ನವ ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಸರಣದಲ್ಲಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಒಂದೊಂದೇ ನಿರ್ಬಂಧ ನಿಯಮಗಳು ಜಾರಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅದರ ಮೊದಲ ಹಂತವಾಗಿ ಏರ್‌ಪೋರ್ಟ್ ಮತ್ತು ವಿಮಾನಗಳಲ್ಲಿ ಕೊವಿಡ್ 19 ನಿರ್ಬಂಧ ನಿಯಮಗಳ ಕಟ್ಟುನಿಟ್ಟಿನ ಪಾಲನೆಯಾಗಬೇಕು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಹೇಳಿದೆ. ಅದರಲ್ಲೂ ಮಾಸ್ಕ್ ಕಡ್ಡಾಯವಾಗಿದೆ (Mask compulsory in Airport). ʼಮಾಸ್ಕ್ ಧರಿಸದ, ಮಾಸ್ಕ್‌ನ್ನು ಗಲ್ಲದ ಮೇಲೆ ಇಟ್ಟುಕೊಂಡು ಬರುವ ಪ್ರಯಾಣಿಕರಿಗೆ ಮೊದಲು ಎಚ್ಚರಿಸಿ. ಅಷ್ಟಾದರೂ ನಿಯಮಗಳನ್ನು ಪಾಲಿಸಲು ಅವರು ಒಪ್ಪದೆ ಇದ್ದರೆ ಅವರಿಗೆ ವಿಮಾನ ಹತ್ತಲು ಅವಕಾಶ ಕೊಡಬೇಡಿʼ ಎಂದು ಏರ್‌ಪೋರ್ಟ್‌ಗಳಿಗೆ ಸೂಚಿಸಿದೆ. ʼವಿಮಾನ ಹತ್ತಿದ ಮೇಲೆ ಅವರು ಕೊವಿಡ್ 19 ನಿಯಮಗಳ ಪಾಲನೆ ಮಾಡಲು ಒಪ್ಪದೆ ಇದ್ದರೆ ಅವರನ್ನು ಅಶಿಸ್ತಿನ ಪ್ರಯಾಣಿಕರು ಎಂದು ಪರಿಗಣಿಸಿ, ಆ ಪಟ್ಟಿಯಲ್ಲಿ ಸೇರಿಸಿʼ ಎಂದೂ ಹೇಳಿದೆ.
ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರು ಸರಿಯಾಗಿ ಮಾಸ್ಕ್ ಧರಿಸಿದ್ದಾರಾ? ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರಾ-ಇಲ್ಲವಾ ಎಂಬುದನ್ನು ಸಿಐಎಸ್‌ಎಫ್ ಸಿಬ್ಬಂದಿ ಗಮನಿಸಲಿದ್ದಾರೆ. ಈ ಬಗ್ಗೆ ಸಂಪೂರ್ಣ ಉಸ್ತುವಾರಿ ಸಿಐಎಸ್‌ಎಫ್‌ದೇ ಆಗಿರುತ್ತದೆ. ಇತ್ತೀಚೆಗಷ್ಟೇ ದೆಹಲಿ ಹೈಕೋರ್ಟ್ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿತ್ತು. ʼವಿಮಾನ ಪ್ರಯಾಣಿಕರು ಏರ್‌ಪೋರ್ಟ್‌ಗಳಲ್ಲಿ ಮಾಸ್ಕ್ ಸರಿಯಾಗಿ ಧರಿಸದೆ ಇದ್ದರೆ, ಸ್ವಚ್ಛತೆ ಪಾಲನೆ ಮಾಡದೆ ಇದ್ದರೆ ಅಂಥವರನ್ನು ವಿಮಾನ ಹತ್ತಿಸಲೇಬೇಡಿ ಎಂದು DGCAಗೆ ಸೂಚಿಸಿತ್ತು.
2021ರ ಮಾರ್ಚ್ ನಲ್ಲಿ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರು ಕೋಲ್ಕತ್ತಕ್ಕೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಏರ್‌ಪೋರ್ಟ್‌ನಲ್ಲಿ ಹಲವು ಪ್ರಯಾಣಿಕರು ಕೊರೊನಾ ನಿಯಂತ್ರಣ ನಿಯಮಗಳ ಪಾಲನೆ ಮಾಡದೆ ಇರುವುದನ್ನು ಗಮನಿಸಿದ್ದರು. ಅನೇಕರು ತಮ್ಮ ಮಾಸ್ಕನ್ನು ಗಲ್ಲದ ಮೇಲೆ ಹಾಕಿಕೊಂಡು ಓಡಾಡುತ್ತಿರುವುದನ್ನ ನೋಡಿದ್ದ ನ್ಯಾಯಮೂರ್ತಿ, ಈ ವಿಷಯವನ್ನು ಸ್ವಯಂಪ್ರೇರಿತ ವಿಚಾರಣೆಗೆ ಎತ್ತಿಕೊಂಡಿದ್ದರು. ಆಗಿನಿಂದ ಶುರುವಾಗಿದ್ದ ವಿಚಾರಣೆ ತೀರ್ಪನ್ನು ಕೊಟ್ಟಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾ.. ಸಚಿನ್ ದತ್ತಾ ಅವರನ್ನೊಳಗೊಂಡ ಪೀಠ, ಏರ್‌ಪೋರ್ಟ್ ಮತ್ತು ವಿಮಾನಗಳಲ್ಲಿ ಕೊವಿಡ್ 19 ನಿರ್ಬಂಧ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯಾ ಎಂಬುದನ್ನು ಗಮನಿಸುವ ಜವಾಬ್ದಾರಿ DGCAಯದ್ದು ಎಂದು ಹೇಳಿತ್ತು.
ಇದನ್ನೂ ಓದಿ: ಕೊರೊನಾ ವೈರಸ್ 4ನೇ ಅಲೆ ಭೀತಿ; ಇಂದು 5 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ