ನವದೆಹಲಿ: ಬಹುಮತದೊಂದಿಗೆ ಎನ್‌ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಇಂದು (ಜೂನ್ 9) ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಇದೀಗ ಎಲ್ಲರಿಗೂ ಈ ಬಾರಿ ಪ್ರಧಾನಿ ಮೋದಿ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲ ಇದ್ದೇ ಇದೆ. ಈಗಾಗಲೇ ಕೆಲವು ಅಧಿಕೃತ ಮೂಲಗಳ ಪ್ರಕಾರ ಈ ಬಾರಿ ಕೇಂದ್ರ ಸಚಿವ ಸಂಪುಟ(Modi 3.0 Cabinet)ದಲ್ಲಿ ಎನ್‌ಡಿಎ ಮೈತ್ರಿಕೂಟದ 34ಮಂದಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಮಿತ್ರ ಪಕ್ಷಗಳ ಸಹಾಯದೊಂದಲೇ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಖಾತೆ ಹಂಚಿಕೆಯೇ ಬಹಳಷ್ಟು ಸವಾಲಿನ ಕಾರ್ಯವಾಗಿದೆ.
ಹೀಗಿರುವಾಗ ಎನ್‌ಡಿಎ ಒಕ್ಕೂಟದ ಯಾವ ಪಕ್ಷಕ್ಕೆ ಯಾವ ಖಾತೆ ನೀಡುತ್ತದೆ? ಬಿಜೆಪಿ ಎಷ್ಟು ಖಾತೆಗಳನ್ನು ತನ್ನ ಬಳಿ ಇರಿಸಿಕೊಳ್ಳಲಿದೆ ಎಂಬುದು ಈ ಕುತೂಹಕ್ಕೀಡು ಮಾಡಿರುವ ಸಂಗತಿ. ಅಧಿಕೃತ ಮಾಹಿತಿ ಪ್ರಕಾರ ಬಿಜೆಪಿ ಪ್ರಮುಖ ನಾಲ್ಕು ಖಾತೆಗಳನ್ನು ತನ್ನ ಬಳಿಯೇ ಇರಿಸಿಕೊಳ್ಳಲಿದೆ ಎನ್ನಲಾಗಿದೆ. ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳು ಸೇರಿದಂತೆ ಎಲ್ಲಾ ನಾಲ್ಕು ಪ್ರಮುಖ ಸಚಿವಾಲಯಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಈ ಬಾರಿ ಹಳೆಯ ಮತ್ತು ಹೊಸ ಮುಖಗಳ ನಡುವೆ ಸಮತೋಲನ ಕಾಪಾಡಿಕೊಂಡು ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ನಾಲ್ಕು ಪ್ರಮುಖ ಸ್ಥಾನಗಳ ಜೊತೆಗೆ ಕೇಸರಿ ಪಕ್ಷವು ರೈಲ್ವೆ, ರಸ್ತೆ ಸಾರಿಗೆ, ಕಾನೂನು, ಮಾಹಿತಿ ತಂತ್ರಜ್ಞಾನ ಮತ್ತು ಶಿಕ್ಷಣದಂತಹ ಇತರ ಕೆಲವು ಪ್ರಮುಖ ಸಚಿವಾಲಯಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇನ್ನು ಕಳೆದ ಸಚಿವ ಸಂಪುಟದ 10 ಸಚಿವರು ಈ ಬಾರಿಯೂ ಮುಂದುವರೆಯಲಿದ್ದಾರೆ. ಅಮಿತ್ ಶಾ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಎಸ್ ಜೈಶಂಕರ್, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ಹರ್ದೀಪ್ ಸಿಂಗ್ ಪುರಿ ಮತ್ತು ಅಶ್ವಿನಿ ವೈಷ್ಣವ್ ಅವರು ಕೇಂದ್ರ ಸಚಿವರಾಗಿ ಮುಂದುವರಿಯಲಿದ್ದು, ಅನುರಾಗ್ ಠಾಕೂರ್ ಅವರನ್ನು ಕೈಬಿಡಲಾಗಿದೆ.
ನಿತೀಶ್ ಕುಮಾರ್ ನೇತೃತ್ವದ JD(U) ಒಂದು ಕ್ಯಾಬಿನೆಟ್ ಸ್ಥಾನ ಮತ್ತು ಒಬ್ಬ ರಾಜ್ಯ ಸಚಿವ (MoS) ಸ್ಥಾನ ಪಡೆಯಲಿದೆ. ಇನ್ನು ತೆಲುಗು ದೇಶಂ ಪಕ್ಷದ (ಟಿಡಿಪಿ) ಹೊಸದಾಗಿ ಚುನಾಯಿತರಾದ ಇಬ್ಬರು ಸಂಸದರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಲು ಸಿದ್ಧರಾಗಿದ್ದಾರೆ, ಇದು ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಸಜ್ಜಾಗಿದೆ ಎಂದು ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷವು ಭಾನುವಾರ ಖಚಿತಪಡಿಸಿದೆ.
ಟಿಡಿಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪುತ್ರ ರಾಮ್ ಮೋಹನ್ ನಾಯ್ಡು, ಯರ್ರಾನ್ ನಾಯ್ಡು (36) ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ. ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅತ್ಯಂತ ಕಿರಿಯ ಕೇಂದ್ರ ಕ್ಯಾಬಿನೆಟ್ ಸಚಿವರಾಗಲಿದ್ದಾರೆ.
ಇದನ್ನೂ ಓದಿ: Narendra Modi: ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ