ನವದೆಹಲಿ: ನರೇಂದ್ರ ಮೋದಿ(Modi 3.0 Cabinet) ಮೂರನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರಲು ಇನ್ನೇನು ಕ್ಷಣಗಣನೆ ಶುರುವಾಗಿದೆ. ಸಂಜೆ 7.15ಕ್ಕೆ ಪ್ರಮಾಣವಚನ(Modi’s swearing-in) ಕಾರ್ಯಕ್ರಮ ಆರಂಭವಾಗಲಿದೆ. ನೆರೆಯ 7 ರಾಷ್ಟ್ರಗಳ ಗಣ್ಯರು ಸೇರಿದಂತೆ ಒಟ್ಟು 10,000ಕ್ಕೂ ಅಧಿಕ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಯಾವ್ಯಾವ ರೀತಿಯ ವ್ಯವಸ್ಥೆ ಮಾಡಲಾಗಿದೆ? ಇನ್ನು ಪ್ರಧಾನಿ ಮೋದಿ ಐದು ವರ್ಷಗಳನ್ನು ಪೂರೈಸುತ್ತಾರೋ..ಇಲ್ಲವೋ ಎಂಬ ಬಗ್ಗೆ ಜ್ಯೋತಿಷಿಗಳು ಹೇಳೋದೇನು ಎಂಬುದ್ನು ನೋಡೋಣ.
ಮೋದಿ ಐದು ವರ್ಷಗಳ ಅವಧಿ ಪೂರ್ಣಗೊಳಿಸ್ತಾರಾ?
ಇಂದು ಸಂಜೆ 7.15ಕ್ಕೆ ಮೋದಿ ಪದಗ್ರಹಣ ನಡೆಯಲಿದೆ. ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುತ್ತಿರುವ ಇಂದಿನ ದಿನ ಹೇಗಿದೆ. ಜ್ಯೋತಿಷ್ಯದ ಪ್ರಕಾರ ಇಂದಿನ ದಿನ ವಿಶೇಷ ಹೇಗಿದೆ ಎನ್ನುವುದನ್ನು ನೋಡುವುದಾದರೆ ಈ ದಿನ ಜ್ಯೇಷ್ಠ ಮಾಸದ ಶುದ್ಧ ತದಿಗೆ ಪುನರ್ವಸು ನಕ್ಷತ್ರ. ಈ ದಿನ ಸಂಜೆ 7.15 ಕ್ಕೆ ವೃಶ್ಚಿಕ ಲಗ್ನದಲ್ಲಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭ ನಡೆಯುತ್ತಿದೆ.
ಈ ದಿನ ಭಾನುವಾರ ರಾಜರಿಗೆ ಒಳ್ಳೆಯದು. ಭಾನುವಾರದ ಅಧಿಪತಿ ಸೂರ್ಯ ಗ್ರಹಗಳ ರಾಜ. ಆದ್ದರಿಂದ ಈ ಮಹೂರ್ತಕ್ಕೆ ರಾಜಬಲ. ಮೋದಿಯವರದು ವೃಶ್ಚಿಕ ರಾಶಿ. ಪುನರ್ವಸು ನಕ್ಷತ್ರ ಗುರುವಿನ ನಕ್ಷತ್ರ. ಈ ನಕ್ಷತ್ರದಲ್ಲಿ ಏನೇ ಶುಭಕಾರ್ಯ ಮಾಡಿದರೂ ಪುನಃ ಪುನಃ ಮಾಡುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಪ್ರಮಾಣವಚನದ ಸಮಯದ ಮಹೂರ್ತ ಬಹಳ ಪ್ರಶಸ್ತವಾಗಿದೆ. ದಿನ ತಿಥಿ ವಾರ ನಕ್ಷತ್ರ ಲಗ್ನ ಎಲ್ಲವೂ ಮಹೋನ್ನತವಾಗಿದೆ. ಮೋದಿಯವರ ರಾಶಿಗೆ ಗುಣಾತ್ಮಕವಾಗಿದೆ ಎಂದು ಜೋತಿಷಿಗಳು ಹೇಳುತ್ತಾರೆ. ಹೀಗಾಗಿ ಮೋದಿ ಈ ಬಾರಿಯೂ ಐದು ವರ್ಷ ಪೂರೈಸುವುದು ಖಚಿತ ಎಂದು ಹೇಳುತ್ತಾರೆ.
ಅತಿಥಿಗಳಿಗೆ ಭರ್ಜರಿ ಊಟದ ವ್ಯವಸ್ಥೆ
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ದೇಶ-ವಿದೇಶಗಳ ಗಣ್ಯರಿಗೆ ಭಾರತದ ಪ್ರಮುಖ ಸಾಂಪ್ರಾದಾಯಿಕ ಭಕ್ಷ್ಯಗಳ ಥಾಲಿಯನ್ನು ನೀಡಲಾಗುತ್ತದೆ. ಮೋದಿ ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಇಬ್ಬರೂ ಸಸ್ಯಾಹಾರಿಗಳಾಗಿದ್ದು, ಪ್ರಮುಖವಾಗಿ ಗುಜರಾತಿ ಮತ್ತು ಒಡಿಯಾ ಸಾಂಪ್ರದಾಯಿಕ ಆಹಾರವನ್ನು ಗಣ್ಯರಿಗೆ ಬಡಿಸಲಾಗುತ್ತದೆ. ಎಲ್ಲಾ ಅತಿಥಿಗಳಿಗೆ ಶುದ್ಧ ಸಸ್ಯಾಹಾರಿ ಊಟವನ್ನು ನೀಡಲಾಗುತ್ತದೆ. ಚಾಟ್, ಧೋಕ್ಲಾ, ಕೇಸರಿ ಭಾತ್, ಮಶ್ರೂಮ್ ಕಬಾಬ್ ಮತ್ತು ಹರೇ ಭರೇ ಕಬಾಬ್ಈ ಎಲ್ಲಾ ಭಕ್ಷ್ಯಗಳು ಡಿನ್ನರ್‌ನಲ್ಲಿರಲಿರಲಿವೆ.
ಭಾನುವಾರ ಸಂಜೆ 7.15ಕ್ಕೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ. ಸುಮಾರು 8 ಸಾವಿರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ದೆಹಲಿಯ ಎಲ್ಲೆಡೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸುಮಾರು 500 ಸಿಸಿಟಿವಿಗಳ ಕಣ್ಗಾವಲು ಇದೆ. ನೋ ಫ್ಲೈಯಿಂಗ್ ಜೋನ್ ಎಂದು ಘೋಷಿಸಿದ ಕಾರಣ ಯಾವುದೇ ಡ್ರೋನ್‌ಗಳ ಹಾರಾಟ ನಡೆಸುವಂತಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಷ್ಟ್ರಪತಿ ಭವನಕ್ಕೂ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!