧತಿ ಕುರಿತು ಕೆಲ ದಿನಗಳ ಹಿಂದಷ್ಟೇ ಹಿಮಂತ ಬಿಸ್ವಾ ಶರ್ಮಾ ಮಾತನಾಡಿದ್ದರು. “ಅಸ್ಸಾಂನಲ್ಲಿ ಬೆಂಗಾಲಿ ಮಾತನಾಡುವ ಬಾಂಗ್ಲಾದೇಶದ ಮುಸ್ಲಿಮರು (Miyas) ಸ್ಥಳೀಯರು ಎಂದು ಹೇಳಿಕೊಳ್ಳುತ್ತಾರೆ. ಅವರು ಅಸ್ಸಾಂನ ಸ್ಥಳೀಯರು ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಬೆಂಗಾಲಿ ಮಾತನಾಡುವ ಬಾಂಗ್ಲಾದೇಶದ ಮುಸ್ಲಿಮರು ಸ್ಥಳೀಯರು ಎಂದು ಮಾನ್ಯತೆ ಪಡೆಯಬೇಕಾದರೆ ಕೆಲ ಆಚರಣೆಗಳನ್ನು ಬಿಡಬೇಕು. ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೇ ಮದುವೆ ಮಾಡುವುದನ್ನು ನಿಲ್ಲಿಸಬೇಕು. ಅವರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬಹುಪತ್ನಿತ್ವ ಆಚರಣೆಯನ್ನು ನಿಲ್ಲಿಸಬೇಕು” ಎಂದು ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version