Site icon Vistara News

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸ್ಮರಣೆ | ಬ್ರಿಟಿಷರ ಎದುರು ದುರ್ಗೆಯಂತೆ ಹೋರಾಡಿದ ವೀರಾಗ್ರಣಿ

Jhansi Rani Lakshmibai

| ಮಯೂರಲಕ್ಷ್ಮಿ

ಬ್ರಿಟಿಷರ ವಿರುದ್ಧ ಭಾರತದಲ್ಲಿ ನಡೆದ ಸ್ವಾತಂತ್ರ ಸಂಗ್ರಾಮದಲ್ಲಿ ಅನೇಕ ಸಾಹಸಿಗಳು ಮತ್ತು ಕ್ರಾಂತಿಕಾರಿಗಳು ಬಲಿದಾನಿಗಳಾದರು. ಅಂತಹ ಸಮರವೀರ ಪರಂಪರೆಯಲ್ಲಿ ಅಗ್ರಸ್ಥಾನ ಪಡೆದ ಸಾಹಸಿ, ದುರ್ಗೆಯಂತೆ ಹೋರಾಡಿ ಬ್ರಿಟಿಷರನ್ನು ನಡುಗಿಸಿದ ವೀರನಾರಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ.

ವಿವಿಧ ಒಪ್ಪಂದಗಳು ಮತ್ತು ದೌರ್ಜನ್ಯದಿಂದ ರಾಜ್ಯಗಳನ್ನು ಮತ್ತು ಹೊಸ ಕಂದಾಯ ನೀತಿ ಕಾನೂನುಗಳಿಂದ ರೈತರು, ಜಮೀನುದಾರರ ಭೂಮಿಯನ್ನು ಬ್ರಿಟಿಷರು ಕಸಿದುಕೊಂಡರು. ಅನೇಕ ಪ್ರಾಂತಗಳು ಅವರ ಕೈವಶವಾದವು. ಎರಡನೆಯ ಬಾಜೀರಾವ್ ಪುತ್ರ ನಾನಾಸಾಹೇಬ ಪೇಶ್ವಾನ ರಾಜ್ಯವನ್ನು ವಶಪಡಿಸಿಕೊಂಡಾಗ ನಾನಾ ಸಾಹೇಬ ಬ್ರಿಟಿಷರ ವಿರುದ್ಧ ಹೋರಾಡಲು ಸಜ್ಜಾದರು. ಅವರಿಗೆ ಹೆಗಲು ಕೊಟ್ಟು ಬ್ರಿಟಿಷರನ್ನೆದುರಿಸಿದವರು ತಾಂತಿಯಾ ಟೋಪೆ ಮತ್ತು ನಾನಾ ಸಾಹೇಬರ ಸಹೋದರ ಸಂಬಂಧಿ ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ.

೧೯ ನವೆಂಬರ್, ೧೮೨೮ ವಾರಣಾಸಿಯಲ್ಲಿ ಮರೋಪಂತ್ ತಾಂಬೇಯವರ ಪುತ್ರಿಯಾಗಿ ಜನಿಸಿದ “ಮಣಿಕರ್ಣಿಕಾ” ಧೈರ್ಯಶಾಲಿ ಮತ್ತು ಪರಾಕ್ರಮಿ. ಆ ಬಾಲಕಿಗೆ ಕುದುರೆ ಸವಾರಿ, ಕತ್ತಿವರಸೆ, ಬಿಲ್ವಿದ್ಯೆ, ಮಲ್ಲಕಂಭ ಮುಂತಾದ ಯುದ್ಧ ವಿದ್ಯೆಗಳೊಂದಿಗೆ ರಾಜನೀತಿಯ ಪ್ರಶಿಕ್ಷಣ ನೀಡಲಾಗಿತ್ತು. ೧೪ ವರ್ಷದ ಮಣಿಕರ್ಣಿಕಾಳನ್ನು ಝಾನ್ಸಿಯ ಮಹಾರಾಜ ರಾಜ ಬಾಲಗಂಗಾಧರ ರಾವ್ ನೇವಾಳ್ಕರ ಅವರಿಗೆ ಕೊಟ್ಟು ವಿವಾಹ ಮಾಡಿದರು. ಝಾನ್ಸಿ ಸಂಸ್ಥಾನದಲ್ಲಿ ಮಣಿಕರ್ಣಿಕಾ ಹೆಸರು ಲಕ್ಷ್ಮಿಬಾಯಿ ಎಂದು ಬದಲಾಯಿತು. ಮಹಾರಾಣಿಯಾದ ನಂತರ ಲಕ್ಷ್ಮಿಬಾಯಿ ತನ್ನ ಸಂಸ್ಥಾನದ ಮಹಿಳೆಯರಿಗೆ ತರಬೇತಿ ನೀಡಿ ಅವರ ಸೇನೆಯನ್ನು ಸಿದ್ಧಪಡಿಸಿದರು.

ಮಹಾರಾಜ ದಂಪತಿಗಳಿಗೊಂದು ಆಘಾತ ಕಾದಿತ್ತು. ತಮ್ಮ ೪ ತಿಂಗಳ ಕಂದನ ಅಕಾಲಿಕ ಮೃತ್ಯುವಿನಿಂದ ದುಃಖಿತರಾದ ರಾಜ ದಂಪತಿಗಳು ದಾಮೋದರ ರಾವ್ ಎನ್ನುವ ಮಗುವನ್ನು ದತ್ತು ಪಡೆದರು. ದುರಾದೃಷ್ಟವಶಾತ್ ರಾಜ ಬಾಲಗಂಗಾಧರ ರಾವ್ ಹೃದಯಾಘಾತದಿಂದ ಅಸುನೀಗಿದರು. ಪತಿಯನ್ನು ಕಳೆದುಕೊಂಡರೂ ರಾಣಿ ಧೃತಿಗೆಡದೆ ಮುಂದೆ ರಾಜ್ಯಾಭಾರದ ಹೊಣೆಯನ್ನು ಹೊರಲು ನಿರ್ಧರಿಸಿದರು. ದತ್ತು ಪುತ್ರ ದಾಮೋದರ ರಾವ್‌ಗೆ ಯುವರಾಜ ಪಟ್ಟಾಬಿಷೇಕ ನಡೆಯಿತು.

ಲಾರ್ಡ್ ಡಾಲ್‌ಹೌಸಿ ರಾಜ್ಯದಲ್ಲಿ ಸ್ವಂತ ಮಕ್ಕಳಿಲ್ಲದ ಕಾರಣ “ಡಾಕ್ಟ್ರಿನ್ ಆಫ್ ಲ್ಯಾಪ್ಸ್” ಕಾನೂನು ರೀತ್ಯಾ ಝಾನ್ಸೀಯನ್ನು ಬ್ರಿಟಿಷ್ ಸರಕಾರದ ಆಳ್ವಿಕೆಗೆ ಒಪ್ಪಿಸಬೇಕೆಂದು ಫರ್ಮಾನು ಹೊರಡಿಸಿದ. ಝಾನ್ಸಿ ಬ್ರಿಟಿಷ್ ಆಡಳಿತದ ಸುಪರ್ದಿಗೆ ಸೇರಿತು.
ಝಾನ್ಸಿ ರಾಣಿ ಕಾನೂನಾತ್ಮಕವಾಗಿ ಹೋರಾಟಕ್ಕೆ ಮುಂದಾದರು. “ನನ್ನ ಝಾನ್ಸಿಯನ್ನು ಎಂದೆಂದೂ ಕೊಡಲಾರೆ” ಎಂದು ಘರ್ಜಿಸಿದ ಲಕ್ಷ್ಮೀ ಬಾಯಿ ಬ್ರ‍್ರಿಟಿಷ್ ಸೇನೆಯ ವಿರುದ್ಧ ಯುದ್ಧವನ್ನು ಘೋಷಿಸಿದರು.

ಭಾರತದ ಕ್ಷಾತ್ರ ಬಲವನ್ನು ಕೇವಲವಾಗಿ ಕಂಡಿದ್ದ ಬ್ರಿಟಿಷ್ ಸೇನೆ ಮೊದಲ ಬಾರಿ ಕಂಪಿಸಿತು. ನಾನಾ ಸಾಹೇಬ ಮತ್ತು ತಾಂತಿಯಾ ಟೋಪೆಯ ಸೇನೆಗಳ ಬೆಂಬಲದೊಂದಿಗೆ ಬ್ರಿಟಿಷ್ ಸೇನೆಯನ್ನು ಝಾನ್ಸಿ ಸೇನೆ ಹಿಮ್ಮೆಟ್ಟಿಸಿತು. ಬ್ರಿಟಿಷ್ ಆಳ್ವಿಕೆಯ ಚಿಹ್ನೆಯಾಗಿ ಝಾನ್ಸಿಯ ಕೋಟೆ ಮತ್ತು ಅರಮನೆಯ ಮೇಲೆ ಹಾರಿಸಲಾಗಿದ್ದ “ಯೂನಿಯನ್ ಜಾಕ್” ಧ್ವಜವನ್ನು ಎಳೆದು ಸ್ವತಂತ್ರ ಝಾನ್ಸಿಯ ಧ್ವಜವನ್ನು ಹಾರಿಸಿದರು. ವಿಜಯದ ಸಂಭ್ರಮಾಚರಣೆಯಾಯಿತು.

ಯುದ್ಧದಲ್ಲಿ ಸೋತು ಹೋಗಿದ್ದ ಬ್ರಿಟಿಷರನ್ನು ರಾಣಿಯ ಸೈನಿಕರು ಝಾನ್ಸಿ ನಗರದುದ್ದಕ್ಕೂ ಎಳೆದೊಯ್ದರು. ಬ್ರಿಟಿಷ್ ಸೇನೆ ಗಾಯಗೊಂಡ ಹುಲಿಯಂತಾಗಿದ್ದು ಝಾನ್ಸಿ ರಾಣಿಯನ್ನು ಮುಗಿಸದಿದ್ದರೆ ಕ್ರಾಂತಿಯ ಜ್ವಾಲೆ ಹೆಚ್ಚಾಗಿ ತಮಗೆ ಭಾರತದಲ್ಲಿ ಉಳಿಗಾಲವಿಲ್ಲ ಎಂದು ಅರಿತರು. ಬ್ರಿಟಿಷ್ ಜನರಲ್ ಸರ್ ಹಘ್ ರೋಸ್ ತನ್ನ ಸೈನ್ಯದೊಂದಿಗೆ ಝಾನ್ಸಿಯನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿದ. ಝಾನ್ಸಿಯ ನೆರವಿಗೆ ಸುಮಾರು ೨೦,೦೦೦ ಸೈನಿಕರೊಂದಿಗೆ ತಾಂತಿಯಾ ಟೋಪೆ ಧಾವಿಸಿದರು.

ಆದರೆ ಕೇವಲ ೧,೫೪೦ ಸೈನಿಕರೊಂದಿಗೆ ಪ್ರಬಲ ಶಸ್ತ್ರಾಸ್ತ್ರಗಳಿಂದ ಬ್ರಿಟಿಷ್ ಸೇನೆ ಗ್ವಾಲಿಯರ್‌ನ ಬಳಿ ಅವನನ್ನು ಹಿಮ್ಮೆಟ್ಟಿಸಿತು. ಒಂಬತ್ತು ಹಗಲು ಮತ್ತು ಒಂಬತ್ತು ರಾತ್ರಿಯವರೆಗೂ ಘೋರ ಯುದ್ಧ ನಡೆಯಿತು. ಪುಟ್ಟ ಕಂದನನ್ನು ಬೆನ್ನ ಹಿಂದೆ ಕಟ್ಟಿ, ವೀರಪೋಷಾಕಿನಲ್ಲಿ ತನ್ನ ಕುದುರೆಯನ್ನೇರಿದ ರಾಣಿಯು ಝಾನ್ಸಿಯ ಕೋಟೆಯುದ್ದಕ್ಕೂ ಕತ್ತಿಯನ್ನು ಝಳಪಿಸುತ್ತಾ ಸತತವಾಗಿ ಹೋರಾಡಿದರು. ಬ್ರಿಟಿಷರು ಝಾನ್ಸಿಯನ್ನು ಬಹುತೇಕ ವಶಪಡಿಸಿಕೊಂಡ ನಂತರ ಕೋಟೆಯನ್ನು ಮುತ್ತಿಗೆ ಹಾಕಿದರು.

ಅಪಾಯವನ್ನರಿತ ರಾಣಿ ಆಪ್ತ ಸೈನಿಕರೊಂದಿಗೆ ಹೊರಟರು. ತನ್ನ ಕುದುರೆಯೊಡನೆ ಎತ್ತರದ ಗೋಡೆಯಿಂದ ಹಾರಿ ಧುಮುಕಿ ಸಾಗುತ್ತಾ “ಕಲ್ಪಿ” ತಲುಪಿದರು. ಅಲ್ಲಿಂದ ಗ್ವಾಲಿಯರ್‌ನತ್ತ ಪಯಣ. ಮತ್ತೆ ಕದನ ಆರಂಭವಾಯಿತು. ಜೂನ್ ೧೮, ಯುದ್ಧದ ಕೊನೆಯ ದಿನ ಬ್ರಿಟಿಷರ ೮ನೆಯ ಹುಸ್ಸಾರ್ ಸೇನೆ ೫ ಸಾವಿರ ಭಾರತೀಯ ಯೋಧರನ್ನು ಬಲಿತೆಗೆದುಕೊಂಡಿತು. ಎದೆಗುಂದದೆ ರಾಣಿ ಹೋರಾಡುತ್ತಲೇ ಇದ್ದರು. ಅನೇಕ ವೀರರು ಬಲಿಯಾದರು.‌

ಇದನ್ನೂ ಓದಿ | 152ನೆ ಜನ್ಮದಿನ | ವಾಸುದೇವ ಬಲವಂತ ಫಡ್ಕೆ | ಕ್ರಾಂತಿವೀರನ ನೆನಪು

ತಮ್ಮ ಕುದುರೆ “ಬಾದಲ್” ಗಾಯಗೊಂಡು ಮೃತಪಟ್ಟಾಗ ಮತ್ತೊಂದು ಕುದುರೆಯನ್ನೇರಿ ಮುಂದೆ ಸಾಗಿ, ನದಿಯನ್ನು ದಾಟತೊಡಗಿದರು. ನಾಲ್ಕು ನೂರು ಬ್ರಿಟಿಷ್ ಸೈನಿಕರು ಹಿಂಬಾಲಿಸುತ್ತಿದ್ದರು. ಅನತಿ ದೂರದಲ್ಲಿ ಹಿಂಬಾಲಿಸುತ್ತಿದ್ದ ಬ್ರಿಟಿಷ್ ಸೈನಿಕನೊಬ್ಬ ರಾಣಿಯನ್ನು ಗುರುತಿಸಿ ಹಿಂದಿನಿಂದ ಹೊಡೆದನು. ಮುಂದೆ ಸಾಗಿದರು. ಗುಂಡಿನ ದಾಳಿಯಿಂದ ರಕ್ತಸಿಕ್ತವಾಗಿದ್ದ ಅವರನ್ನು ಹಿಂಬಾಲಿಸುತ್ತಿದ್ದ ಆಪ್ತ ಸೈನಿಕ ಕೂಡಲೇ ಶೈತ್ಯೋಪಚಾರ ಮಾಡಿದ.

ರಾಣಿ ವೀರಘೋಷಣೆಯನ್ನು ಕೂಗುತ್ತಲೇ ಕೊನೆಯುಸಿರೆಳೆದರು. ರಾಣಿಯ ಅಂತಿಮ ಆಸೆಯಂತೆ ಹುಲ್ಲಿನ ಮೆದೆಯಲ್ಲಿ ಅಗ್ನಿಸ್ಪರ್ಶ ನೀಡಿ ದಹನ ಮಾಡಲಾಯಿತು. ರಾಣಿಯ ಬಲಿದಾನದ ವಿಷಯ ತಿಳಿದು ದೇಶ ಅಶ್ರುತರ್ಪಣ ನೀಡಿತು. ಝಾನ್ಸಿ ರಾಣಿಯ ಶೌರ್ಯ ಪರಾಕ್ರಮ ಯಾವ ಪುರುಷ ಸಾಹಸಿಗೂ ಕಡಿಮೆಯಿರಲಿಲ್ಲ ಎಂದು ಅವರೊಡನೆ ಸ್ವತಃ ಯುದ್ಧಭೂಮಿಯಲ್ಲಿ ಹೋರಾಡಿ ಸೋತುಹೋಗಿದ್ದ ಬ್ರಿಟಿಷ್ ಜನರಲ್ ಹಗ್ ರೋಸ್ ತನ್ನ ಪುಸ್ತಕದಲ್ಲಿ ವಿವರಿಸಿದ್ದಾನೆ.

“ಶಕ್ತಿಯ ಸ್ವರೂಪ, ಅಪ್ರತಿಮ ಸುಂದರಿ, ಸುಶೀಲೆ ಮತ್ತು ಕೆಚ್ಚೆದೆಯ ಸಾಹಸಿಯಾಗಿದ್ದ ಲಕ್ಷ್ಮೀಬಾಯಿ ತನ್ನ ದೇಶದ ರಕ್ಷಣೆಗೆ ನಿಂತ ಪರಿಯನ್ನು ಭಾರತೀಯರು ಎಂದೂ ಮರೆಯಲಾರರು. ನಿಜವಾದ ನಾಯಕತ್ವದೊಂದಿಗೆ ದೇವಿಯ ತೇಜಸ್ಸನ್ನು ಹೊಂದಿದ್ದ ಝಾನ್ಸಿ ರಾಣಿ ಲಕ್ಷ್ಮಿ ೧೮೫೭ರ ಸಂಗ್ರಾಮದ ನಂತರ ಸಿಂಹಸ್ವಪ್ನವಾಗಿ ಕಂಡಳು. ಭಾರತ ದೇಶವಲ್ಲದೇ ವಿಶ್ವದ ಇನ್ಯಾವುದೇ ದೇಶದಲ್ಲೂ ಇಂತಹ ವೀರ ಸಿಂಹನಾರಿಯ ಜನನ ಸಾಧ್ಯವಿಲ್ಲ….” ಎಂದಿದ್ದಾರೆ ವೀರ ಸಾವರ್ಕರ್.

ಇದನ್ನೂ ಓದಿ | Bhagat Singh Birthday | ಲೇಖನ | ಯುವಕರಿಗೆ‌ ಸದಾ ಸ್ಫೂರ್ತಿ ಕ್ರಾಂತಿಕಾರಿ ಭಗತ್‌ ಸಿಂಗ್

Exit mobile version