Site icon Vistara News

Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್‌ ವರ್ಲ್ಡ್‌ʼ

miss world 2023 anouned to host in india

ಹೊಸ ದಿಲ್ಲಿ: 27 ವರ್ಷಗಳ ಬಳಿಕ ಮತ್ತೊಮ್ಮೆ ʼಮಿಸ್‌ ವರ್ಲ್ಡ್‌ʼ (Miss World) ಸ್ಪರ್ಧೆಯ ಆತಿಥ್ಯ ಭಾರತದ ಪಾಲಿಗೆ ಬಂದಿದೆ.

1996ರಲ್ಲಿ ಈ ಕಾರ್ಯಕ್ರಮವನ್ನು ಭಾರತ ಕೊನೆಯ ಬಾರಿಗೆ ಆಯೋಜಿಸಿತ್ತು. 27 ವರ್ಷಗಳ ನಂತರ 71ನೇ ವಿಶ್ವ ಸುಂದರಿ ಸ್ಪರ್ಧೆ ಭಾರತದ ಪಾಲಿಗೆ ಬಂದಿದೆ. 1996ರಲ್ಲಿ ಭಾರತದ ಬೆಂಗಳೂರಿನಲ್ಲಿ ನಡೆದ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಗ್ರೀಸ್‌ನ ಐರೀನ್‌ ಸ್ಕಿಲ್ವಾ ವಿನ್ನರ್‌  (Irene Skliva) ಆಗಿದ್ದರು.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಈ ವರ್ಷ ಸ್ಪರ್ಧೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಭಾರತಕ್ಕೆ ಒಲಿದಿದೆ. ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ʼʼ71ನೇ ವಿಶ್ವ ಸುಂದರಿ ಫೈನಲ್‌ ಆತಿಥೇಯ ಭಾರತ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. 30 ವರ್ಷಗಳ ಹಿಂದೆ ನಾನು ಈ ಅದ್ಭುತ ದೇಶಕ್ಕೆ ಭೇಟಿ ನೀಡಿದ ಮೊದಲ ಕ್ಷಣದಿಂದ ಭಾರತದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದೇನೆ! ವಿಶ್ವ ದರ್ಜೆಯ ಆಕರ್ಷಣೆಗಳು ಮತ್ತು ಪ್ರಪಂಚದ ಉಳಿದ ಭಾಗಗಳೊಂದಿಗೆ ಸ್ಪರ್ಧಿಸುವ ತಾಣಗಳನ್ನು ಭಾರತ ಹೊಂದಿದೆʼʼ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ತಮ್ಮ ಅನನ್ಯ ಪ್ರತಿಭೆ, ಬುದ್ಧಿವಂತಿಕೆ ಮತ್ತು ಚೆಲುವನ್ನು ಈ ಸ್ಪರ್ಧೆಯಲ್ಲಿ ಪ್ರದರ್ಶಿಸಲಿದ್ದಾರೆ. ಪ್ರತಿಭಾ ಪ್ರದರ್ಶನ, ಕ್ರೀಡಾ ಸವಾಲು, ಸೇವಾ ಉಪಕ್ರಮ ಸೇರಿದಂತೆ ಹಲವು ಕಠಿಣ ಸ್ಪರ್ಧೆಗಳ ಸರಣಿಯಲ್ಲಿ ಭಾಗವಹಿಸುತ್ತಾರೆ. ನವೆಂಬರ್/ಡಿಸೆಂಬರ್ 2023ರಲ್ಲಿ ನಿಗದಿಯಾಗಿರುವ ಗ್ರ್ಯಾಂಡ್ ಫಿನಾಲೆಗೆ ಒಂದು ತಿಂಗಳ ಮೊದಲು, ಸ್ಪರ್ಧಿಗಳ ಶಾರ್ಟ್‌ಲಿಸ್ಟ್ ಮಾಡಲು ಹಲವಾರು ಸುತ್ತುಗಳು ಇರುತ್ತವೆ.

ಭಾರತದಿಂದ ಮೊದಲ ಬಾರಿಗೆ ವಿಶ್ವ ಸುಂದರಿ ಆದವರು ರೀಟಾ ಫರಿಯಾ. 1966ರಲ್ಲಿ ಇವರು ಸ್ಪರ್ಧೆಯಲ್ಲಿ ಗೆದ್ದರು. ಐಶ್ವರ್ಯ ರೈ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಇತ್ತೀಚೆಗೆ ಮಾನುಷಿ ಚಿಲ್ಲರ್ (2017) ಗೆದ್ದ ಇತರರು. ಮಿಸ್ ಇಂಡಿಯಾ ವರ್ಲ್ಡ್- 2022 ಆಗಿರುವ ಸಿನಿ ಶೆಟ್ಟಿ ಅವರು ಮಿಸ್ ವರ್ಲ್ಡ್- 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿ: Viral News : ಮಿಸ್‌ ವರ್ಲ್ಡ್‌ ಕಿರೀಟದೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿದ್ದ ಐಶ್ವರ್ಯ ರೈ! ಫೋಟೊ ವೈರಲ್‌

Exit mobile version