ಇಂದು- ಮೇ 26ರಂದು ಎಂಟು ವರ್ಷಗಳನ್ನು ಪೂರೈಸುತ್ತಿರುವ ನರೇಂದ್ರ ಮೋದಿ (Modi 8 years) ಸರ್ಕಾರವು ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ವಿಷಯದಲ್ಲಿ ಸಮಾಜದ ಎಲ್ಲ ವಿಭಾಗಗಳಿಗೆ ನೇರವಾಗಿ ಪ್ರಯೋಜನವಾಗುವಂತಹ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಿದೆ. ಅವುಗಳ ಪೈಕಿ ಹೆಚ್ಚು ಜನೋಪಯೋಗಿಯಾದ ಎಂಟು ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ.
1. ಆರೋಗ್ಯವರ್ಧಕ ಆಯುಷ್ಮಾನ್ ಭಾರತ್
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭಿಸಿದರು. ಇದು ವಿಶ್ವದ ಅತಿದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ರಕ್ಷಣೆ ಯೋಜನೆಯಾಗಿದೆ. ಈ ಯೋಜನೆಯು 10.74 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಭಾರತದ ಜನಸಂಖ್ಯೆಯಲ್ಲಿ ಅತ್ಯಂತ ಹೆಚ್ಚು ಸೌಲಭ್ಯ ವಂಚಿತರಾದ ಶೇ 40ರಷ್ಟು ಮಂದಿ ಪಿಎಂ-ಜೆಎವೈ ನ ಫಲಾನುಭವಿಗಳಾಗಿದ್ದಾರೆ.
ಕೇಂದ್ರ ಸರ್ಕಾರವು ಯೋಜನೆಗೆ ಸಂಪೂರ್ಣ ಹಣವನ್ನು ನೀಡಿದರೆ, ಅನುಷ್ಠಾನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ನಗದು ರಹಿತ ಆಸ್ಪತ್ರೆಗೆ ಸೇರಿಸುವುದಲ್ಲದೆ, ಈ ಯೋಜನೆಯು ಮೂರು ದಿನಗಳ ದಾಖಲಾತಿ ಪೂರ್ವದ (ಪ್ರಿ-ಹಾಸ್ಪಿಟಲೈಸೇಶನ್) ವೆಚ್ಚ ಮತ್ತು ಆಸ್ಪತ್ರೆಗೆ ದಾಖಲಾದ ಬಳಿಕ 15 ದಿನಗಳ ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಪರೀಕ್ಷೆಗಳು ಮತ್ತು ಔಷಧಗಳ ವೆಚ್ಚಗಳೂ ಸೇರಿವೆ. ಪಿಎಂ-ಜೆಎವೈ ಸೇವೆಗಳು ಸುಮಾರು 1,393 ಕಾರ್ಯವಿಧಾನಗಳನ್ನು ಒಳಗೊಂಡಿವೆ ಮತ್ತು ಚಾಲ್ತಿಯಲ್ಲಿರುವ ಎಲ್ಲಾ ಬಗೆಯ ಪೂರ್ವ ಪರಿಸ್ಥಿತಿಗಳನ್ನು ಮೊದಲ ದಿನದಿಂದಲೇ ಕವರ್ ಮಾಡಲಾಗುತ್ತದೆ.
2. ಉಜ್ವಲ ಯೋಜನೆ ಪ್ರಜ್ವಲ
2016ರಲ್ಲಿ ಪ್ರಾರಂಭವಾದ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹೆಸರಿನ ಉಚಿತ ಎಲ್‌ಪಿಜಿ ಸಂಪರ್ಕ ಯೋಜನೆಯು ಲಕ್ಷಾಂತರ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಒದಗಿಸಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ 5 ಕೋಟಿ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ಮತ್ತು ಅರಣ್ಯವಾಸಿಗಳಂತಹ ಇನ್ನೂ ಏಳು ವರ್ಗಗಳ ಮಹಿಳಾ ಫಲಾನುಭವಿಗಳಿಗೆ ಇದರ ಲಾಭ ದೊರೆಯುವಂತೆ ಮಾಡಲು ಈ ಯೋಜನೆಯನ್ನು ಏಪ್ರಿಲ್ 2018ರಲ್ಲಿ ವಿಸ್ತರಿಸಲಾಯಿತು. ಯೋಜನೆಯ ಗುರಿಯನ್ನು ಎಂಟು ಕೋಟಿ ಎಲ್‌ಪಿಜಿ ಸಂಪರ್ಕಗಳೆಂದು ಪರಿಷ್ಕರಿಸಲಾಗಿದೆ, ಆಗಸ್ಟ್ 2019 ರಲ್ಲಿ ನಿಗದಿತ ಸಮಯಕ್ಕಿಂತ ಏಳು ತಿಂಗಳ ಮುಂಚಿತವಾಗಿಯೇ ಈ ಗುರಿ ಸಾಧಿಸಲಾಗಿದೆ.
3. ಜನ್ ಧನಾಧನ್
ಬ್ಯಾಂಕಿಂಗ್ ಆರ್ಥಿಕ ವ್ಯವಸ್ಥೆಯಿಂದ ಹೊರಗುಳಿದಿದ್ದ ಜನರನ್ನು ವ್ಯವಸ್ಥೆಯೊಳಗೆ ಸೇರ್ಪಡೆಗೊಳಿಸುವ ರಾಷ್ಟ್ರೀಯ ಮಿಷನ್- ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಯನ್ನು ಆಗಸ್ಟ್ 15, 2014ರಂದು ಕೆಂಪು ಕೋಟೆಯಿಂದ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದರು. ವಿದ್ಯಾರ್ಥಿವೇತನಗಳು, ಸಬ್ಸಿಡಿಗಳು, ಪಿಂಚಣಿಗಳು ಮತ್ತು ಕೋವಿಡ್ ಪರಿಹಾರ ನಿಧಿಗಳಂತಹ ಪ್ರಯೋಜನಗಳನ್ನು ಜನ್ ಧನ್ ಖಾತೆಗಳು ಸೇರಿದಂತೆ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಲಾಗುತ್ತದೆ. ಈ ವರ್ಷದ ಜನವರಿ 2ರ ಹೊತ್ತಿಗೆ, ಜನ್ ಧನ್ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಠೇವಣಿಯು 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಹಣಕಾಸು ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2021 ರ ಡಿಸೆಂಬರ್ ಅಂತ್ಯದ ವೇಳೆಗೆ 44.23 ಕೋಟಿ ಪಿಎಂಜೆಡಿವೈ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್ 1,50,939.36 ಕೋಟಿ ರೂ. ಆಗಿತ್ತು. ಡಿಸೆಂಬರ್ 8, 2021 ರ ಹೊತ್ತಿಗೆ, ಶೂನ್ಯ ಬ್ಯಾಲೆನ್ಸ್ ಖಾತೆಗಳ ಒಟ್ಟು ಸಂಖ್ಯೆ 3.65 ಕೋಟಿ ಆಗಿತ್ತು, ಇದು ಒಟ್ಟು ಜನ್ ಧನ್ ಖಾತೆಗಳ 8.3% ರಷ್ಟಿದೆ ಎಂದು ಸರ್ಕಾರವು ಡಿಸೆಂಬರ್, 2021 ರಲ್ಲಿ ಸಂಸತ್ತಿಗೆ ತಿಳಿಸಿತ್ತು.
4. ಕಿಸಾನ್ ಸಮ್ಮಾನ್ ನಿಧಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿಯಲ್ಲಿ, ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ, 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ಈ ವರ್ಷದ ಜನವರಿ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಾದ್ಯಂತ 10.09 ಕೋಟಿಗೂ ಹೆಚ್ಚು ರೈತರಿಗೆ ಈ ಯೋಜನೆಯಡಿಯಲ್ಲಿ 10 ನೇ ಕಂತು ಆರ್ಥಿಕ ಸಹಾಯವಾಗಿ 20,900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು. ಬಿಡುಗಡೆಯಾದ ಇತ್ತೀಚಿನ ಕಂತಿನೊಂದಿಗೆ, ಯೋಜನೆಯಡಿ ಒದಗಿಸಲಾದ ಒಟ್ಟು ಮೊತ್ತವು ಸುಮಾರು 1.8 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಪಿಎಂ-ಕಿಸಾನ್ ಯೋಜನೆಯನ್ನು ಫೆಬ್ರವರಿ 2019ರ ಬಜೆಟ್‌ನಲ್ಲಿ ಘೋಷಿಸಲಾಯಿತು. ಮೊದಲ ಕಂತಿನ ಅವಧಿ ಡಿಸೆಂಬರ್ 2018ರಿಂದ ಮಾರ್ಚ್ 2019 ರವರೆಗೆ ಇತ್ತು.
5. ವಿಮೆ ಮತ್ತು ಪಿಂಚಣಿ ಯೋಜನೆಗಳು
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಗಳನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ದೇಶದಲ್ಲಿ ವಿಮಾ ಪ್ರವೇಶದ ಮಟ್ಟವನ್ನು ಹೆಚ್ಚಿಸುವ ಮತ್ತು ಸಾಮಾನ್ಯ ಜನರಿಗೆ, ವಿಶೇಷವಾಗಿ ಬಡವರು ಮತ್ತು ಕೆಳಗಿರುವವರಿಗೆ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಈ ಎರಡು ಯೋಜನೆಗಳನ್ನು ಆರಂಭಿಸಲಾಯಿತು.
ಪಿಎಂಜೆಜೆಬಿವೈ 2 ಲಕ್ಷ ರೂ.ಗಳ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ, ಆದರೆ ಪಿಎಂಎಸ್‌ಬಿವೈ 2 ಲಕ್ಷ ರೂ.ಗಳ ಅಪಘಾತ ಅಥವಾ ಸಂಪೂರ್ಣ ಶಾಶ್ವತ ಅಂಗವೈಕಲ್ಯ ರಕ್ಷಣೆ ಮತ್ತು 1 ಲಕ್ಷ ರೂ.ಗಳ ಶಾಶ್ವತ ಭಾಗಶಃ ಅಂಗವೈಕಲ್ಯ ರಕ್ಷಣೆಯನ್ನು ನೀಡುತ್ತದೆ. ವಿಮಾ ಕಂಪನಿಗಳು ಒದಗಿಸಿದ ಡೇಟಾವನ್ನು ಉಲ್ಲೇಖಿಸಿ, ಸರ್ಕಾರವು ಡಿಸೆಂಬರ್ 2021 ರಲ್ಲಿ ಸಂಸತ್ತಿಗೆ ತಿಳಿಸಿದ ಮಾಹಿತಿಯಂತೆ- ಅಕ್ಟೋಬರ್ 27, 2021 ರವರೆಗೆ ಕ್ರಮವಾಗಿ ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಅಡಿಯಲ್ಲಿ ಕ್ರಮವಾಗಿ 5,12,915 ಕ್ಲೈಮ್‌ಗಳಿಗೆ ಒಟ್ಟಾಗಿ 10,258 ಕೋಟಿ ರೂ ಮತ್ತು 92,266 ಕ್ಲೈಮ್‌ಗಳಿಗೆ ಒಟ್ಟಾಗಿ 1,797 ಕೋಟಿ ರೂ.ಗಳನ್ನು ಪರಿಹಾರವಾಗಿ ವಿತರಿಸಲಾಗಿದೆ.
ಈ ಮಧ್ಯೆ, ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ಚಂದಾದಾರರು ಆಯ್ಕೆಮಾಡಿದ ಪಿಂಚಣಿ ಮೊತ್ತದ ಆಧಾರದ ಮೇಲೆ 60 ವರ್ಷಗಳ ವಯಸ್ಸಿನಲ್ಲಿ ಕನಿಷ್ಠ ರೂ 1,000/ ರೂ 2,000/ ರೂ 3,000/ ರೂ 4,000/ ರೂ 5,000 ರ ಖಾತರಿಯ ಕನಿಷ್ಠ ಮಾಸಿಕ ಪಿಂಚಣಿಯನ್ನು ಒದಗಿಸಲಾಗುತ್ತಿದೆ. ಈ ಯೋಜನೆಯು 18 ರಿಂದ 40 ವರ್ಷದೊಳಗಿನ ಖಾತೆದಾರರಿಗೆ ಲಭ್ಯವಿರುತ್ತದೆ ಮತ್ತು ತಿಂಗಳಿಗೆ 42 ರೂ.ಗಳಿಂದ ಪ್ರಾರಂಭವಾಗುವ ಗ್ರಾಹಕರ ಕೊಡುಗೆಯನ್ನು ಅವಲಂಬಿಸಿ, ರೂ 1,000 ಮತ್ತು ರೂ 5,000 ರ ನಡುವಿನ ಕನಿಷ್ಟ ಖಾತರಿಯ ಮಾಸಿಕ ಪಿಂಚಣಿಯನ್ನು ನೀಡುತ್ತದೆ.
6. ಎಲ್ಲರಿಗೂ ಆಶ್ರಯ
”2022-23 ರಲ್ಲಿ, ಗ್ರಾಮೀಣ ಮತ್ತು ನಗರಗಳೆರಡರಲ್ಲೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು. ಈ ಉದ್ದೇಶಕ್ಕಾಗಿ 48,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ” ಎಂದು ಅವರು ಹೇಳಿದರು. ಆರ್ಥಿಕ ಸಮೀಕ್ಷೆ 2022 2020-21 ರಲ್ಲಿ 33.99 ಲಕ್ಷ ಮನೆಗಳನ್ನು ಮತ್ತು ನವೆಂಬರ್ 25, 2021 ರ ವೇಳೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ 26.20 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ – ಅರ್ಬನ್ (ಪಿಎಂಎವೈ-ಯು) ಅಡಿಯಲ್ಲಿ, ಹಣಕಾಸು ವರ್ಷ 21 ರಲ್ಲಿ 14.56 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ. 2021-22ರಲ್ಲಿ 4.49 ಲಕ್ಷ ಮನೆಗಳು 2021ರ ಡಿಸೆಂಬರ್‌ವರೆಗೆ ಪೂರ್ಣಗೊಂಡಿವೆ.
7. ಸ್ವಚ್ಛ ಭಾರತ್
ಇದು ಎಲ್ಲಾ ನಗರಗಳನ್ನು ‘ಕಸ ಮುಕ್ತ’ ಮಾಡಲು, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚ ಮುಕ್ತಗೊಳಿಸಲು ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶಗಳನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡಲು ಯೋಜಿಸಿದೆ. ಆ ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯದ ದೃಷ್ಟಿಯನ್ನು ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಮಿಷನ್ ಮೂಲದಲ್ಲೇ ಘನತ್ಯಾಜ್ಯದ ವಿಂಗಡಣೆ, 3Rಗಳ ತತ್ವಗಳನ್ನು (ಕಡಿಮೆ ಬಳಕೆ, ಮರುಬಳಕೆ, ಮರುಸಂಸ್ಕರಣೆ), ಎಲ್ಲಾ ರೀತಿಯ ಪುರಸಭೆಯ ಘನತ್ಯಾಜ್ಯಗಳ ವೈಜ್ಞಾನಿಕ ಸಂಸ್ಕರಣೆ ಮತ್ತು ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣೆಗಾಗಿ ಪಾರಂಪರಿಕ ಡಂಪಿಂಗ್ ಸೈಟ್‌ಗಳಲ್ಲಿ ಅನುಸರಿಸಬಹುದಾದ ಪರಿಹಾರದ ಮೇಲೆ ಗಮನ ಕೇಂದ್ರೀಕರಿಸುತ್ತದೆ.
8. ಉದ್ಯೋಗದ ಮುದ್ರೆ ಒತ್ತಿದ ಯೋಜನೆ
ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)) ಸಣ್ಣ ಉದ್ಯಮಿಗಳಿಗೆ 10 ಲಕ್ಷ ರೂ.ಗಳ ವರೆಗೆ ಸಾಲವನ್ನು ಒದಗಿಸುವ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಮತ್ತು ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಸಾಲವನ್ನು ನೀಡಲಾಗುತ್ತಿದೆ. ಕೈಗಾರಿಕೆಗಳು, ಸಂಗ್ರಾಹಕರು, ಫ್ರಾಂಚೈಸರ್‌ಗಳು ಮತ್ತು ಸಂಘಗಳು ಪ್ರವರ್ತಿಸುವ ದೃಢವಾದ ಮೌಲ್ಯ ಸರಪಳಿಗಳಿಗೆ ಮುಮ್ಮುಖ ಮತ್ತು ಹಿಮ್ಮುಖ ಸಂಪರ್ಕಗಳನ್ನು ಬಲಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ವರ್ಷದ ಏಪ್ರಿಲ್ 8 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಯಡಿ 34.42 ಕೋಟಿಗೂ ಹೆಚ್ಚು ಫಲಾನುಭವಿಗಳು 18.60 ಲಕ್ಷ ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದಾರೆ ಎಂದು ಹೇಳಿದರು. ಶೇ 68 ಕ್ಕಿಂತ ಹೆಚ್ಚು ಸಾಲ ಖಾತೆಗಳನ್ನು ಮಹಿಳೆಯರಿಗೆ ಮಂಜೂರು ಮಾಡಲಾಗಿದೆ ಮತ್ತು ಶೇ. 22 ರಷ್ಟು ಸಾಲವನ್ನು ಯೋಜನೆ ಪ್ರಾರಂಭದಿಂದಲೂ ಯಾವುದೇ ಸಾಲವನ್ನು ಪಡೆಯದ ಹೊಸ ಉದ್ಯಮಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದರು.