Site icon Vistara News

Miyazaki Mango: ಇದು ಜಗತ್ತಿನ ಅತ್ಯಂತ ಕಾಸ್ಟ್ಲೀ ಮಾವು! ಆ ರೊಕ್ಕದಲ್ಲಿ ಸೆಕೆಂಡ್ ಹ್ಯಾಂಡ್ ಕಾರೇ ಖರೀದಿಸಬಹುದು!

Miyazaki Mango

ನವದೆಹಲಿ: ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯಲ್ಲಿ 7ನೇ ಮ್ಯಾಂಗೋ ಫೆಸ್ಟಿವಲ್ ಆಯೋಜಿಸಲಾಗಿದ್ದು, ಜಗತ್ತಿನ ಅತ್ಯಂತ ದುಬಾರಿ ಮಾವು ಮಿಯಾಜಾಕಿ (Miyazaki) ಪ್ರದರ್ಶನಕ್ಕೀಡಲಾಗಿದೆ. ಜೂನ್ 9ರಿಂದ ಆರಂಭವಾಗಿರುವ ಮಾವು ಮೇಳವು (Mango) ಮೂರು ದಿನಗಳ ಕಾಲ ನಡೆಯಲಿದೆ. ಸಾಮಾನ್ಯವಾಗಿ ಸಂತೆಯಲ್ಲಿ ನಾವು ಖರೀದಿಸುವ ಮಾವು ಕೆಜಿಗೆ ಎಷ್ಟಿದ್ದಿತ್ತು? ಅಬ್ಬಬ್ಬಾ ಎಂದರೆ, 200 ರೂ. 300 ರೂ. 500 ರೂ. ಸಾವಿರ ರೂಪಾಯಿ ಅಲ್ಲವೇ? ಆದರೆ, ಈ ಮಾವು ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿರುವ ಮಿಯಾಜಾಕಿ ಮಾವು ಬೆಲೆಯನ್ನು ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಈ ಮಾವು ಪ್ರತಿ ಕೆಜಿಗೆ 2.75 ಲಕ್ಷ ರೂಪಾಯಿ! ಒಂದು ಕೆಜಿ ಮಾವು ಖರೀದಿಸುವ ಮೊತ್ತದಲ್ಲಿ ಸೆಕೆಂಡ್ ಹ್ಯಾಂಡ್ ಅಲ್ಟೋ ಕಾರ್ (Car) ಖರೀದಿಸಬಹುದು! ಈ ದುಡ್ಡಿನಲ್ಲಿ ಮತ್ತೆ ಏನೇನು ಖರೀದಿಸಬಹುದು ನೋಡಿ(viral News).

ಸಿಲಿಗುರಿಯಲ್ಲಿ ಆಯೋಜಿಸಲಾಗಿದ್ದ ಮಾವು ಮೇಳದಲ್ಲಿ ಸುಮಾರು 262 ತಳಿಯ ಮಾವುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ಪೈಕಿ ಮಿಯಾಜಾಕಿ ಮಾವು ಮಾತ್ರ ಎಲ್ಲರ ಕಣ್ಣಿಗೆ ಕುಕ್ಕುತ್ತಿದೆ. ಈ ಮಾವು ಜಗತ್ತಿನ ಅತ್ಯಂತ ದುಬಾರಿ ಮಾವು ಎಂದೇ ಕರೆಯಿಸಿಕೊಂಡಿರುವುದೇ ಇದಕ್ಕೆ ಕಾರಣ. ಈ ಮಾವು ಮೇಳದಲ್ಲಿ ಮಿಯಾಜಾಕಿಯ ಕೇವಲ 10ಸ ಪೀಸ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಸಾಮಾನ್ಯವಾಗಿ ಜಪಾನ್‌ನಲ್ಲಿ ಕಂಡುಬರುವ ಮಿಯಾಜಾಕಿ ಮಾವು ಈಗ ಭಾರತದಲ್ಲಿ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ ಎಂದು ಇಂಡಿಯಾ ಟುಡೇ ವರದಿಯು ಹೇಳಿದೆ. ಈ ವರದಿಯ ಪ್ರಕಾರ, ಬಿರ್ಭೂಮ್ ಜಿಲ್ಲೆಯ ದುಬ್ರಾಜ್‌ಪುರ ನಗರದ ಮಸೀದಿಯೊಂದರ ಬಳಿ ಮಿಯಾಜಾಕಿ ಮಾವಿನ ಮರವನ್ನು ನೆಡಲಾಗಿದೆ. ಈ ಮಾವು ಮರ ಇಡೀ ಪಶ್ಚಿಮ ಬಂಗಾಳದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ಮಿಯಾಜಾಕಿ ಮಾವನ್ನು ಮೂಲತಃ ಜಪಾನ್‌ನ ಕ್ಯುಶು ಪ್ರಾಂತ್ಯದ ಮಿಯಾಜಾಕಿ ನಗರದಲ್ಲಿ ಬೆಳೆಯಲಾಯಿತು. ಹಾಗಾಗಿ, ಆ ಮಾವಿಗೆ ಅದೇ ನಗರದ ಹೆಸರನ್ನು ಇಡಲಾಗಿದೆ. ಈ ಮಾವನ್ನು ಜಪಾನ್‌ನಲ್ಲಿ ತೈಯ್ಯಾ ನೋ ತಮಾಗೋ ಎಂದು ಕರೆಯಲಾಗುತ್ತದೆ. ಅಂದರೆ, ಸೂರ್ಯ ಮೊಟ್ಟೆ. ಶೇ.15ರಷ್ಟು ಹೆಚ್ಚು ಸಕ್ಕರೆ ಪ್ರಮಾಣವನ್ನು ಈ ಮಾವು ಹೊಂದಿದೆ.

70 ರ ದಶಕದ ಕೊನೆಯಲ್ಲಿ ಮತ್ತು 80 ರ ದಶಕದ ಆರಂಭದಲ್ಲಿ ಈ ಮಿಯಾಜಾಕಿ ಮಾವಿನ ಉತ್ಪಾದನೆಯು ಮಿಯಾಜಾಕಿಯಲ್ಲಿ ಆರಂಭಿಸಲಾಯಿತು. ಈ ನಗರದ ಬೆಚ್ಚನೆಯ ವಾತಾವರಣ, ಅದರ ದೀರ್ಘಾವಧಿಯ ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯಿಂದಾಗಿ ರೈತರು ಮಾವು ಕೃಷಿಗೆ ಆಕರ್ಷಣೆಗೊಳ್ಳಲು ಕಾರಣವಾಯಿತು. ಏಪ್ರಿಲ್ ಮತ್ತು ಆಗಸ್ಟ್ ನಡುವೆ ಈ ಮಾವಿನ ಸುಗ್ಗಿ ನಡೆಯುತ್ತದೆ.

ಈ ಸುದ್ದಿಯನ್ನೂ ಓದಿ: Mango Season: ಮಾರುಕಟ್ಟೆಗೆ ಬಂತು ಉತ್ತರ ಕನ್ನಡದ ಪ್ರಸಿದ್ಧ ಕರಿಈಶಾಡು ಮಾವು; ಡಜನ್‌ಗೆ 700 ರೂ.!

ಈ ಮಾವಿನಹಣ್ಣುಗಳು ವ್ಯಾಪಕ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಒಳಗೊಂಡಿವೆ. ಇದು ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿಯಾಗಿದೆ. ದೃಷ್ಟಿ ಹೀನತೆಯನ್ನು ತಪ್ಪಿಸುವಲ್ಲಿ ಈ ಮಾವು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಮಿಯಾಜಾಕಿ ಮಾವನ್ನು ಭಾರತ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಫಿಲಿಪ್ಪಿನ್ಸ್‌ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತದೆ. ಭಾರತದಲ್ಲಿ ಪಶ್ಚಿಮ ಬಂಗಾಳ ಮಾತ್ರವಲ್ಲದೇ, ಮಧ್ಯಪ್ರದೇಶದ ಜಬಲ್ಪುರ ನಗರದಲ್ಲಿ ಬೆಳೆಯಲಾಗಿದೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತವೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version