ಶ್ರೀನಗರ: ಜಮ್ಮು-ಕಾಶ್ಮೀರ ಎಂದರೆ ಯಾವಾಗಲೂ ಉಗ್ರರ ದಾಳಿ, ಪ್ರತ್ಯೇಕವಾದಿಗಳ ಭಾರತ ವಿರೋಧಿ ಘೋಷಣೆ, ಸೈನಿಕರ ಮೇಲೆ ಯುವಕರು ಕಲ್ಲು ತೂರುವ ಸುದ್ದಿಗಳೇ ರಾರಾಜಿಸುತ್ತಿದ್ದವು. ಆದರೆ, ಜಮ್ಮು-ಕಾಶ್ಮೀರದ ಪರಿಸ್ಥಿತಿ ಈಗ ಬದಲಾಗಿದೆ. ಜಿ-20 ಅಂತಹ ಅಂತಾರಾಷ್ಟ್ರೀಯ ಸಭೆಗಳು ಕಣಿವೆಯಲ್ಲಿ ನಡೆಯುತ್ತಿದೆ. ಈಗ ಮತ್ತೊಂದು ಜಾಗತಿಕ ಕಾರ್ಯಕ್ರಮಕ್ಕೆ ಶ್ರೀನಗರ ಸಿದ್ಧವಾಗುತ್ತಿದೆ. ಹೌದು, 71ನೇ ಮಿಸ್ ವರ್ಲ್ಡ್ (Miss World 2023) ಕಾರ್ಯಕ್ರಮ ಶ್ರೀನಗರದಲ್ಲಿ ನಡೆಯಲಿದೆ.
ಮಿಸ್ ವರ್ಲ್ಡ್ ಸಂಸ್ಥೆಯ ಸಿಇಒ ಜೂಲಿಯಾ ಎರಿಕ್ ಮೊರ್ಲೆ ಸೇರಿ ಹಲವರು ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರಕ್ಕೆ ಭೇಟಿ ನೀಡಿದ್ದು, ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ. “ಜಮ್ಮು-ಕಾಶ್ಮೀರದಲ್ಲಿ 71ನೇ ಮಿಸ್ ವರ್ಲ್ಡ್ ಕಾರ್ಯಕ್ರಮ ನಡೆಯಲಿದೆ ಎಂಬುದನ್ನು ಘೋಷಿಸಲು ನಮಗೆ ಖುಷಿಯಾಗುತ್ತಿದೆ. ಇದು ಅದ್ಭುತವಾದ ಜಾಗ. ನಾವು ನಿಜವಾಗಿಯೂ ಭಾವಕರಾಗಿದ್ದೇವೆ” ಎಂದು ತಿಳಿಸಿದರು.
ಕಾಶ್ಮೀರದಲ್ಲಿ ಮಿಸ್ ವರ್ಲ್ಡ್ ಸಿಇಒ ಹಾಗೂ ತಂಡ
ಡಿಸೆಂಬರ್ 8ರಂದು ಮಿಸ್ ವರ್ಲ್ಡ್ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ ದಾಲ್ ಸರೋವರದಲ್ಲಿ ಸುಂದರಿಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ. ಇನ್ನು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಸರ್ಕಾರದಿಂದ ಸಕಲ ಸಹಕಾರ ದೊರೆಯಲಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಕಾರ್ಯಕ್ರಮದ ಆಯೋಜನೆಗಾಗಿ ನವೆಂಬರ್‌ನಲ್ಲಿ ಮಿಸ್ ವರ್ಲ್ಡ್ ಸಂಸ್ಥೆಯ ಸಿಬ್ಬಂದಿ ಶ್ರೀನಗರಕ್ಕೆ ಆಗಮಿಸಲಿದ್ದಾರೆ ಎಂದು ಮೊರ್ಲೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರದಲ್ಲಿ ಜಿ 20 ಪ್ರವಾಸೋದ್ಯಮ ಸಭೆ ಐತಿಹಾಸಿಕ
ಮಿಸ್ ವರ್ಲ್ಡ್ ಸಿಇಒ ಜತೆಗೆ 2021ರಲ್ಲಿ ವಿಶ್ವ ಸುಂದರಿ ಎನಿಸಿದ ಕೊರೊಲಿನಾ ಬೀಲಾವ್ಸ್‌ಕಾ, 2023ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಸಿನಿ ಶೆಟ್ಟಿ ಸೇರಿ ಹಲವರು ಶ್ರೀನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಮಾತನಾಡಿದ ಕೊರೊಲಿನಾ ಬೀಲಾವ್ಸ್‌ಕಾ, “ನಾನು ಕಾಶ್ಮೀರವನ್ನು ತುಂಬ ಇಷ್ಟಪಡುತ್ತೇನೆ. ಇಂತಹ ಅದ್ಭುತ ಪ್ರದೇಶವನ್ನು ಜಗತ್ತೇ ನೋಡಲಿದೆ” ಎಂದು ತಿಳಿಸಿದರು.