ಹೊಸದಿಲ್ಲಿ: ಮಾನನಷ್ಟ ಮೊಕದ್ದಮೆ(Defamation Case)ಯಲ್ಲಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ, ನರ್ಮದಾ ಬಚಾವೋ ಹೋರಾಟಗಾರ್ತಿ ಮೇಧಾ ಪಾಟ್ಕರ್(Medha Patkar) ಅವರು ಐದು ತಿಂಗಳ ಸರಳ ಸಜೆಗೆ ಗುರಿಯಾಗಿದ್ದಾರೆ. ಮೇಧಾ ವಿರುದ್ಧದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ(Vinay Kumar Saxena) ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ದಿಲ್ಲಿಯ ಸಾಕೇತ್ ಕೋರ್ಟ್(Delhi Saket Court) ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಇದೀಗ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ಘೋಷಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಸಕ್ಸೇನಾ ಅವರಿಗೆ 10ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಆ.1ರವರೆಗೆ ಆಕೆಯ ಶಿಕ್ಷೆಯ ವಿನಾಯಿತಿ ನೀಡಿದ್ದು, ಅಲ್ಲಿವರೆಗೆ ಆಕೆಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಕರಣದ ಗಂಭೀರತೆ, ಮೇಧಾ ಪಾಟ್ಕರ್ ಅವರ ವಯಸ್ಸು ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರಳ ಸಜೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಮೇಧಾ ಪ್ರತಿಕ್ರಿಯೆ
ಇನ್ನು ಶಿಕ್ಷೆಯ ಪ್ರಮಾಣ ಘೋಷಣೆಯಾಗುತ್ತಲ್ಲೇ ಈ ಬಗ್ಗೆ ಮೇಧಾ ಪಾಟ್ಕರ್ ಪ್ರತಿಕ್ರಿಯಿಸಿದ್ದು, ಸತ್ಯ ಎಂದಿಗೂ ಸಾಯಲ್ಲ. ನಾವು ಯಾರನ್ನೂ ಅವಮಾನಿಸಿಲ್ಲ. ನಾವು ನಮ್ಮ ಕೆಲಸವನ್ನಷ್ಟೇ ಮಾಡಿದ್ದೇವೆ. ತೀರ್ಪನ್ನು ಪ್ರಶ್ನಿಸಿ ಮೆಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.
ಏನಿದು ಪ್ರಕರಣ?
ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಮತ್ತು ಮೇಧಾ ಅವರ ನಡುವೆ 2000ರಿಂದಲೂ ಕಾನೂನು ಸಮರ ನಡೆಯುತ್ತಿದೆ. ಸಕ್ಸೇನಾ ಅವರು ಆಗ ಗುಜರಾತ್‌ನ ಅಹಮದಾಬಾದ್ ಮೂಲದ ‘ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್’ ಎನ್‌ಜಿಒದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮೇಧಾ ಪಾಟ್ಕರ್ ಅವರು ಟಿವಿ ಸಂದರ್ಶನದಲ್ಲಿ ಸಕ್ಸೇನಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಆಗ ತಮ್ಮ ಹಾಗೂ ಎನ್‌ಬಿಎ (ನರ್ಮದಾ ಬಚಾವೋ ಆಂದೋಲನ) ವಿರುದ್ಧ ಸಕ್ಸೇನಾ ಅವರು ಜಾಹೀರಾತು ಪ್ರಕಟಿಸಿದ್ದಾರೆ ಎಂದು ಮೇಧಾ ಅವರು ದೂರು ಸಲ್ಲಿಸಿದ್ದರು.2006ರಲ್ಲಿ ಟಿವಿ ಚಾನೆಲ್ ಒಂದರಲ್ಲಿ ತಮ್ಮ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಮತ್ತು ಅವಮಾನಕರ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ ಎಂದು ಆರೋಪಿಸಿ ಸಕ್ಸೇನಾ ಅವರು ಎರಡು ಪ್ರಕರಣಗಳನ್ನು ಮೇಧಾ ಪಾಟ್ಕರ್ ಅವರ ವಿರುದ್ಧ ದಾಖಲಿಸಿದ್ದರು.
2006ನೇ ಇಸವಿಯಲ್ಲಿ ದಾಖಲಿಸಿದ್ದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ದಿಲ್ಲಿಯ ಸಾಕೇತ್ ಕೋರ್ಟ್ ಮೆಟ್ರೋ ಪಾಲಿಟನ್ ಮ್ಯಾಜಿಸ್ಪ್ರೇಟ್ ರಾಘವ್ ಶರ್ಮಾ ಅವರು, ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದರು.