Site icon Vistara News

Anurag Kashyap | ದೊಂಬಿ ಗುಂಪು ನಿಯಂತ್ರಣ ಮೀರಿದೆ, ಈಗ ಬುದ್ದಿ ಹೇಳಿ ಏನು ಲಾಭ? ಸಿನಿಮಾ ಟೀಕೆ ಅನಗತ್ಯ ಎಂಬ ಮೋದಿ ಹೇಳಿಕೆಗೆ ಕಶ್ಯಪ್ ಟಾಂಗ್

Anurag Kashyap

ಮುಂಬೈ: ಸಿನಿಮಾಗಳ ಕುರಿತು ಅನಗತ್ಯ ಟೀಕೆ ಬೇಡ ಎಂದು ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವ ಮಾತುಗಳು ನಾನಾ ಚರ್ಚೆಗಳಿಗೆ ಎಡೆ ಮಾಡಿ ಕೊಟ್ಟಿವೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರು, ”ಪ್ರಧಾನಿಯ ಹೇಳಿದ ಸಲಹೆಗಳು ತುಂಬ ವಿಳಂಬವಾಗಿ ಬಂದಿವೆ. ಈಗ ದೊಂಬಿ ಗುಂಪು ಎಲ್ಲ ನಿಯಂತ್ರಣ ಮೀರಿ ಹೋಗಿದೆ. ಈಗ ಹೇಳಿ ಏನು ಉಪಯೋಗ,” ಎಂದು ಹೇಳಿದ್ದಾರೆ.

ತಮ್ಮ ನಿರ್ದೇಶನದ ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ಅನುರಾಗ್ ಕಶ್ಯಪ್ ಅವರು, ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ವರ್ಷಗಳ ಹಿಂದೆ ಈ ಮಾತುಗಳನ್ನು ಹೇಳಿದ್ದರೆ, ಪರಿಣಾಮ ಬೀರುತ್ತಿತ್ತು. ಆದರೆ, ಈಗ ಅವರ ಮಾತುಗಳು ಪರಿಣಾಮ ಬೀರಲಿಕ್ಕಿಲ್ಲ. ಯಾಕೆಂದರೆ, ಅವರು ತಮ್ಮದೇ ಜನರನ್ನು ನಿಯಂತ್ರಿಸಬೇಕಿದೆ. ಈಗ ಎಲ್ಲವೂ ನಿಯಂತ್ರಣ ಮೀರಿ ಹೋಗಿದೆ. ನನಗನ್ನಿಸುತ್ತದೆ, ಈಗ ಯಾರೂ ಯಾರ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

ಆದರೆ, ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್ ಚಿತ್ರದ ನಿರ್ಮಾಪಕ ಶಾರೀಖ್ ಪಟೇಲ್ ಅವರು ಪ್ರಧಾನಿ ಅವರ ಸಲಹೆಗೆ ಮೆಚ್ಚುಗೆ ವ್ಯಕ್ತಪಡಿಸಿ, ”ಪ್ರಧಾನಿ ಅವರು ಸಲಹೆ ನೀಡಿರುವುದು ಒಳ್ಳೆಯ ನಡೆ. ಇದರಿಂದ ಒಳ್ಳೆಯದಾಗುತ್ತದೆ ಎಂದು ಭಾವಿಸುವೆ. ಉದ್ಯಮದ ವಿರುದ್ಧ ಇರುವ ಎಲ್ಲ ಋಣಾತ್ಮಕತೆ ಅಂತ್ಯವಾಗಲಿದೆ ಎಂದು ಭಾವಿಸುತ್ತೇನೆ,” ಎಂದು ಹೇಳಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅನುರಾಗ್ ಕಶ್ಯಪ್, ”ನಾನು ಹೇಳಿದ್ದು ತಪ್ಪು ಎಂದು ಸಾಬೀತಾಗಲಿ. ಒಂದೊಮ್ಮೆ ನಾನು ಹೇಳಿದ್ದು ಎಂದು ಪ್ರೂವ್ ಮಾಡಿದರೆ, ನಾನೂ ಸಂತೋಷ ಪಡುತ್ತೇನೆ,” ಎಂದು ಹೇಳಿದ್ದರು.

ಇದನ್ನೂ ಓದಿ | PM Narendra Modi | ಸಿನಿಮಾಗಳ ವಿರುದ್ದ ಅನಗತ್ಯ ಟೀಕೆ! ಪಿಎಂ ಮೋದಿ ಮಾತುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಿತ್ರೋದ್ಯಮ

Exit mobile version