ಭೂಗತ ಜಗತ್ತಿನ ಡಾನ್, ಜನರನ್ನು ಬೆದರಿಸಿಯೇ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದ, ಎದುರಾಳಿಗಳನ್ನು ನಿರ್ದಯವಾಗಿ ಕೊಲ್ಲುತ್ತಿದ್ದ ಅತೀಕ್ ಅಹ್ಮದ್‌ನ ಮಗ ಅಸಾದ್ ಅಹ್ಮದ್ ಮತ್ತು ಆತನ ಸಹಚರ ಎನ್‌ಕೌಂಟರ್‌ನಲ್ಲಿ ಉತ್ತರ ಪ್ರದೇಶ ಪೊಲೀಸರಿಗೆ ಬಲಿಯಾಗಿದ್ದಾರೆ. ಬಿಎಸ್‌ಪಿ ಮಾಜಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಎಂಬುವರನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ಮಾಫಿಯಾ ಗ್ಯಾಂಗ್‌ನ ಮುಖ್ಯಸ್ಥ ಈ ಆತೀಕ್ ಅಹಮದ್. ಆತನ ಮಗ ಈ ಅಸಾದ್. ಈ ಪ್ರಕರಣದ ಆರೋಪಿಗಳಲ್ಲಿ ಇನ್ನೂ ಒಬ್ಬಾತ ಹೀಗೇ ಎನ್‌ಕೌಂಟರ್ ಆಗಿದ್ದಾನೆ. ಸದ್ಯ ಆತೀಕ್ ತನ್ನ ಅಂತ್ಯವನ್ನು ನಿರೀಕ್ಷಿಸುತ್ತ ಜೈಲಿನಲ್ಲಿದ್ದಾನೆ. ಉತ್ತರ ಪ್ರದೇಶದಲ್ಲಿ ಕ್ಷಿಪ್ರ ಶಾಂತಿಯನ್ನು ಸ್ಥಾಪಿಸುತ್ತಿರುವ ಈ ಎನ್‌ಕೌಂಟರ್‌ಗಳ ಮಾದರಿ ಕುತೂಹಲಕಾರಿಯಾಗಿದೆ.
ಕೆಲವೇ ವರ್ಷಗಳ ಹಿಂದೆ ಉತ್ತರ ಪ್ರದೇಶ ರಾಜ್ಯವು ಕ್ರಿಮಿನಲ್‌ಗಳ ಸ್ವರ್ಗವಾಗಿತ್ತು. ಪ್ರತಿ ಜಿಲ್ಲೆಯನ್ನೂ ಒಂದೊಂದು ಮಾಫಿಯಾ ತಂಡ ಆಳುತ್ತಿತ್ತು. ಆಳುವ ಪಕ್ಷದ- ಸರ್ಕಾರದ ಜತೆ ಅನೈತಿಕ ಮೈತ್ರಿ ಮಾಡಿಕೊಂಡಿರುತ್ತಿದ್ದ ಈ ಗುಂಪುಗಳು ಸಾರ್ವಜನಿಕ ಜೀವನವನ್ನು ನರಕಸದೃಶವಾಗಿಸಿದ್ದವು. ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಾರ್ಟಿಯ ಆಡಳಿತದ ಕಾಲದಲ್ಲಿ ಮಾಫಿಯಾ ಡಾನ್‌ಗಳೇ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದೂ ಇತ್ತು. ಒಂದು ಹಂತದಲ್ಲಿ ಸರ್ಕಾರದ ಶೇ.50ಕ್ಕೂ ಅಧಿಕ ಸಚಿವರು ಕ್ರಿಮಿನಲ್ ಅಪರಾಧಗಳನ್ನು ಹೊತ್ತವರಾಗಿದ್ದರು. ಆದರೆ ಈಗ ಯೋಗಿ ಆಡಳಿತದಲ್ಲಿ ಉತ್ತರ ಪ್ರದೇಶದ ಪಾತಕ ಲೋಕದ ಚಿತ್ರಣವೇ ಬದಲಾಗಿದೆ. ಮಾಫಿಯಾ ಡಾನ್‌ಗಳು ಯೋಗಿ ಎಂದರೆ ಗಡಗಡ ನಡುಗುತ್ತಿದ್ದಾರೆ. ಕ್ರಿಮಿನಲ್ ಕೃತ್ಯ ಎಸಗಿ ಬಚಾವಾಗಲು ಸಾಧ್ಯವೇ ಇಲ್ಲ ಎಂಬುದು ಪಾತಕಿಗಳಿಗೆ ಈಗ ಖಾತರಿಯಾಗಿದೆ. ಕೊಲೆ, ದರೋಡೆಯಂತಹ ಗುರುತರ ಪಾತಕ ಕೃತ್ಯಗಳಲ್ಲಿ ಭಾಗಿಯಾದವರ ಮನೆಗಳನ್ನು ಉ.ಪ್ರ ಸರ್ಕಾರ ನೆಲಸಮ ಮಾಡುತ್ತಿದೆ. ಹಾಗಾಗಿ ಕ್ರಿಮಿನಲ್ ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಪೊಲೀಸರನ್ನೇ ಕೊಂದಿದ್ದ ವಿಕಾಸ್ ದುಬೆಯಂಥ ಕುಖ್ಯಾತ ಕ್ರಿಮಿನಲ್ ಗಳನ್ನು ಈಗಾಗಲೇ ಉ.ಪ್ರದೇಶ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.
ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಸುಮಾರು 10 ಸಾವಿರ ಎನ್‌ಕೌಂಟರ್‌ಗಳು ನಡೆದಿವೆ. ಈವರೆಗೆ 173 ಕ್ರಿಮಿನಲ್‌ಗಳು ಎನ್‌ಕೌಂಟರ್‌ಗಳಲ್ಲಿ ಬಲಿಯಾಗಿದ್ದಾರೆ. ಕಳೆದ ಆರು ವರ್ಷದಲ್ಲಿ ಸರಾಸರಿ 13 ದಿನಕ್ಕೆ ಒಬ್ಬ ಕ್ರಿಮಿನಲ್‌ನನ್ನು ಹತ್ಯೆ ಮಾಡಲಾಗಿದೆ. 2017ರ ಮಾರ್ಚ್‌ನಿಂದ 2023ರ ಮಾರ್ಚ್ 6ರವರೆಗೆ 23,069 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಭಯಾನಕ ಕ್ರಿಮಿನಲ್‌ಗಳ ಕುರಿತು ಮಾಹಿತಿ ನೀಡಿದರೆ ಸುಮಾರು 75 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ಬಹುಮಾನ ನೀಡಲಾಗುತ್ತಿದೆ. ಉತ್ತರ ಪ್ರದೇಶದ ಸಾವಿರಾರು ಕ್ರಿಮಿನಲ್‌ಗಳು ರಾಜ್ಯ ಬಿಟ್ಟು ಪಕ್ಕದ ರಾಜ್ಯಗಳಿಗೆ ಪರಾರಿಯಾಗಿದ್ದಾರೆ. ಕುಖ್ಯಾತ ಪಾತಕಿಗಳು ಜೀವಭಯದಿಂದ ಜೈಲಿನಿಂದ ಹೊರಬರಲು ನಿರಾಕರಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಕುಖ್ಯಾತಿ ಗಳಿಸಿದ್ದ ಒಂದು ರಾಜ್ಯ ಕೆಲವೇ ವರ್ಷಗಳಲ್ಲಿ ಹೇಗೆ ಅಪರಾಧ ಕೃತ್ಯಗಳಿಗೆ ಲಗಾಮು ಹಾಕಬಹುದು ಎನ್ನುವುದಕ್ಕೆ ಉತ್ತರ ಪ್ರದೇಶ ಮಾದರಿಯಾಗಿದೆ. ಇದರ ಹಿಂದೆ ಯೋಗಿ ಆದಿತ್ಯನಾಥ್ ಅವರ ದಿಟ್ಟ ನಿಲುವು ಕೆಲಸ ಮಾಡಿದೆ. ಅವರು ಸದನದಲ್ಲೇ ʼಮಾಫಿಯಾವನ್ನು ಮಣ್ಣಲ್ಲಿ ಹೂತು ಹಾಕುತ್ತೇನೆʼ ಎಂದು ಗುಡುಗಿದ್ದರು. ಹಾಗೇ ನಡೆದುಕೊಂಡಿದ್ದಾರೆ. ಪೊಲೀಸರಿಗೆ ಮುಕ್ತ ಹಸ್ತವನ್ನು ನೀಡಿದ್ದಾರೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭಾರತ ಮುಸ್ಲಿಮರ ಸ್ವರ್ಗ, ಆದರೂ ಅಪಪ್ರಚಾರ!
ಹೀಗೆ ಎನ್‌ಕೌಂಟರ್‌ಗಳಾದಾಗ ಎನ್‌ಕೌಂಟರ್ ಮಾಡಿದವರೂ ಅನೇಕ ಸಂಕಷ್ಟ ಎದುರಿಸಬೇಕಾಗುತ್ತದೆ. ಮಾನವ ಹಕ್ಕುಗಳ ಸಂಘಟನೆಯವರು ಪೊಲೀಸರನ್ನು ಕಟಕಟೆಗೆ ಎಳೆದು ನಿಲ್ಲಿಸುತ್ತಾರೆ. ಅಖಿಲೇಶ್ ಯಾದವ್, ಮಾಯಾವತಿ ಮುಂತಾದವರು ಇದು ನಕಲಿ ಎನ್‌ಕೌಂಟರ್ ಎಂದಿದ್ದಾರೆ. ಆದರೆ ಈ ಮಾಫಿಯಾ ಗ್ಯಾಂಗ್‌ಗಳನ್ನು ಬೆಳೆಸಿದವರೂ ಅವರೇ ಅಲ್ಲವೇ? ಆಡಳಿತದಲ್ಲಿದ್ದವರು ಮಾಫಿಯಾಗಳನ್ನು ಬೆಳೆಸಬಹುದು; ಮುಗಿಸಬಾರದು ಎಂದರೆ ಹೇಗಾಗುತ್ತದೆ?
ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಉತ್ತರ ಪ್ರದೇಶ ಕುಖ್ಯಾತಿಗೊಳಗಾಗಿತ್ತು. ಇಂಥ ಉತ್ತರ ಪ್ರದೇಶ ಈಗ ಪಾತಕಿಗಳನ್ನು ಮಟ್ಟ ಹಾಕುವುದರಲ್ಲಿ ದೇಶಕ್ಕೇ ಮಾದರಿ ಎನಿಸಿದೆ. ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿ ಇದ್ದರೆ ಎಂಥ ಮಾಫಿಯಾವನ್ನೂ ಮಟ್ಟ ಹಾಕಬಹುದು ಎನ್ನುವುದನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸಾಬೀತುಪಡಿಸಿದೆ.