Site icon Vistara News

Viral News: ಇನ್ನು ಅವಳಲ್ಲ, ಅವನು: ಅಧಿಕೃತ ದಾಖಲೆಗಳಲ್ಲಿ ಹೆಸರು & ಲಿಂಗ ಬದಲಾಯಿಸಿದ IRS ಅಧಿಕಾರಿ

Viral News

Viral News

ನವದೆಹಲಿ: ಐತಿಹಾಸಿಕ ನಿರ್ಧಾರವೊಂದರಲ್ಲಿ ಎಲ್ಲ ಅಧಿಕೃತ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗವನ್ನು ಬದಲಾಯಿಸುವ ಭಾರತೀಯ ಕಂದಾಯ ಸೇವೆ (Indian Revenue Service)ಯ ಅಧಿಕಾರಿಯೊಬ್ಬರ ಮನವಿಗೆ ಹಣಕಾಸು ಸಚಿವಾಲಯ (Ministry of Finance) ಅನುಮತಿ ನೀಡಿದೆ. ಭಾರತೀಯ ನಾಗರಿಕ ಸೇವೆಗಳಲ್ಲಿ ಇದು ಮೊದಲ ಪ್ರಕರಣ ಎನ್ನುವುದು ವಿಶೇಷ (Viral News).

ಪ್ರಕರಣದ ವಿವರ

ಹೈದರಾಬಾದ್‌ನಲ್ಲಿರುವ ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (CESTAT) ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡಿರುವ 35 ವರ್ಷದ ಎಂ.ಅನಸೂಯಾ ಈ ಮನವಿ ಮಾಡಿದ್ದರು. ತನ್ನ ಹೆಸರನ್ನು ಎಂ.ಅನುಕತಿರ್ ಸೂರ್ಯ ಎಂದು ಬದಲಾಯಿಸುವಂತೆ ಮತ್ತು ಸ್ತ್ರೀ ಎಂದಿರುವ ತನ್ನ ಲಿಂಗವನ್ನು ಪುರುಷ ಎಂದು ಪರಿವರ್ತಿಸುವಂತೆ ಅವರು ಮನವಿ ಮಾಡಿದ್ದರು.

ಈ ಮನವಿಯನ್ನು ಪರಿಗಣಿಸಲಾಗಿದ್ದು, ಇನ್ನು ಮುಂದೆ ಇವರು ಎಲ್ಲ ಅಧಿಕೃತ ದಾಖಲೆಗಳಲ್ಲಿ ಮಿಸ್ಟರ್ ಎಂ. ಅನುಕತಿರ್ ಸೂರ್ಯ ಎಂದು ಗುರುತಿಸಲ್ಪಡುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅನುಕತಿರ್ ಸೂರ್ಯ ಅವರು 2013ರ ಡಿಸೆಂಬರ್‌ನಲ್ಲಿ ಚೆನ್ನೈಯಲ್ಲಿ ಸಹಾಯಕ ಆಯುಕ್ತರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 2018ರಲ್ಲಿ ಡೆಪ್ಯೂಟಿ ಕಮಿಷನರ್ ಶ್ರೇಣಿಗೆ ಬಡ್ತಿ ಪಡೆದರು. ಅವರು ಕಳೆದ ವರ್ಷ ಹೈದರಾಬಾದ್‌ನಲ್ಲಿ ಜಂಟಿ ಆಯುಕ್ತರಾಗಿ ಅದಿಕಾರ ಸ್ವೀಕರಿಸಿದರು. ಚೆನ್ನೈಯ ಮದ್ರಾಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಪದವಿ ಪೂರ್ಣಗೊಳಿಸಿದ ಅವರು 2023ರಲ್ಲಿ ಭೋಪಾಲ್‌ನ ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್‌ ವಿಶ್ವವಿದ್ಯಾಲಯದಿಂದ ಸೈಬರ್ ಕಾನೂನು ಮತ್ತು ಸೈಬರ್ ವಿಧಿವಿಜ್ಞಾನದಲ್ಲಿ ಪಿಜಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದರು.

ಹಿಂದೆಯೂ ನಡೆದಿತ್ತು

ಲಿಂಗ ಪರಿವರ್ತನೆಯ ಘಟನೆ ಹಿಂದೆಯೂ ನಡೆದಿತ್ತು. 2015ರಲ್ಲಿ ಒಡಿಶಾದ ಸರ್ಕಾರಿ ಪುರುಷ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಾನೂನುಬದ್ಧವಾಗಿ ತೃತೀಯ ಲಿಂಗಿಯಾಗಿ ಗುರುತಿಸಿಕೊಂಡಿದ್ದರು. ʼʼಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪನ್ನು ನೀಡಿದ ದಿನವೇ ಪುರುಷ ಲಿಂಗದ ಬದಲು ತೃತೀಯ ಲಿಂಗದ ಗುರುತನ್ನು ಆಯ್ಕೆ ಮಾಡಲು ನಾನು ಮನಸ್ಸು ಮಾಡಿದೆ” ಎಂದು ಅವರು 2015ರಲ್ಲಿ ಹೇಳಿದ್ದರು.

“ಲಿಂಗ ಪರಿವರ್ತನೆ ಅನೇಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತು. ಆದರೆ ಈಗ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ನನ್ನನ್ನು ‘ಸರ್’ ಎಂದು ಸಂಬೋಧಿಸುತ್ತಿದ್ದ ಜನರು ಈಗ ‘ಮೇಡಂ’ ಎಂದು ಕರೆಯುತ್ತಿದ್ದಾರೆ. ಉನ್ನತ ಅಧಿಕಾರಿಗಳು ಬೆಂಬಲ ನೀಡಿದ್ದರಿಂದ ಯಾವುದೇ ಅಹಿತಕರ ಸನ್ನಿವೇಸ ಎದುರಾಗಲಿಲ್ಲʼʼ ಎಂದು ಅವರು ತಿಳಿಸಿದ್ದಾರೆ.

“ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಐಶ್ವರ್ಯಾ ಋತುಪರ್ಣ ಪ್ರಧಾನ್ ಆಗಿದ್ದೇನೆ. ನನ್ನ ಹೆಸರು ಮತ್ತು ಲಿಂಗದ ಬದಲಾವಣೆ ಮತ್ತು ಮಾರ್ಪಾಡು ಮಾಡಲು ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದ್ದೇನೆ” ಎಂದು ಅವರು 2015ರಲ್ಲಿ ಹೇಳಿಕೆ ನೀಡಿದ್ದರು.

ಒಡಿಶಾ ಹಣಕಾಸು ಸೇವೆಗಳ ಇಲಾಖೆಯಲ್ಲಿ (OFS) ಕೆಲಸ ಮಾಡುವ ರತಿಕಾಂತ ಪ್ರಧಾನ್ 2015ರಲ್ಲಿ ಐಶ್ವರ್ಯಾ ಋತುಪರ್ಣ ಪ್ರಧಾನ್ ಆಗಿ ಬದಲಾದರು. ಭಾರತದ ಮೊದಲ ತೃತೀಯ ಲಿಂಗಿ ನಾಗರಿಕ ಸೇವಕರಾಗಿ ಅವರು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರೀತಿಯ ತಾಕತ್ತು ಇದು!; ಹೃದಯ ಕದ್ದ ವಿದ್ಯಾರ್ಥಿನಿಯನ್ನು ಮದುವೆಯಾಗಲು ಲಿಂಗ ಪರಿವರ್ತನೆ ಮಾಡಿಸಿಕೊಂಡ ಶಿಕ್ಷಕಿ

Exit mobile version