ಮುಂಬೈ: 2024ನೇ ವಿಶ್ವ ಸುಂದರಿ (Miss World 2024) ಸ್ಪರ್ಧೆಯಲ್ಲಿ ಭಾರತದ ಸಿನಿ ಶೆಟ್ಟಿ (Sini Shetty) ನಿರಾಸೆ ಅನುಭವಿಸಿದರು. ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್(Jio World Convention Centre in BKC, Mumbai)ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು ಅಗ್ರ ಎಂಟರಲ್ಲಿ ಸ್ಥಾನ ಪಡೆದ ನಂತರ ಸ್ಪರ್ಧೆಯಿಂದ ಹೊರ ಬಿದ್ದರು. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಯಿತು. ಮಿಸ್ ಲೆಬನಾನ್ ಅತ್ಯುತ್ತಮ ಪ್ರದರ್ಶನ ನೀಡಿ ಟಾಪ್ 4ರಲ್ಲಿ ಸ್ಥಾನ ಪಡೆದರು.
ಫೆಮಿನಾ ಮಿಸ್ ಇಂಡಿಯಾ 2022ರ ವಿಜೇತೆ ಸಿನಿ ಶೆಟ್ಟಿ ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 112 ಸ್ಪರ್ಧಿಗಳ ಪೈಕಿ ಒಬ್ಬರಾಗಿ ಅಗ್ರ ಎಂಟರಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಿಮ ಹಂತಕ್ಕೆ ತಲುಪಲು ವಿಫಲರಾಗಿದರು. 28 ವರ್ಷಗಳ ಬಳಿಕ ಭಾರತದಲ್ಲಿ ಈ ಸ್ಪರ್ಧೆ ನಡೆದಿದ್ದು, ಸಿನಿ ಶೆಟ್ಟಿ ಮೇಲೆ ಹಲವರು ಭರವಸೆ ಇಟ್ಟಿದ್ದರು. 23ರ ವರ್ಷದ ಸಿನಿ ಶೆಟ್ಟಿ ಮೂಲತಃ ಕರ್ನಾಟಕದವರು.
ಮಾನವೀಯ ಪ್ರಶಸ್ತಿ (Humanitarian Award)- ನೀತಾ ಅಂಬಾನಿ
ಈ ಸಂದರ್ಭದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ಮತ್ತು ಸ್ಥಾಪಕಿ ನೀತಾ ಮುಖೇಶ್ ಅಂಬಾನಿ ಅವರಿಗೆ ಮಾನವೀಯ ಪ್ರಶಸ್ತಿ (Humanitarian Award) ನೀಡಲಾಯಿತು. ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಜೂಲಿಯಾ ಮಾರ್ಲೆ ಸಿಬಿಇ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನೀತಾ ಅಂಬಾನಿ ಅವರು ಕೈಗೊಂಡ ಮಾನವೀಯ ಕಾರ್ಯಗಳನ್ನು ಗಣನೆಗೆ ತೆಗೆದುಕೊಂಡು ಈ ಪ್ರಶಸ್ತಿ ನೀಡಲಾಯಿತು.
ಟಾಪ್ 4 ಸ್ಪರ್ಧಿಗಳು
ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪೈಸ್ಕೊವಾ, ಲೆಬನಾನ್‌ನ ಯಾಸ್ಮಿನ್ ಅಜೈಟೌನ್, ಟ್ರಿನಿಡಾಡ್ & ಟೊಬಾಗೊದ ಅಚೆ ಅಬ್ರಹಾಮ್ಸ್ ಮತ್ತು ಬೋಟ್ಸ್ವಾನಾದ ಲೆಸೆಗೊ ಚೋಂಬೊ ಟಾಪ್ ನಾಲ್ಕು ಸ್ಥಾನ ಪಡೆದಿದ್ದರು. ಈ ಪೈಕಿ ಕ್ರಿಸ್ಟಿನಾ ಪೈಸ್ಕೊವಾ ವಿಶ್ವ ಸುಂದರಿಯಾಗಿ ಆಯ್ಕೆಯಾದರು.
28 ವರ್ಷಗಳ ನಂತರ ಭಾರತಕ್ಕೆ ಆತಿಥ್ಯ
ವಿಶೇಷ ಎಂದರೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಹಿಸಿತ್ತು. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಗ್ರೀಸ್‌ನ 19ರ ಹರೆಯದ ಐರಿನ್ ಸ್ಕ್ಲಿವಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
6 ವಿಶ್ವ ಸುಂದರಿ ಪಟ್ಟ
ಭಾರತ ಇದುವರೆಗೆ 6 ವಿಶ್ವ ಸುಂದರಿ ಪಟ್ಟ ಗಳಿಸಿದೆ. ಮೊದಲ ಬಾರಿಗೆ ರೀಟಾ ಫರಿಯಾ 1966ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು. ನಂತರ ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಇತ್ತೀಚೆಗೆ ಮಾನುಷಿ ಚಿಲ್ಲರ್ (2017) ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದರು. 7ನೇ ವಿಶ್ವ ಸುಂದರಿ ಪಟ್ಟವನ್ನು ಕನ್ನಡತಿ ತರುತ್ತಾರೆ ಎನ್ನುವ ನಿರೀಕ್ಷೆ ಮೂಡಿತ್ತು. ಆದರೆ ಈ ಕನಸು ಈಗ ಕನಸಾಗಿಯೇ ಉಳಿದಿದೆ.