ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ (MLC Election Result) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟವು 11 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದೆ. ಮೇಲ್ಮನೆಯ 11 ಸ್ಥಾನಗಳಿಗೆ ಶುಕ್ರವಾರ (ಜುಲೈ 12) ಮತದಾನ ನಡೆದಿದ್ದು, ಸಂಜೆ ಫಲಿತಾಂಶ ಪ್ರಕಟವಾಯಿತು. ಬಿಜೆಪಿ (BJP) ನೇತೃತ್ವದ ಮೈತ್ರಿಕೂಟ ಸ್ಪರ್ಧಿಸಿದ್ದ ಎಲ್ಲ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಕಾಂಗ್ರೆಸ್‌ನ 7 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಇದು ಪಕ್ಷಕ್ಕೆ ಮುಖಭಂಗ ಉಂಟಾಗಿದೆ.
ಹೌದು, ಕಾಂಗ್ರೆಸ್ ಶಾಸಕರಿಗೆ ವ್ಹಿಪ್ ಜಾರಿಗೊಳಿಸಲಾಗಿತ್ತು. ಎಲ್ಲರೂ ಕಡ್ಡಾಯವಾಗಿ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಬೇಕು ಎಂದು ಸೂಚಿಸಲಾಗಿತ್ತು. ಇದರ ಮಧ್ಯೆಯೂ ಕಾಂಗ್ರೆಸ್‌ನ ಒಟ್ಟು 37 ಶಾಸಕರ ಪೈಕಿ, 7 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಏಳು ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ಘಟಕದಿಂದ ಏಳು ಶಾಸಕರ ಹೆಸರುಗಳನ್ನು ಹೈಕಮಾಂಡ್‌ಗೆ ಕಳುಹಿಸಿದ್ದಾರೆ.
#WATCH | Mumbai: Mahayuti alliance leaders show victory sign after BJP-led Mahayuti alliance swept the Maharashtra legislative council polls, winning nine of 11 seats. pic.twitter.com/5qYcQsjIe1
— ANI (@ANI) July 12, 2024
274 ಸದಸ್ಯರ ಬಲದ ವಿಧಾನಸಭೆಯಿಂದ ಅಭ್ಯರ್ಥಿಗಳು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. 103 ಶಾಸಕರನ್ನು ಹೊಂದಿರುವ ಬಿಜೆಪಿಯ ಎಲ್ಲ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಪಂಕಜಾ ಮುಂಡೆ ಪ್ರಮುಖರಾಗಿದ್ದಾರೆ. ಇನ್ನು ಏಕನಾಥ್ ಶಿಂಧೆ ಬಣದ ಶಿವಸೇನೆಯ ಇಬ್ಬರು ಹಾಗೂ ಅಜಿತ್ ಪವಾರ್ ಬಣದ ಎನ್‌ಸಿಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ಪಡೆದುಕೊಂಡಿದೆ. ಇದರೊಂದಿಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಬಲವು ಹೆಚ್ಚಾದಂತಾಗಿದೆ.
ವಿಧಾನ ಪರಿಷತ್ ಚುನಾವಣೆಗೂ ಮೊದಲು ಹಾರ್ಸ್ ಟ್ರೇಡಿಂಗ್, ರೆಸಾರ್ಟ್ ರಾಜಕಾರಣದ ಭೀತಿ ಉಂಟಾಗಿತ್ತು. ಅಲ್ಲದೆ, ಪ್ರತಿಪಕ್ಷಗಳಿಗೆ ಅಡ್ಡಮತದಾನದ ಭೀತಿಯೂ ಕಾಡುತ್ತಿತ್ತು. ಇಷ್ಟಾದರೂ, ಕಾಂಗ್ರೆಸ್‌ನ 6 ಶಾಸಕರು ಅಡ್ಡ ಮತದಾನ ಮಾಡಿದ್ದು, ಅಜಿತ್ ಪವಾರ್ ಬಣದ ಎನ್‌ಸಿಪಿಗೆ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸಕ್ತ ವರ್ಷದ ಅಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: MLC Election Result: ಮಹಾರಾಷ್ಟ್ರ ಪರಿಷತ್ ಚುನಾವಣೆ; ಬಿಜೆಪಿ ಮೈತ್ರಿಗೆ ಭರ್ಜರಿ ಗೆಲುವು; 11ರ ಪೈಕಿ 9 ಸ್ಥಾನಗಳಲ್ಲಿ ಜಯ