ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯು (G20 Summit 2023) ಎರಡನೇ ದಿನಕ್ಕೆ ಕಾಲಿಟ್ಟಿದೆ. ಜಿ 20 ನಾಯಕರು ಭಾನುವಾರ ಕೂಡ ಹಲವು ಕಾರ್ಯಕ್ರಮಗಳು, ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಿಗೆ ಸಭೆ ನಡೆಯುವ ‘ಭಾರತ ಮಂಟಪ’ದಲ್ಲಿಯೇ ದೇಶದ ದರ್ಶನವಾಗಿದೆ. ಭಾರತದ ಕಲೆ, ವಾಸ್ತುಶಿಲ್ಪ, ಊಟದಲ್ಲಿ ದೇಶೀಯತೆ ಮೂಲಕ ಭಾರತವನ್ನು ಪರಿಚಯಿಸಲಾಗಿದೆ. ಇನ್ನು ಜಿ 20 ರಾಷ್ಟ್ರಗಳ ನಾಯಕರ ಪತ್ನಿಯರಿಗೂ ದೇಶೀಯ ಊಟ, ರಂಗೋಲಿ ಕಲೆ, ಕೃಷಿಯ ಮೂಲಕ ಶನಿವಾರ ‘ಭಾರತ ದರ್ಶನ’ ಆಗಿದೆ.
ಹೌದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಸೇರಿ ಜಿ 20 ರಾಷ್ಟ್ರಗಳ ನಾಯಕರ ಪತ್ನಿಯರು ಶನಿವಾರ (ಸೆಪ್ಟೆಂಬರ್ 9) ದೆಹಲಿಯಲ್ಲಿರುವ ಪುಸಾ-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದರು. ಸುಮಾರು 1,200 ಎಕರೆ ವ್ಯಾಪ್ತಿಯಲ್ಲಿರುವ ಪುಸಾ ಕ್ಯಾಂಪಸ್‌ನಲ್ಲಿ ಅವರು ದಿನದ ಬಹುತೇಕ ಭಾಗವನ್ನು ಕಳೆದರು. ಅಲ್ಲಿ ಅವರು, ಭಾರತದ ರಂಗೋಲಿ ಕಲೆ, ಕೃಷಿ ಪದ್ಧತಿ, ದೇವರ ಮೇಲೆ ಭಾರತೀಯರು ಇರಿಸಿರುವ ನಂಬಿಕೆ ಸೇರಿ ಹಲವು ವಿಷಯಗಳನ್ನು ಅವರು ಮನವರಿಕೆ ಮಾಡಿಕೊಂಡರು.
ಅಕ್ಷತಾ ಮೂರ್ತಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಪತ್ನಿ ಕಾರ್ಮೆಲ್ ಟೆಬಟ್, ಮಾರಿಷಸ್ ಪ್ರಥಮ ಮಹಿಳೆ ಕೊಬಿತಾ ರಾಮ್‌ದಾನೀ, ಜಪಾನ್‌ನ ಯೊಕು ಕಿಶಿದಾ, ಟರ್ಕಿಯ ಎಮಿನೆ ಎಡೋಗನ್ ಸೇರಿ ಹಲವು ಗಣ್ಯರಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಭೋಜನಕೂಟವನ್ನೂ ಏರ್ಪಡಿಸಲಾಗಿತ್ತು. ಊಟೋಪಚಾರದಲ್ಲೂ ಅವರಿಗೆ ಭಾರತದ ವೈವಿಧ್ಯತೆ, ಆಹಾರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡಲಾಯಿತು.
ಇದನ್ನೂ ಓದಿ: G20 Summit 2023: ನರೇಂದ್ರ ಮೋದಿಯನ್ನು ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬೈಡೆನ್
ಹಾಗೆಯೇ, ಜಿ 20 ರಾಷ್ಟ್ರಗಳ ಪ್ರಥಮ ಮಹಿಳೆಯರು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ಗೂ ಭೇಟಿ ನೀಡಿ ದೇಶದ ಕಲೆಯನ್ನು ಪರಿಚಯ ಮಾಡಿಕೊಂಡರು. ಆ ಮೂಲಕ ಜಿ 20 ಸಭೆಯ ಆರಂಭದ ದಿನ ಇವರು ಭಾರತ ದರ್ಶನ ಮಾಡಿದರು. ಇನ್ನು ಶೃಂಗಸಭೆಯ ಮಧ್ಯೆಯೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ದೆಹಲಿಯಲ್ಲಿರುವ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.