Site icon Vistara News

Modi 8 years: ಮೋದಿ – ಶಾ ನೇತೃತ್ವದಲ್ಲಿ ಬಿಜೆಪಿ ಈ ಪರಿ ಬೆಳೆದಿದ್ದು ಹೇಗೆ?

Modi 8 years

ನವದೆಹಲಿ: ನರೇಂದ್ರ ಮೋದಿ ಸರ್ಕಾರಕ್ಕೆ ಇಂದಿಗೆ 8 ವರ್ಷ ತುಂಬಿತು (Modi 8 years). ಈ ಸಂದರ್ಭದಲ್ಲಿ ಮೋದಿ-ಶಾ ಜೋಡಿಯ ನಾಯತ್ವದ ಅಡಿಯಲ್ಲಿ ಚುನಾವಣಾ ರಂಗದಲ್ಲಿರುವ ಬಿಜೆಪಿಯು ಬಡವರು, ಶ್ರೀಮಂತರು ಮತ್ತು ವಂಚಿತ ವರ್ಗದವರಿಗೆ ಅತ್ಯಂತ ಆಪ್ತ ಪಕ್ಷವಾಗಿ ಹೇಗೆ ಮುಂಚೂಣಿಯಲ್ಲಿದೆ ಎಂಬುದನ್ನು ವಿಶ್ಲೇಷಣಾತ್ಮಕವಾಗಿ ನೋಡುವ ಯತ್ನ ಇಲ್ಲಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಅನುಕೂಲವಾಗಿರುವ ಮೊದಲ ಮತ್ತು ಪ್ರಮುಖ ಅಂಶವೆಂದರೆ ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವ ಮತ್ತು ಅವರು ಪಡೆದುಕೊಂಡಿರುವ 135 ಕೋಟಿ ಜನರ ವಿಶ್ವಾಸ. ವಿಕಾಸ ಪುರುಷ’ ಎಂಬ ಅವರ ಚಿತ್ರಣ ಮತ್ತು ಕಳೆದ 8 ವರ್ಷಗಳಲ್ಲಿ ಬಿಜೆಪಿಯು ಶ್ರೀಮಂತರು ಮತ್ತು ಬಡವರ ಎರಡೂ ವರ್ಗದೊಂದಿಗೆ ಸಂಪರ್ಕ ಸಾಧಿಸಲು ಸಮರ್ಥವಾಗಿದೆ. ಅಲ್ಲದೆ ಅವರ ಆಡಳಿತದ ಶೈಲಿಯಿಂದಾಗಿ ಬಿಜೆಪಿಗೆ ದೇಶದ ಉದ್ದಗಲಕ್ಕೂ ವ್ಯಾಪಿಸಲು ಸಹಾಯ ಮಾಡಿದೆ. ಕಟ್ಟಾ ಹಿಂದೂ ನಾಯಕ ಎಂಬ ಅವರ ಚಿತ್ರಣವು ಮತದಾರರನ್ನು ಮತ್ತಷ್ಟು ಒಗ್ಗೂಡಿಸಲು ಕಾರಣವಾಯಿತು. ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಉದ್ಧಾರಕರು ತಾವೇ ಎಂದು ಬಿಂಬಿಸಲು ಸ್ಪರ್ಧಿಸುತ್ತಿದ್ದ ಪಕ್ಷಗಳ ಓಲೈಕೆ ರಾಜಕೀಯವನ್ನು ಕೊನೆಗೊಳಿಸಿತು.

ಕಳೆದ ಒಂದು ದಶಕದಲ್ಲಿ ಬಿಜೆಪಿಯು ಅತಿ ಬಲಿಷ್ಠ ಪಕ್ಷವಾಗಿ ಬೆಳೆಯುವಲ್ಲಿ ಪ್ರಧಾನಿ ಮೋದಿಯವರ ಈ ಎಲ್ಲಾ ಗುಣಗಳು ಪ್ರಮುಖ ಪಾತ್ರ ವಹಿಸಿವೆ. 2014 ರಲ್ಲಿ ಕಾಂಗ್ರೆಸ್ ನೆಲಕಚ್ಚುವುದರೊಂದಿಗೆ ಬಿಜೆಪಿಯ ಗೆಲುವಿನ ಸರಣಿ ಪ್ರಾರಂಭವಾಯಿತು. 2019 ರಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತು, 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 21 ಹೆಚ್ಚುವರಿ ಸ್ಥಾನಗಳನ್ನು ಗೆದ್ದಿತು. 543 ಸದಸ್ಯರ ಲೋಕಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರಕಿಸಿ ಕೊಡುವಲ್ಲಿ ಮೋದಿ ವರ್ಚಸ್ಸು ಪ್ರಧಾನವಾಗಿ ಕೆಲಸ ಮಾಡಿತು.

ಮೋದಿ ಪ್ರಧಾನಿಯಾಗಬೇಕೆಂದು ಜನರು ಬಿಜೆಪಿ ಪರವಾಗಿ ಅಗಾಧವಾಗಿ ಮತ ಚಲಾಯಿಸಿದರು. ಕಳೆದ 30 ವರ್ಷಗಳಲ್ಲಿ ಯಾವುದೇ ರಾಜಕೀಯ ಪಕ್ಷ ಪಡೆಯದಷ್ಟು ಬೃಹತ್ ಪ್ರಮಾಣದ ಗೆಲುವನ್ನು 2014 ರಲ್ಲಿ ಬಿಜೆಪಿ ಪಡೆಯಿತು. ಅದರೊಂದಿಗೆ ಅಸ್ಥಿರತೆಗೆ ಕಾರಣವಾಗಿದ್ದ ಸಮ್ಮಿಶ್ರ ರಾಜಕೀಯ ಕೊನೆಗೊಂಡಿತು. ಐತಿಹಾಸಿಕವಾಗಿ ಪ್ರತಿಬಿಂಬಿತವಾದ ರಾಷ್ಟ್ರೀಯತಾವಾದಿ ವಿಚಾರಗಳನ್ನು ಮತ್ತಷ್ಟು ಬಲಯುತವಾಗಿ ಮುನ್ನೆಲೆಗೆ ತರುವಲ್ಲಿ ಬಿಜೆಪಿ ಸಮರ್ಥವಾಯಿತು.

ಬಿಜೆಪಿಗೆ ಪ್ರಾಬಲ್ಯ ತಂದುಕೊಟ್ಟ ಮತ್ತೊಂದು ಶಕ್ತಿಮೂಲವೆಂದರೆ ಪಕ್ಷದ ಅಧ್ಯಕ್ಷರಾಗಿದ್ದ ಅಮಿತ್ ಶಾ. 2014 ರಲ್ಲಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವಲ್ಲಿ ಅವರ ಸಂಘಟನಾ ಕೌಶಲ್ಯವೇ ಪ್ರಮುಖ ಭೂಮಿಕೆ ವಹಿಸಿತ್ತು. ಈ ಗೆಲುವಿನ ನಂತರ ಕೂಡಲೇ ಅಮಿತ್ ಶಾ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸಲಾಯಿತು. ಅಮಿತ್ ಶಾ ಅವರ ಸಮೃದ್ಧ ಸಂಘಟನಾ ಕೌಶಲ್ಯ ಮತ್ತು ಕಾರ್ಯತಂತ್ರಗಳು ಬಿಜೆಪಿಯ ಶಕ್ತಿಯ ಮತ್ತೊಂದು ಮೂಲವಾಗಿದೆ. 2019 ರ ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಗೃಹ ಸಚಿವರಾಗಿ ನೇಮಕಗೊಂಡ ನಂತರವೂ ಅವರ ಸಂಘಟನಾ ಕೌಶಲ್ಯವು ಬಿಜೆಪಿಯ ಸಂಘಟನಾ ರಚನೆಯನ್ನು ಬಲವಾಗಿ ಬೆಳೆಯುವಂತೆ ಮಾಡಿದೆ.

ಪಕ್ಷದ ಸದಸ್ಯತ್ವ ನೆಲೆಯ ವಿಸ್ತರಣೆ, ಕಾರ್ಯಕರ್ತರೊಂದಿಗೆ ನಿಯಮಿತ ತೊಡಗಿಸಿಕೊಳ್ಳುವಿಕೆ ಮತ್ತು ಪ್ರಚಾರವು ನಿಯಮಿತವಾಗಿ ಮತದಾರರ ಮನಸ್ಥಿತಿಯನ್ನು ಅಳೆಯಲು ಪಕ್ಷಕ್ಕೆ ಅವಕಾಶ ಮಾಡಿಕೊಟ್ಟಿದೆ. ಐದು ರಾಜ್ಯಗಳ ಇತ್ತೀಚಿನ ಚುನಾವಣಾ ಫಲಿತಾಂಶಗಳು ಮತ್ತೊಮ್ಮೆ ಪಕ್ಷದ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಮತದಾರರ ಒಲವನ್ನು ಪ್ರದರ್ಶಿಸಿವೆ.

ಭಾರತದ ಶೇ.44ರಷ್ಟು ಭೂಭಾಗದಲ್ಲಿ ಬಿಜೆಪಿ ಆಡಳಿತ

ಕಳೆದ 8 ವರ್ಷಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಅದ್ಭುತ ಚುನಾವಣಾ ವಿಜಯಗಳು ಪ್ರತಿಪಕ್ಷಗಳನ್ನು ಸ್ಪಷ್ಟವಾಗಿ ಕಂಗೆಡಿಸಿವೆ. ಅಂಕಿಅಂಶಗಳ ಪ್ರಕಾರ, ಬಿಜೆಪಿಯು ಪ್ರಸ್ತುತ 17 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರಗಳನ್ನು ಹೊಂದಿದೆ. ಇದು 44% ಪ್ರದೇಶವನ್ನು ಮತ್ತು 49.5% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿದೆ. ಈ 17 ರಾಜ್ಯಗಳೆಂದರೆ- ಕರ್ನಾಟಕ, ಗೋವಾ, ಮಧ್ಯಪ್ರದೇಶ, ಗುಜರಾತ್, ಬಿಹಾರ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಯುಪಿ, ಉತ್ತರಾಖಂಡ, ಹರಿಯಾಣ ಮತ್ತು ಹಿಮಾಚಲ ಪ್ರದೇಶ. ಕೇಂದ್ರಾಡಳಿತ ಪ್ರದೇಶ ಪುದುಚೇರಿ.

ಇದನ್ನೂ ಓದಿ| Modi 8 years: ದೇಶದಲ್ಲಿ ಕ್ರಾಂತಿ ಮಾಡಿದ 8 ಜನೋಪಯೋಗಿ ಯೋಜನೆಗಳು

2018 ರಲ್ಲಿ ಬಿಜೆಪಿ ಆಡಳಿತ ಉತ್ತುಂಗದತ್ತು. ಆಗ ಬಿಜೆಪಿ ನೇರವಾಗಿ ಅಥವಾ ಅದರ ಮೈತ್ರಿ ಪಾಲುದಾರರ ಮೂಲಕ 21 ರಾಜ್ಯಗಳನ್ನು ಆಳಿತು. ಇದು ಜನಸಂಖ್ಯೆಯ ಶೇ 70 ಮತ್ತು ಭೂಪ್ರದೇಶದ ಶೇ 76 ರಷ್ಟನ್ನು ಒಳಗೊಂಡಿತ್ತು.
ಬಿಜೆಪಿಯು ತನ್ನ ಹಿರಿಯ ನಾಯಕರಿಂದ ತಳಮಟ್ಟದ ಕಾರ್ಯಕರ್ತರವರೆಗೆ ಮತದಾರರೊಂದಿಗೆ ಹೇಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ಸಂಘಟನಾತ್ಮಕ ಶಕ್ತಿ

ಬಿಜೆಪಿಯ ಸಂಘಟನಾ ಶಕ್ತಿ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನಾಯಕತ್ವದ ಸಾಮರ್ಥ್ಯವು ದೇಶವ್ಯಾಪಿಯಾಗಿ ಅದರ ಸ್ವೀಕಾರಾರ್ಹತೆ ಹೆಚ್ಚುತ್ತಿರುವುದರ ಹಿಂದಿನ ಪ್ರಮುಖ ಅಂಶಗಳಾಗಿವೆ. ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಎದುರಿಸಲು ಕಾಂಗ್ರೆಸ್ ವಿಫಲವಾಗಿದೆ ಮತ್ತು ರಾಹುಲ್ ಗಾಂಧಿ ಅವರಿಗೆ ಸವಾಲನ್ನು ಒಡ್ಡಲು ವಿಫಲರಾಗಿದ್ದಾರೆ ಎಂಬ ಅಂಶವನ್ನು ಕಾಂಗ್ರೆಸ್‌ ಒಪ್ಪಿಕೊಳ್ಳದ ಕಾರಣ, ಮುಂದಿನ 10 ವರ್ಷಗಳ ಕಾಲವೂ ಬಿಜೆಪಿಯು ಅಧಿಕಾರದಲ್ಲಿ ಉಳಿಯುವುದು ನಿಶ್ಚಿತವಾಗಿದೆ ಎಂದೇ ಹೇಳಬಹುದು.

ರಾಷ್ಟ್ರೀಯ ಚುನಾವಣೆಯಾಗಲಿ, ವಿಧಾನಸಭೆ ಚುನಾವಣೆಯಾಗಲಿ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಾಗಲಿ, ಬಿಜೆಪಿ ಅಂತಹ ಪ್ರತಿಯೊಂದು ಪ್ರಜಾಸತ್ತಾತ್ಮಕ ಚಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಇದು ನಾಯಕತ್ವ ಮತ್ತು ಕಾರ್ಯಕರ್ತರ ನಡುವಿನ ಬಾಂಧವ್ಯ ಎಷ್ಟು ಆಳವಾಗಿದೆ ಎಂಬುದರ ಸ್ಪಷ್ಟ ಪ್ರತಿಬಿಂಬವಾಗಿದೆ.

ಮೋದಿಯವರು ಎಲ್ಲಾ ರಂಗಗಳಲ್ಲಿಯೂ ಪ್ರಬಲ ನಾಯಕರಾಗಿದ್ದಾರೆ ಎಂಬ ಚಿತ್ರಣವು ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಸೆಳೆಯಲು ಬಿಜೆಪಿಗೆ ಸುಲಭವಾಗಿಸಿದೆ. ಬಿಜೆಪಿ ಹೆಚ್ಚಾಗಿ ಮೇಲ್ಜಾತಿ ಪಕ್ಷ ಮತ್ತು ನಗರ ಪ್ರದೇಶಗಳಿಗೆ ಮಾತ್ರ ಅದರ ಉಪಸ್ಥಿತಿ ಸೀಮಿತವಾಗಿದೆ ಎಂಬ ವಿರೋಧ ಪಕ್ಷದ ಪ್ರಚಾರವನ್ನು ಸುಳ್ಳಾಗಿಸಿದೆ. ಪಕ್ಷವು ಪ್ರಾದೇಶಿಕ ಮತ್ತು ಸಣ್ಣ ಪಕ್ಷಗಳೊಂದಿಗೆ ಒಕ್ಕಟು ರಚಿಸಿಕೊಳ್ಳುವ ಮೂಲಕ ಈಶಾನ್ಯ ಭಾರತದ ಎಲ್ಲಾ ಏಳೂ ರಾಜ್ಯಗಳಲ್ಲಿ ಸರ್ಕಾರ ರಚಿಸಿರುವುದು ಅದರ ಶಕ್ತಿಯ ದ್ಯೋತಕವಾಗಿದೆ.

ಮೋದಿ-ಶಾ ನಾಯಕತ್ವದ ಅಡಿಯಲ್ಲಿ ಚುನಾವಣಾ ಕಣದಲ್ಲಿರುವ ಬಿಜೆಪಿಯು ಬಡವರು, ಶ್ರೀಮಂತರು ಮತ್ತು ವಂಚಿತ ವರ್ಗದ ಅಭಿಮಾನಕ್ಕೆ ಪಾತ್ರವಾಗಿದೆ. ಬಹು-ಜಾತಿ ಮೈತ್ರಿಯನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಪಕ್ಷದ ಸಾಮರ್ಥ್ಯವು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ಆದರೆ ಇಂದಿಗೂ ಮತದಾರರಲ್ಲಿ ಒಡಕು ಮೂಡಿಸುವ ತಂತ್ರದ ಮೂಲಕ ರಾಜಕೀಯ ಲಾಭ ಗಳಿಸುವತ್ತ ದೃಷ್ಟಿ ಹರಿಸುತ್ತಿರುವ ಕಾಂಗ್ರೆಸ್‌ನ ತಂತ್ರಗಾರಿಕೆಯನ್ನು ಬಿಜೆಪಿ ಸಂಪೂರ್ಣವಾಗಿ ಧ್ವಂಸ ಮಾಡಿದೆ. ಬಿಜೆಪಿ ದಾಖಲಿಸಿದ ಸತತ ಗೆಲುವುಗಳೇ ಅದನ್ನು ಇತರರಿಗಿಂತ ಹೆಚ್ಚು ಹೊಂದಿಕೊಳ್ಳಬಲ್ಲ ಹಾಗೂ ಸ್ವೀಕಾರಾರ್ಹ ಪಕ್ಷ ಎಂಬುದನ್ನು ದೃಢೀಕರಿಸುತ್ತವೆ.

ಇದನ್ನೂ ಓದಿ | MODI 8 Years: ಎಂಟು ವರ್ಷಗಳಲ್ಲಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ 3 ಪಟ್ಟು ಹೆಚ್ಚಳ, 1450 ಷೇರುಗಳ ಲಾಭ ಡಬಲ್!

Exit mobile version