Site icon Vistara News

MLC Election Result: ಮಹಾರಾಷ್ಟ್ರ ಪರಿಷತ್‌ ಚುನಾವಣೆ; ಬಿಜೆಪಿ ಮೈತ್ರಿಗೆ ಭರ್ಜರಿ ಗೆಲುವು; 11ರ ಪೈಕಿ 9 ಸ್ಥಾನಗಳಲ್ಲಿ ಜಯ

MLC Election Result

MLC Election Result: BJP, Allies Sweep Maharashtra Legislative Council Poll, Win 9 Of 11 Seats

ಮುಂಬೈ: ಕುದುರೆ ವ್ಯಾಪಾರ, ರೆಸಾರ್ಟ್‌ ರಾಜಕಾರಣದ ಭೀತಿಯ ಮಧ್ಯೆಯೇ ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ (MLC Election Result) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟವು 11 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದೆ. ಮೇಲ್ಮನೆಯ 11 ಸ್ಥಾನಗಳಿಗೆ ಶುಕ್ರವಾರವೇ (ಜುಲೈ 12) ಮತದಾನ ನಡೆದಿದ್ದು, ಸಂಜೆ ಫಲಿತಾಂಶ ಪ್ರಕಟವಾಯಿತು. ಬಿಜೆಪಿ ನೇತೃತ್ವದ ಮೈತ್ರಿಕೂಟ ಸ್ಪರ್ಧಿಸಿದ್ದ ಎಲ್ಲ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಕಳೆದ ಲೋಕಸಭೆ ಚುನಾವಣೆಯ (Lok Sabha Election 2024) ಕಳಪೆ ಪ್ರದರ್ಶನವನ್ನು ಮೆಟ್ಟಿನಿಂತಿದೆ.

274 ಸದಸ್ಯರ ಬಲದ ವಿಧಾನಸಭೆಯಿಂದ ಅಭ್ಯರ್ಥಿಗಳು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. 103 ಶಾಸಕರನ್ನು ಹೊಂದಿರುವ ಬಿಜೆಪಿಯ ಎಲ್ಲ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಪಂಕಜಾ ಮುಂಡೆ ಪ್ರಮುಖರಾಗಿದ್ದಾರೆ. ಇನ್ನು ಏಕನಾಥ್‌ ಶಿಂಧೆ ಬಣದ ಶಿವಸೇನೆಯ ಇಬ್ಬರು ಹಾಗೂ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ ಒಂದು ಸ್ಥಾನವನ್ನು ಮಾತ್ರ ಪಡೆದುಕೊಂಡಿದೆ. ಇದರೊಂದಿಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಬಲವು ಹೆಚ್ಚಾದಂತಾಗಿದೆ.

ವಿಧಾನ ಪರಿಷತ್‌ ಚುನಾವಣೆಗೂ ಮೊದಲು ಹಾರ್ಸ್‌ ಟ್ರೇಡಿಂಗ್‌, ರೆಸಾರ್ಟ್‌ ರಾಜಕಾರಣದ ಭೀತಿ ಉಂಟಾಗಿತ್ತು. ಅಲ್ಲದೆ, ಪ್ರತಿಪಕ್ಷಗಳಿಗೆ ಅಡ್ಡಮತದಾನದ ಭೀತಿಯೂ ಕಾಡುತ್ತಿತ್ತು. ಇಷ್ಟಾದರೂ, ಕಾಂಗ್ರೆಸ್‌ನ 6 ಶಾಸಕರು ಅಡ್ಡ ಮತದಾನ ಮಾಡಿದ್ದು, ಅಜಿತ್‌ ಪವಾರ್‌ ಬಣದ ಎನ್‌ಸಿಪಿಗೆ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸಕ್ತ ವರ್ಷದ ಅಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ.

ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ಕಳಪೆ ಪ್ರದರ್ಶನ ತೋರಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯು ಒಟ್ಟು 48 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಬಿಜೆಪಿಯು ಈ ಬಾರಿ 9 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಾಂಗ್ರೆಸ್‌, ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಹಾಗೂ ಎನ್‌ಸಿಪಿ (ಶರದ್‌ ಪವಾರ್)‌ ಅವರ ಮಹಾ ವಿಕಾಸ್‌ ಅಘಾಡಿಯು ಈ ಬಾರಿ 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ, ಕಳೆದ ಬಾರಿ 1 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎಯು ರಾಜ್ಯದಲ್ಲಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: Bypolls For 13 Seats: 7 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ಮರುಚುನಾವಣೆ; ಬಲಾಬಲ ಹೇಗಿದೆ?

Exit mobile version