ನವದೆಹಲಿ: ಎಂಡಿಎಚ್, ಎವರೆಸ್ಟ್ ಮಸಾಲೆ (MDH, Everest Spices) ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್ ಆಕ್ಸೈಡ್ (Ethylene oxide) ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ. ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ ಜನಪ್ರಿಯ ಕಂಪನಿಗಳ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿರುವುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದರ ಬೆನ್ನಲ್ಲೇ ಎರಡು ಕಂಪನಿಗಳ ಉತ್ಪನ್ನಗಳನ್ನು ಈಗಾಗಲೇ ಹಾಂಗ್ ಕಾಂಗ್ (Hong Kong) ಮತ್ತು ಸಿಂಗಾಪುರ (Singapore)ದಲ್ಲಿ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ.
ಇನ್ನು ಅಪಾಯಕಾರಿ ಕೆಮಿಕಲ್‌ಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.
ರಾಮಯ್ಯ ಅಡ್ವಾನ್ಸ್ಡ್ ಟೆಸ್ಟಿಂಗ್ ಲ್ಯಾಬ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜುಬಿನ್ ಜಾರ್ಜ್ ಜೋಸೆಫ್, ಎಥಿಲೀನ್ ಆಕ್ಸೈಡ್‌ನ ಉಪಉತ್ಪನ್ನವಾದ ಎಥಿಲೀನ್ ಗ್ಲೈಕೋಲ್‌ನಿಂದ ಉಂಟಾಗುವ ಅಪಾಯಗಳನ್ನು ಎತ್ತಿ ತೋರಿಸಿದ್ದರು. ಇದು ಈ ಹಿಂದೆ ಕೆಮ್ಮಿನ ಸಿರಪ್‌ಗಳಲ್ಲೂ ಪತ್ತೆಯಾಗಿತ್ತು. ಇದರಿಂದ ಆಫ್ರಿಕಾದಲ್ಲಿ ಸಾವಿಗೆ ಕಾರಣವಾಗಿತ್ತು.
ಸಿಂಗಾಪುರದಲ್ಲಿ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ ತಯಾರಕ ಎಂಡಿಚ್ ಮತ್ತು ಎವರೆಸ್ಟ್‌ನ ಮಸಾಲಾ ಮಾರಾಟ ನಿಷೇಧಗೊಳಿಸಿದ ಬೆನ್ನಲ್ಲೇ, ಹಾಂಕಾಂಗ್‌ನಲ್ಲೂ ಭಾರತದ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಹಾಗಾಗಿ, ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ. ಇದರ ಪರಿಣಾಮ ಭಾರತದ ಉತ್ಪನ್ನಗಳ ಮೇಲೂ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್ ರಾಸಾಯನಿಕ ಇರುವ ಕಾರಣ ಹಾಂಕಾಂಗ್ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಎಂಡಿಎಚ್‌ನ ಕರಿ ಪೌಡರ್, ಮಿಕ್ಸ್ಡ್ ಮಸಾಲಾ ಪೌಡರ್ ಹಾಗೂ ಸಾಂಬಾರ್ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.
ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಉತ್ಪನ್ನದ ಸ್ಯಾಂಪಲ್ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್ ಎಥಿಲೀನ್ ಆಕ್ಸೈಡ್ ಪತ್ತೆಯಾಗಿದೆ. ಈ ಆಕ್ಸೈಡ್ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್ ಕಾರಕ ಕಾರ್ಸಿನೋಜೆನಿಕ್ ರಾಸಾಯನಿಕವೂ ಪತ್ತೆಯಾಗಿತ್ತು. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ ಎಂಬುದಾಗಿ ಹಾಂಕಾಂಗ್‌ನ ಸೆಂಟರ್ ಫಾರ್ ಫುಡ್ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್ 5ರಂದೇ ಆದೇಶ ಹೊರಡಿಸಿದೆ.