ನವದೆಹಲಿ: ಭಾರತದ ಭವಿಷ್ಯವನ್ನು ರೂಪಿಸುವ ಯಾವುದೇ ಕಾರ್ಯಸೂಚಿ ಸರ್ಕಾರಕ್ಕೆ ಇಲ್ಲ ಎಂಬುದನ್ನು ಬಜೆಟ್ (Union Budget 2023) ನಿರೂಪಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಆರೋಪಿಸಿದ್ದಾರೆ. ‘ಮಿತ್ರ ಕಾಲ್ ಬಜೆಟ್’ (Mitr Kaal Budget) ಯಾವುದೇ ದೂರದೃಷ್ಟಿಯನ್ನು ಹೊಂದಿಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ಸೂಚಿಸಿಲ್ಲ. ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಉದ್ದೇಶವಿಲ್ಲ. ಶೇ.1ರಷ್ಟು ಶ್ರೀಮಂತರು ಶೇ.40 ಆಸ್ತಿ ಹೊಂದಿದ್ದಾರೆ. ಶೇ.50ರಷ್ಟು ಜನರು ಶೇ.64 ಜಿಎಸ್‌ಟಿ ನೀಡುತ್ತಾರೆ. ಶೇ.42 ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆದರೂ, ಪಿಎಂಗೆ ಈ ಬಗ್ಗೆ ಕೇರ್ ಇಲ್ಲ. ಭವಿಷ್ಯದ ಭಾರತವನ್ನು ನಿರ್ಮಿಸುವ ಯಾವುದೇ ಕಾರ್ಯಸೂಚಿ ಇಲ್ಲ ಎಂಬುದನ್ನು ಈ ಬಜೆಟ್ ಸಾಬೀತು ಮಾಡಿದೆ ಎಂದು ರಾಹುಲ್ ಗಾಂಧಿ ಅವರು ಟೀಕೆ ಮಾಡಿದ್ದಾರೆ.
ಬಜೆಟ್ ಹೆಸರಿಗೆ ಮಾತ್ರ ದೊಡ್ಡದು. ಆದರೆ, ಯಾವುದಕ್ಕೂ ಉಪಯೋಗ ಇಲ್ಲ ಎಂದು ಟೀಕಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಾಂಡವಾಡುತ್ತಿರುವ ನಿರುದ್ಯೋಗ ನಿರ್ಮೂಲನೆಗೆ ಯಾವುದೇ ಪರಿಹಾರಗಳನ್ನು ಈ ಬಜೆಟ್ ಸೂಚಿಸಿಲ್ಲ. ಪ್ರತಿಯೊಬ್ಬರಿಗೆ ಹಣದುಬ್ಬರಿಂದ ತೊಂದರೆಯಾಗುತ್ತಿದೆ. ಸಾಮಾನ್ಯ ನರಳುತ್ತಿದ್ದಾನೆ. ನಿತ್ಯ ಬಳಕೆಯ ವಸ್ತುಗಳು, ಪದಾರ್ಥಗಳ ಬೆಲೆ ಇಳಿಕೆ ಮಾಡುವ ಯಾವುದೇ ಪರಿಹಾರವನ್ನು ಈ ಬಜೆಟ್ ಹೊಂದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಅಮೃತ್ ಕಾಲದ ಬಜೆಟ್
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಅಮೃತ ಕಾಲದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ. ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳಿಗೆ ರೋಗರಹಿತ, ಗುಣಮಟ್ಟದ ಬೆಳೆಯ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲು 2200 ಕೋಟಿ ರೂ. ವೆಚ್ಚದಲ್ಲಿ ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವ ಬಗ್ಗೆ ತಿಳಿಸಲಾಗಿದೆ.
ಇದನ್ನೂ ಓದಿ: Union Budget 2023: ಬಜೆಟ್‌ನಲ್ಲಿ ಘೋಷಿಸಲಾದ ಆದಾಯ ತೆರಿಗೆ ವಿನಾಯಿತಿ ಏನೇನು?
2014ರಿಂದ ಸ್ಥಾಪಿತವಾಗಿ ಅಸ್ತಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು. 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗಾಗಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ಮುಂದಿನ ಮೂರು ವರ್ಷಗಳಲ್ಲಿ ನೇಮಕ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.