Site icon Vistara News

India Canada Row: ತನಿಖೆ ಓಕೆ, ಕೆನಡಾ ಮೊದಲು ಸಾಕ್ಷ್ಯ ಕೊಡಲಿ; ಜೈಶಂಕರ್‌ ತಿರುಗೇಟು

S Jaishankar

Minister Jaishankar asks Canada to provide proof substantiating its Nijjar accusations

ನವದೆಹಲಿ: ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿನ (India Canada Row) ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ (S Jaishankar) ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ, ಭಾರತದ ವಿರುದ್ಧ ಕೆನಡಾ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. “ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ಕುರಿತ ತನಿಖೆಗೆ ಭಾರತ ಸಹಕರಿಸುತ್ತದೆ. ಆದರೆ, ಭಾರತದ ವಿರುದ್ಧ ಕೆನಡಾ ಮಾಡಿದ ಆರೋಪಗಳಿಗೆ ಮೊದಲು ಸಾಕ್ಷ್ಯ ಕೊಡಲಿ” ಎಂದು ಆಗ್ರಹಿಸಿದ್ದಾರೆ.

“ಭಾರತದ ವಿರುದ್ಧ ಕೆನಡಾ ಗಂಭೀರ ಆರೋಪಗಳನ್ನು ಮಾಡಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದೆ. ಕೆನಡಾ ಆರೋಪಗಳ ಕುರಿತ ತನಿಖೆಗೆ ಭಾರತ ಸಿದ್ಧವಾಗಿದೆ. ನಾವು ತನಿಖೆಯಿಂದ ದೂರ ಸರಿಯುವ, ಸಹಕರಿಸದಿರುವ ಮಾತೇ ಇಲ್ಲ. ಆದರೆ, ನಾವು ಕೆನಡಾ ಸರ್ಕಾರಕ್ಕೆ ಸಾಕ್ಷ್ಯ ಕೊಡಿ ಎಂದು ಮಾತ್ರ ಕೇಳಿದ್ದೇವೆ. ಸಾಕ್ಷ್ಯವಿಲ್ಲದೆ ತನಿಖೆ ನಡೆಯುವುದು ಹೇಗೆ ಸಾಧ್ಯ” ಎಂದು ಹೇಳಿದ್ದಾರೆ.

ಕೆನಡಾ ರಾಜಕೀಯಕ್ಕೆ ವಿರೋಧ

“ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಭಾರತದ ಹೈಕಮಿಷನ್‌ ಮೇಲೆ ದಾಳಿ ನಡೆಸಲಾಗುತ್ತಿದೆ. ಹೀಗಿರುವಾಗ ಸಹಜವಾಗಿಯೇ ಭಾರತವು ಕ್ರಮಕ್ಕೆ ಆಗ್ರಹಿಸುತ್ತದೆ. ಆದರೆ, ಕೆನಡಾ ರಾಜಕೀಯದಲ್ಲಿ ಹಿಂಸಾತ್ಮಕ ಮನೋಭಾವದ ವ್ಯಕ್ತಿಗಳು ಬಂದು ಸೇರಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ” ಎಂದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡಿದ ಜೈಶಂಕರ್‌, “ಅಭಿವ್ಯಕ್ತಿ ಸ್ವಾತಂತ್ರ್ಯವು ಜವಾಬ್ದಾರಿಯುತವಾಗಿ ಇರಬೇಕೇ ಹೊರತು, ಹುರುಳಿಲ್ಲದ ಆರೋಪಗಳು ಆಗಬಾರದು” ಎಂದು ಟಾಂಗ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: India Canada Row: ಅಲ್ಪಸಂಖ್ಯಾತರನ್ನು ರಕ್ಷಿಸಿ, ದ್ವೇಷಭಾಷಣ ತಡೆಗಟ್ಟಿ: ವಿಶ್ವಸಂಸ್ಥೆಯಲ್ಲಿ ಕೆನಡಾಗೆ ಭಾರತ ಶಿಫಾರಸು

ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು. ಆದಾಗ್ಯೂ, ಭಾರತವು ಕೆನಡಾ ರಾಜತಾಂತ್ರಿಕರನ್ನು ದೇಶದಿಂದ ವಾಪಸ್‌ ಕಳುಹಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version