ನವದೆಹಲಿ: ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿ (MCD)ಯ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆಫ್ ಕೌನ್ಸಿಲರ್‌ಗಳ ಮಧ್ಯೆ ನಡೆಯುತ್ತಿರುವ ಗಲಾಟೆಯೀಗ (Delhi MCD Ruckus) ಬೀದಿಗೆ ಬಂದಿದೆ. ಮೇಯರ್ ಚುನಾವಣೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು, ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಇಂತಹವರಿಗೆ ನಾವು ಮತ ಹಾಕಿದೆವಾ ಎಂದು ಜನ ಬೇಸರ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಕಾದಾಟ ತಾರಕಕ್ಕೇರಿದೆ.
ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್ ಪ್ರತಿಭಟನೆ
ಲೆಫ್ಟಿನೆಂಟ್ ಗವರ್ನರ್ ಅವರು ಮಹಾನಗರ ಪಾಲಿಕೆಯ ಸ್ಪೀಕರ್ ಆಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನು ನೇಮಿಸಿದ ಕಾರಣ ಬಿಜೆಪಿ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಆಪ್ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್ ಕೌನ್ಸಿಲರ್‌ಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲೆ ಜಲಫಿರಂಗಿ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದು, ಗುಂಪನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿಯ ಇಬ್ಬರು ಮಹಿಳಾ ಕೌನ್ಸಿಲರ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಇದರಿಂದಾಗಿ ಪೊಲೀಸರು ಜಲಫಿರಂಗಿ ಪ್ರಯೋಗಿಸಬೇಕಾಯಿತು.
ಏಕೆ ಇಷ್ಟೊಂದು ಗಲಾಟೆ?
ಜನವರಿ 6ರಂದು ನಡೆದ ಮೊದಲ ಸಭೆಯ ವೇಳೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುತ್ತಿದ್ದಂತೆ ಸಭೆಯಲ್ಲಿ ಸಂಘರ್ಷ ಶುರುವಾಯಿತು. ಶರ್ಮಾ ಅವರು ಮೊದಲಿಗೆ, ನಾಮನಿರ್ದೇಶನಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪ್ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರಿಗಿಂತ ಮೊದಲು, ಚುನಾಯಿತ ಸದಸ್ಯರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಪಟ್ಟು ಹಿಡಿದರು. ಆಗ ಬಿಜೆಪಿ ಮತ್ತು ಆಪ್ ಸದಸ್ಯರ ಮಧ್ಯೆ ಜಟಾಪಟಿ ಶುರುವಾಯಿತು.
ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ 10 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಕ್ಸೇನಾ ಅವರು ಶುಕ್ರವಾರ ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಎಂದು ಘೋಷಿಸಿದರು. ಮೇಯರ್ ಆಯ್ಕೆಯ ಹಿನ್ನೆಲೆಯು ಆಪ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ | Delhi Mayor Polls | ಮಾರಾಮಾರಿ ನಡುವೆ ದಿಲ್ಲಿ ಪಾಲಿಕೆ ಸಭೆ ಮುಂದೂಡಿಕೆ, ನಡೆಯಲಿಲ್ಲ ಮೇಯರ್ ಎಲೆಕ್ಷನ್!