Site icon Vistara News

Skydiving: ಸ್ಕೈಡೈವಿಂಗ್‌ ಮಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್‌; ಮೈನವಿರೇಳಿಸುವ ವಿಡಿಯೊ ಇಲ್ಲಿದೆ

Skydiving

'Maza Aa Gaya': Union Minister Gajendra Singh Shekhawat Skydives On World Skydiving Day‌

ನವದೆಹಲಿ: ರಾಜಕಾರಣಿಗಳು ಎಂದರೆ ಸಾಮಾನ್ಯವಾಗಿ ವೇದಿಕೆಗಳಲ್ಲಿ ಅಬ್ಬರದ ಭಾಷಣ ಮಾಡುವುದು, ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸುವುದು ಸೇರಿ ಹತ್ತಾರು ಚಟುವಟಿಕೆಗಳಲ್ಲಿ ಭಾಗಿಯಾಗುವುದೇ ಅವರ ನಿತ್ಯ ಕಾಯಕವಾಗಿರುತ್ತದೆ. ಹೆಚ್ಚೆಂದರೆ, ರಾಜಕಾರಣಿಗಳು (Politicians) ಮದುವೆ ಸೇರಿ ಕೆಲ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಸಾಹಸ ಕ್ರೀಡೆಗಳಲ್ಲಿ ರಾಜಕಾರಣಿಗಳು ಆಸಕ್ತಿ ಹೊಂದುವುದು, ಪಾಲ್ಗೊಳ್ಳುವುದು ಅಪರೂಪ. ಆದರೆ, ಇದಕ್ಕೆ ಅಪವಾದ ಎಂಬಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ (Gajendra Singh Shekhawat) ಅವರು ಸ್ಕೈಡೈವಿಂಗ್‌ (Skydiving) ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಶನಿವಾರ (ಜುಲೈ 13) ವಿಶ್ವ ಸ್ಕೈಡೈವಿಂಗ್‌ ದಿನವಾದ (World Skydiving Day) ಕಾರಣ ಹರಿಯಾಣದ ನರ್ನೌಲ್‌ ಏರ್‌ಸ್ಟ್ರಿಪ್‌ನಲ್ಲಿರುವ ಏಕೈಕ ನಾಗರಿಕ ಸ್ಕೈಡೈವಿಂಗ್‌ ಡ್ರಾಪ್‌ ಜೋನ್‌ನಲ್ಲಿ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಸ್ಕೈಡೈವಿಂಗ್‌ ಮಾಡಿದರು. ಸ್ಕೈಡೈವಿಂಗ್‌ಗೂ ಮುನ್ನ ಕೇಂದ್ರ ಸಚಿವರು ಪರಿಣತರಿಂದ ಸ್ಕೈಡೈವಿಂಗ್‌ ಕುರಿತು ಮಾಹಿತಿ ಪಡೆದರು. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿದುಕೊಂಡರು. ನಂತರ ಅವರು ಆಗಸದೆತ್ತರಕ್ಕೆ ತೆರಳಿ, ಅಲ್ಲಿಂದ ಸ್ಕೈಡೈವ್‌ ಮಾಡಿದರು. 56 ವರ್ಷದ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಸ್ಕೈಡೈವಿಂಗ್‌ ಮಾಡಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಇನ್ನೊಬ್ಬ ಸ್ಕೈಡೈವರ್‌ ನೆರವಿನೊಂದಿಗೆ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಸ್ಕೈಡೈವ್‌ ಮಾಡಿದ್ದಾರೆ. ಆಗಸದಲ್ಲಿಯೇ ಮತ್ತೊಬ್ಬ ಸ್ಕೈಡೈವರ್‌ “ಹೇಗೆ ಅನಿಸುತ್ತಿದೆ” ಎಂಬ ಪ್ರಶ್ನೆಗೆ ಕೇಂದ್ರ ಸಚಿವರು, ” ಗುಡ್‌ ಗುಡ್‌, ಮಜಾ ಬಂತು” ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಸ್ಕೈಡೈವಿಂಗ್‌ಗೂ ಮೊದಲು ಅವರು “ನಾನು ತುಂಬ ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದರು. ಸ್ಕೈಡೈವಿಂಗ್‌ ಬಳಿಕ ಅವರು ಸುರಕ್ಷಿತವಾಗಿ ಲ್ಯಾಂಡ್‌ ಆದರು. ಇದಾದ ಬಳಿಕ ಅವರು ತಮಗೆ ಆದ ಅನುಭವವನ್ನು ಹಂಚಿಕೊಂಡರು.

” ಸ್ಕೈಡೈವಿಂಗ್‌ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಸಂತಸ ತಂದಿದೆ. ಇದು ನನ್ನ ಜೀವನದ ಥ್ರಿಲ್ಲಿಂಗ್‌ ದಿನಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ ಸ್ಕೈಡೈವಿಂಗ್‌ ಮಾಡುವುದು, ಈ ಏರೋಸ್ಪೋರ್ಟ್‌ಗೆ ಉತ್ತೇಜನ ನೀಡುವುದು ಪ್ರಮುಖ ಸಂಗತಿಯಾಗಿದೆ. ಅದರಲ್ಲೂ, ಇದೇ ಮೊದಲ ಬಾರಿಗೆ ವಿಶ್ವ ಸ್ಕೈಡೈವಿಂಗ್‌ ಡೇ ಆಚರಿಸಲಾಗುತ್ತಿದೆ. ಏರೋಸ್ಪೋರ್ಟ್ಸ್‌ ಹಾಗೂ ಪ್ರವಾಸೋದ್ಯಮವು ಇಂದಿನಿಂದ ಇನ್ನಷ್ಟು ಬಲಿಷ್ಠವಾಗಲಿದೆ ಎಂಬ ನಂಬಿಕೆ ಇದೆ” ಎಂದು ಅವರು ಲ್ಯಾಂಡ್‌ ಆದ ಬಳಿಕ ಹೇಳಿದರು.

ಇದನ್ನೂ ಓದಿ: Viral Video: ʼಡ್ಯೂಟಿ ಮುಗಿದ ಮೇಲೆ ಮನೆ ಬಾʼ ಎಂದು ಕರೆದ ASI; ಆಮೇಲೆ ಆಗಿದ್ದೇ ಬೇರೆ! ಸ್ಪೈಸ್‌ಜೆಟ್‌ ಸಿಬ್ಬಂದಿ ವಿಡಿಯೋ ವೈರಲ್‌

Exit mobile version