Site icon Vistara News

Video: ಎಂಜಿನಿಯರ್​​ ಕೆನ್ನೆಗೆ ರಪ್​ ಎಂದು ಹೊಡೆದ ಶಾಸಕಿ; ನಡುರಸ್ತೆಯಲ್ಲಿ ನಿಲ್ಲಿಸಿ ಬೈಗುಳ

Woman MLA Geeta Jain Slaps Engineer

#image_title

ಥಾಣೆ: ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳಿಗೆ ಅದರಲ್ಲೂ ಕೆಳ ಹಂತದ ಅಧಿಕಾರಿಗಳಿಗೆ ಬೈಯ್ಯುವುದು, ಸಾರ್ವಜನಿಕವಾಗಿ ಅವಮಾನ ಮಾಡುವುದು ಹೊಸದಲ್ಲ. ಆದರೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಭಯಂದರ್​​ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಶಾಸಕಿ ಗೀತಾ ಜೈನ್ (MLA Geeta Jain)​ ಅವರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಿರಿಯ ಸಿವಿಕ್ ಎಂಜಿನಿಯರ್​​ಗಳಿಬ್ಬರಿಗೆ ‘ನಾಲಾಯಕ್​’ಗಳು ಎಂದು ಕಟುವಾಗಿ ಬೈದಿದ್ದಲ್ಲದೆ, ಒಬ್ಬ ಎಂಜಿನಿಯರ್​ಗೆ ಕಾಲರ್​ ಹಿಡಿದುಕೊಂಡು ಕಪಾಳಕ್ಕೆ ಹೊಡೆದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ, ಹಲವು ಜನರ ಎದುರಲ್ಲೇ ಅಧಿಕಾರಿಗಳಿಗೆ ಶಾಸಕಿ ಹೊಡೆದಿರುವ (MLA Geeta Jain Slaps Engineer) ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಮೀರಾ ಭಯಂದರ್​ ಮುನ್ಸಿಪಲ್​ ಕಾರ್ಪೋರೇಶನ್​ (MBMC)ಯಲ್ಲಿ ಕಿರಿಯ ಅಭಿಯಂತರರು ಆಗಿರುವ ಈ ಇಬ್ಬರೂ ಇನ್ನೂ ಯುವಕರು. ಮನೆಯೊಂದನ್ನು ನೆಲಸಮಗೊಳಿಸಲು ಸೂಚನೆ ನೀಡಿದ್ದಾರೆ. ಅದು ಅಕ್ರಮ ನಿವಾಸ ಎಂದು ಎಂಜಿನಿಯರ್​ಗಳ ವಾದ. ಆದರೆ ಶಾಸಕಿ ಹೇಳುವ ಪ್ರಕಾರ ಎಂಜಿನಿಯರ್​ಗಳು ಧ್ವಂಸಕ್ಕೂ ಮೊದಲು ಮನೆ ಮಾಲೀಕರಿಗೆ ನೋಟಿಸ್ ಕೊಡಲಿಲ್ಲ. ಇವರಿಂದಾಗಿ ತಾಯಿಯೊಬ್ಬಳು, ತನ್ನ ಮಕ್ಕಳೊಂದಿಗೆ ಬೀದಿಗೆ ಬರುವಂತಾಯಿತು ಎಂದು ಎಂಎಲ್​ಎ ಗೀತಾ ಜೈನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಘಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೀತಾ ಜೈನ್​ ‘ಮನೆಯನ್ನು ನೆಲಸಮ ಮಾಡಲಾಗುತ್ತಿತ್ತು. ಆ ಮನೆ ಮಾಲಕಿಯಾದ ಮಹಿಳೆ ಬೇಡ ಎಂದು ಗೋಗರೆಯುತ್ತಿದ್ದರು. ತಮ್ಮ ಕಷ್ಟ ಹೇಳಿಕೊಳ್ಳುತ್ತಿದ್ದರು. ಆದರೆ ಈ ಎಂಜಿನಿಯರ್​ಗಳು ಅವರನ್ನು ನೋಡಿ ನಗುತ್ತ ನಿಂತಿದ್ದರು. ಅವರ ಆ ವರ್ತನೆಗೆ ನಾನು ಸಹಜವಾದ ಪ್ರತಿಕ್ರಿಯೆ ಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ. ‘ನೀವು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದೀರಿ ಎಂದು ನಾವು ಮಹಿಳೆಗೆ ಮೊದಲೇ ಹೇಳಿದ್ದೆವು. ಯಾವ ಸ್ಥಳದಲ್ಲಿ ಒತ್ತುವರಿಯಾಗಿದೆಯೋ ಆ ಭಾಗವನ್ನು ಕೆಡುವುದಾಗಿ ಮಹಿಳೆ ಹೇಳಿದ್ದರು. ಆದರೆ ಅವರು ಅದನ್ನು ಮಾಡಲಿಲ್ಲ ಎಂದು ಎಂಜಿನಿಯರ್​ಗಳು ಹೇಳುತ್ತಾರೆ. ಆದರೆ ಆ ಮಹಿಳೆಯ ಮನೆ ಯಾವುದೇ ಸರ್ಕಾರಿ ಸೌಕರ್ಯವನ್ನು, ರಸ್ತೆಯನ್ನು ಒತ್ತುವರಿ ಮಾಡಿರಲಿಲ್ಲ. ಬದಲಿಗೆ ಕೆಲವು ಖಾಸಗಿ ಬಿಲ್ಡರ್​ಗಳಿಗೆ ಇದರಿಂದ ತೊಂದರೆಯಾಗುತ್ತಿತ್ತು. ಆಕೆ ಪೂರ್ಣ ಮನೆಯನ್ನು ಕೆಡವುವ ಅಗತ್ಯವೂ ಇರಲಿಲ್ಲ. ಆದರೆ ಎಂಜಿನಿಯರ್​ಗಳು ಈ ಮಳೆಗಾಲದಲ್ಲಿ ಆಕೆಯ ಮನೆಯನ್ನು ನೆಲಸಮ ಮಾಡಿದ್ದು ಸರಿಯಲ್ಲ. ಖಾಸಗಿ ಬಿಲ್ಡರ್​ಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮಹಿಳೆಗೆ ತೊಂದರೆಯೊಡ್ಡಿದ್ದಾರೆ’ ಎಂದು ಶಾಸಕಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸಾವರ್ಕರ್ ಪಠ್ಯ ಕೈ ಬಿಟ್ಟಿದ್ದಕ್ಕೆ ಮಹಾರಾಷ್ಟ್ರದಲ್ಲಿ ಗದ್ದಲ ಉದ್ಧವ್‌ರನ್ನು ಕೆಣಕಿದ ದೇವೇಂದ್ರ

‘ಈಗೊಂದು 15 ದಿನಗಳ ಹಿಂದೆ ಈ ಮಹಿಳೆಯ ಮನೆ ನೆಲಸಮದ ಬಗ್ಗೆ ನನ್ನ ಗಮನಕ್ಕೆ ಬಂದಿತ್ತು. ಆಗ ಸದ್ಯಕ್ಕೇನೂ ಆಕೆಯ ಮನೆ ಕೆಡವಬೇಡಿ ಎಂದು ನಾನೇ ಹೇಳಿದ್ದೆ. ಆದರೆ ಎಂಜಿನಿಯರ್​ಗಳು ನನ್ನ ಮಾತು ಕೇಳಲಿಲ್ಲ. ನಾನು ಯಾರಿಗೆ ಹೊಡೆದಿದ್ದೇನೋ, ಅವನು ನನ್ನ ವಿರುದ್ಧ ಪೊಲೀಸರಿಗೆ ದೂರು ಕೊಡಲಿ. ಇವರಿಬ್ಬರು ಮಾಡಿದ ಕೆಲಸದ ಬಗ್ಗೆ ನಾನು ವಿಧಾನಸಭೆಯಲ್ಲೂ ಧ್ವನಿ ಎತ್ತುತ್ತೇನೆ. ನನಗೆ ಯಾವುದೇ ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧನಿದ್ದೇನೆ. ಖಾಸಗಿ ಜಾಗ ಒತ್ತುವರಿಯಾಗಿದೆ ಎಂದ ಮೇಲೆ ಅಲ್ಲಿ ಸರ್ಕಾರಿ ಅಧಿಕಾರಿಗಳು ಹೋಗಿ ಅದು ಹೇಗೆ ಮನೆ ಕೆಡವುತ್ತಾರೆ? ಇದು ಅಧಿಕಪ್ರಸಂಗತನ..’ ಎಂದು ಶಾಸಕಿ ಹೇಳಿದ್ದಾರೆ.

ಎಂಜಿನಿಯರ್​ಗೆ ಶಾಸಕಿ ಹೊಡೆದಿರುವ ವಿಡಿಯೊ ಇಲ್ಲಿದೆ

Exit mobile version