ಜೈಪುರ: ಇತ್ತೀಚೆಗೆ ದೇಶದ ಗಡಿಯಾಚೆಗಿನ ಪ್ರೇಮ ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತಿವೆ. ಗ್ರೇಟರ್ ನೊಯ್ಡಾದ ಸಚಿನ್ ಮೀನಾನನ್ನು ಹುಡುಕಿಕೊಂಡು ಪಾಕಿಸ್ತಾನದ ಸೀಮಾ ಹೈದರ್ ಭಾರತಕ್ಕೆ ಬಂದ, ಪಾಕಿಸ್ತಾನದ ನಸ್ರುಲ್ಲಾನನ್ನು ಹುಡುಕಿಕೊಂಡು ಭಾರತದ ಅಂಜು ಪಾಕಿಸ್ತಾನಕ್ಕೆ ಹೋದ, ಜೂಲಿ ಎಂಬ ಮಹಿಳೆಗಾಗಿ ಉತ್ತರ ಪ್ರದೇಶದ ಅಜಯ್ ಬಾಂಗ್ಲಾದೇಶಕ್ಕೆ ಹೋದ ಪ್ರಕರಣಗಳು ಸುದ್ದಿಯಾಗಿವೆ. ಇದರ ಬೆನ್ನಲ್ಲೇ, ರಾಜಸ್ಥಾನದ ಬಾಲಕಿಯೊಬ್ಬಳು ಪಾಕಿಸ್ತಾನದಲ್ಲಿರುವ ತನ್ನ ಗೆಳೆಯನನ್ನು ಭೇಟಿಯಾಗಲು (Love Story) ಪಾಕ್‌ಗೆ ತೆರಳಬೇಕು ಎಂದು ಜೈಪುರ ವಿಮಾನ ನಿಲ್ದಾಣಕ್ಕೆ ಹೋಗಿದ್ದಾಳೆ. ಆಗ ಪೊಲೀಸರು ಬಾಲಕಿಯನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೌದು, ಜುಲೈ 28ರಂದು ಬಾಲಕಿಯು ಜೈಪುರ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಳೆ. ಪಾಸ್‌ಪೋರ್ಟ್, ವೀಸಾ ಸೇರಿ ಯಾವುದೇ ದಾಖಲೆ ಇಲ್ಲದೆ ಆಕೆ ಪಾಕಿಸ್ತಾನಕ್ಕೆ ಹೋಗುವ ವಿಮಾನ ಹತ್ತಲು ಪ್ರಯತ್ನಿಸಿದ್ದಾಳೆ. ಆಕೆಯ ಬಳಿ ಯಾವುದೇ ದಾಖಲೆ ಇರದಿರುವುದನ್ನು ಕಂಡ ಅಧಿಕಾರಿಗಳು ಕೂಡಲೇ ಆಕೆಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
“ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಾಲಕಿಯನ್ನು ಪರಿಶೀಲಿಸಿದಾಗ ಆಕೆಯ ಬಳಿ ಯಾವುದೇ ದಾಖಲೆ ಇರಲಿಲ್ಲ. ಯಾವ ದಾಖಲೆಯೂ ಇಲ್ಲದೆ ಆಕೆ ಪಾಕಿಸ್ತಾನಕ್ಕೆ ಹೋಗಲು ಬಯಸುತ್ತಿದ್ದಳು. ಬಾಲಕಿಯು ಶ್ರೀಮಧೋಪುರದ ನಿವಾಸಿಯಾಗಿದ್ದು, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಗೆಳೆಯನನ್ನು ಭೇಟಿಯಾಗಲೆಂದು ಆಕೆ ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದಾಳೆ” ಎಂದು ಏರ್‌ಪೋರ್ಟ್ ಸ್ಟೇಷನ್ ಆಫೀಸರ್ ದಿಗ್ಪಾಲ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: Ajay Julie Love: ಜೂಲಿ ಐ ಲವ್ ಯು; ಗೆಳತಿಗಾಗಿ ಬಾಂಗ್ಲಾಗೆ ತೆರಳಿದ ಭಾರತದ ಯುವಕ, ಕತೆಯಲ್ಲಿದೆ ಬಿಗ್ ಟ್ವಿಸ್ಟ್
ಜೈಪುರದಿಂದ ಪಾಕಿಸ್ತಾನಕ್ಕೆ ಯಾವುದೇ ವಿಮಾನ ಹಾರಾಟ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯನ್ನು ವಶಪಡಿಸಿಕೊಂಡಿರುವ ಕುರಿತು ಪೊಲೀಸರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಬಳಿಕ ಆಕೆಯನ್ನು ಪೋಷಕರ ವಶಕ್ಕೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನದ ಅಲ್ವರ್ ಜಿಲ್ಲೆಯ ಅಂಜು ಎಂಬ ಮಹಿಳೆಯು ಪಾಕಿಸ್ತಾನಕ್ಕೆ ಪರಾರಿಯಾಗಿದ್ದು, ಗೆಳೆಯ ನಸ್ರುಲ್ಲಾನನ್ನು ಮದುವೆಯಾಗಿದ್ದಾರೆ.