Site icon Vistara News

Modi Birthday | ಆಧ್ಯಾತ್ಮಿಕ ಹಾದಿಯ ನಿತ್ಯಪಥಿಕ

narendra modi spritual

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜಕೀಯ ವ್ಯಕ್ತಿತ್ವದಷ್ಟೇ ಅವರ ಆಧ್ಯಾತ್ಮಿಕ ವ್ಯಕ್ತಿತ್ವವೂ ಪ್ರಬಲವಾಗಿದೆ. ಇಡೀ ದೇಶದ ರಾಜಕಾರಣದ ಚುಕ್ಕಾಣಿ ಹಿಡಿದು ನಡೆಸುವ ವರ್ಚಸ್ಸನ್ನು ಅವರು ತಮ್ಮ ಆಧ್ಯಾತ್ಮಿಕ ಚೈತನ್ಯದಿಂದಲೇ ಪಡೆದುಕೊಳ್ಳುತ್ತಾರೆ.

ಮೋದಿ ಅವರ ಆಧ್ಯಾತ್ಮಿಕ ಹುಡುಕಾಟದ ಆರಂಭ ಅವರ ಬಾಲ್ಯದಿಂದಲೇ ಆಗಿತ್ತು. ಇದನ್ನು ಅವರೇ ಒಮ್ಮೆ ಫೇಸ್‌ಬುಕ್‌ನ ʼಹ್ಯೂಮನ್ಸ್‌ ಆಫ್‌ ಬಾಂಬೇʼ ಪುಟಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅದರಲ್ಲಿ ಹೀಗೆ ಹೇಳಿದ್ದರು-

ʼʼಬಾಲ್ಯದಲ್ಲಿ ನನ್ನಲ್ಲಿ ಸಿಕ್ಕಾಪಟ್ಟೆ ಕುತೂಹಲವಿತ್ತು. ಆದರೆ ಸ್ಪಷ್ಟತೆ ಇರಲಿಲ್ಲ. ನಾನು ಸೈನ್ಯ ಯೋಧರನ್ನು ನೋಡುತ್ತಾ, ದೇಶಕ್ಕೆ ಸೇವೆ ಸಲ್ಲಿಸುವುದಕ್ಕೆ ಇದೊಂದೇ ದಾರಿ ಎಂದು ಭಾವಿಸುತ್ತಾ ಇದ್ದೆ. ಆದರೆ, ರೈಲ್ವೇ ನಿಲ್ದಾಣದಲ್ಲಿ ಪ್ರಯಾಣದ ಮಧ್ಯೆ ಸಿಗುತ್ತಿದ್ದ ಸಾಧುಗಳು, ಸಂತರನ್ನು ಮಾತನಾಡಿಸುತ್ತಿದ್ದಾಗ, ಅವರು ನನಗೆ ಬೇರೊಂದು ಜಗತ್ತಿನ ಪರಿಚಯ ಮಾಡಿಸಿದರು. ಅದು ಶೋಧನೆಗೆ ಅರ್ಹವಾದ ಲೋಕ ಅನಿಸಿತು.ʼʼ ಮೋದಿಯವರು ಗುಜರಾತ್‌ನ ವಡ್ನಾಗರ್‌ ರೈಲ್ವೇ ನಿಲ್ದಾಣದಲ್ಲಿ ಟೀ ಮಾರುತ್ತಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕೇದಾರನಾಥ ಗುಹೆಯಲ್ಲಿ ಮೋದಿ

ಹದಿನೇಳನೇ ವರ್ಷದಲ್ಲಿ ಮೋದಿ ಒಂದು ನಿರ್ಧಾರಕ್ಕೆ ಬಂದರು. ʼʼನನ್ನಲ್ಲಿ ಸ್ಪಷ್ಟತೆ ಇರಲಿಲ್ಲ, ಮಾರ್ಗದರ್ಶನ ಇರಲಿಲ್ಲ, ನಿರ್ಧಾರವೂ ಇರಲಿಲ್ಲ. ಎಲ್ಲಿಗೆ ಹೋಗಬೇಕು, ಯಾಕೆ ಹೋಗಬೇಕು, ಏನು ಮಾಡಬೇಕು ಎಂಬುದೂ ಗೊತ್ತಿರಲಿಲ್ಲ. ಆದರೆ, ಏನೋ ಮಾಡಬೇಕು ಎಂಬುದಂತೂ ಖಚಿತವಿತ್ತು. ಹೀಗಾಗಿ 17ನೇ ವಯಸ್ಸಿನಲ್ಲಿ ನಾನು ಭಗವಂತನಿಗೆ ಪೂರ್ಣ ಶರಣಾದೆ ಹಾಗೂ ಹಿಮಾಲಯ ಪರ್ವತಗಳಿಗೆ ಹೊರಟುಬಿಟ್ಟೆ. ತಂದೆ ತಾಯಿಗಳಿಗೆ ವಿದಾತ ಹೇಳಿದೆ. ತಾಯಿ ನನಗೊಂದು ಸಿಹಿತಿಂಡಿ ಕಟ್ಟಿಕೊಟ್ಟಳು ಮತ್ತು ಹಣೆಗೆ ತಿಲಕವಿಟ್ಟು ಬೀಳ್ಕೊಟ್ಟಳು.ʼʼ

ʼʼದೇವರು ನನ್ನನ್ನು ಎಲ್ಲಿಗೆ ಒಯ್ದನೋ ಅತ್ತ ಕಡೆ ನಡೆದೆ. ಅದು ನನ್ನ ಜೀವನದ ಅನಿಶ್ಚಿತ ಅವಧಿ. ಆದರೆ ನನಗದು ಹಲವು ಉತ್ತರಗಳನ್ನು ನೀಡಿತು. ಜಗತ್ತನ್ನು ತಿಳಿಯಲು, ನನ್ನನ್ನೇ ತಿಳಿಯಲು ಮುಂದಾಗಿದ್ದೆ. ತುಂಬಾ ಪ್ರಯಾಣ ಮಾಡಿದೆ, ರಾಮಕೃಷ್ಣ ಮಿಶನ್‌ನಲ್ಲಿ ಸಮಯ ಕಳೆದೆ. ಸಾಧು ಸಂತರನ್ನು ಭೇಟಿಯಾದೆ. ಅವರೊಂದಿಗೆ ವಾಸಿಸಿದೆ, ಅದು ನನಗೆ ಆತಂರಿಕ ಪ್ರಯಾಣವನ್ನು ಕಲಿಸಿತು. ಒಂದು ಜಾಗದಿಂದ ಇನ್ನೊಂದಕ್ಕೆ ಪ್ರಯಾಣಿಸುತ್ತಲೇ ಇದ್ದೆ. ನನ್ನ ತಲೆಯ ಮೇಲೆ ಮಾಡು ಇರಲಿಲ್ಲ. ಆದರೆ ಮನೆಯಲ್ಲಿದ್ದಂತೆಯೇ ಇದ್ದೆ.ʼʼ

ಗಂಗಾನದಿಯ ದಡದಲ್ಲಿ ತರುಣ ಮೋದಿ

ಹಿಮಾಲಯದಲ್ಲಿ ಸಾಧನೆ ಮಾಡುತ್ತಿದ್ದ ಸಮಯವನ್ನು ಅವರು ನೆನಪಿಸಿಕೊಂಡಿದ್ದಾರೆ- ʼʼಹಿಮಾಲಯದಲ್ಲಿ ನಾನು ಇದ್ದಾಗ 3- 3.5 ಗಂಟೆಗಳ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಿದ್ದೆ. ಕೊರೆಯುವ ತಣ್ಣೀರಿನಲ್ಲಿ, ಗಂಗಾನದಿಯಲ್ಲಿ ಸ್ನಾನ ಮಾಡುತ್ತಿದ್ದೆ. ಆದರೂ ಬೆಚ್ಚಗೇ ಇರುತ್ತಿದ್ದೆ. ಸಣ್ಣದೊಂದು ನೀರಿನ ಝರಿಯ ಸದ್ದಿನಲ್ಲಿ ಕೂಡ ಶಾಂತಿ, ಮುಕ್ತತೆ, ಧ್ಯಾನಗಳನ್ನು ಸಾಧಿಸಬಹುದು ಎಂದು ತಿಳಿದುಕೊಂಡೆ. ವಿಶ್ವದ ಲಯದಲ್ಲಿ ನನ್ನನ್ನು ಒಂದುಗೂಡಿಸಿಕೊಳ್ಳುವ ವಿದ್ಯೆಯನ್ನು ಸಾಧುಗಳು ನನಗೆ ಕಲಿಸಿದರು.ʼʼ

ʼʼಅಂದು ನಾನು ಪಡೆದ ಅನುಭವಗಳು, ಪಡೆದ ಜ್ಞಾನ ನನ್ನನ್ನು ಇಂದಿಗೂ ಮುನ್ನಡೆಸುತ್ತಿವೆ. ನಾವೆಲ್ಲರೂ ನಮ್ಮ ನಮ್ಮ ಚಿಂತನೆ, ಮಿತಿಗಳಿಗೆ ಕಟ್ಟುಬಿದ್ದಿದ್ದೇವೆ. ವಿಶ್ವದ ಅಗಾಧತೆಯ ಮುಂದೆ ನೀವು ಶರಣಾಗಿ ನಿಂತರೆ, ಅದರ ವೈಶಾಲ್ಯದ ಮುಂದೆ ನಿಮ್ಮ ಕಿರಿದುತನ ಅರ್ಥವಾಗುತ್ತದೆ. ಇದನ್ನು ನಿಜವಾಗಿ ಅರಿತುಕೊಂಡರೆ ನಮ್ಮಲ್ಲಿರುವ ಅಹಂಕಾರ ಅಳಿದು ಕರಗಿ ಜೀವನ ನಿಜವಾಗಿ ಆರಂಭವಾಗುತ್ತದೆ.ʼʼ

ʼʼಆಗ ಆದದ್ದು ನನ್ನಲ್ಲಿ ನಿಜವಾದ ಬದಲಾವಣೆ. ಹಿಮಾಲಯದಿಂದ ನಾನು ಮನೆಗೆ ಮರಳುವಾಗ ಸ್ಪಷ್ಟತೆ, ನನ್ನ ಮುಂದಿನ ದಾರಿಯನ್ನು ಮುನ್ನಡೆಸುವ ಮಾರ್ಗದರ್ಶನಗಳು ನನ್ನಲ್ಲಿ ಇದ್ದವು.ʼʼ ಇಲ್ಲಿಂದಾಚೆಗೆ ಸಾರ್ವಜನಿಕ ಸೇವೆ, ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಒಡನಾಟ ಎಂದು ಮುಂದುವರಿದ ಮೋದಿ ಬಳಿಕ ಗುಜರಾತ್‌ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟರು. ನಂತರದ ಅವರ ಹಾದಿ ಎಲ್ಲರಿಗೂ ಗೊತ್ತೇ ಇದೆ.

ಮೋದಿಯವರ ಗುರು ಯಾರು?

ಗುರು ದಯಾನಂದ ಸರಸ್ವತಿ ಅವರೊಂದಿಗೆ ನರೇಂದ್ರ ಮೋದಿ

ಗುರು ದಯಾನಂದ ಸರಸ್ವತಿ ಅವರು ನರೇಂದ್ರ ಮೋದಿಯವರ ಆಧ್ಯಾತ್ಮಿಕ ಗುರುಗಳಾಗಿದ್ದರು. ಇವರ ಒಂದು ಆಶ್ರಮ ಹಿಮಾಲಯದ ಹೃಷಿಕೇಶದಲ್ಲಿತ್ತು. ಮೋದಿಯವರು ಆಗಾಗ ಇಲ್ಲಿಗೆ ಭೇಟಿ ಕೊಡುತ್ತಿದ್ದರು. ಇನ್ನೆರಡು ಪ್ರಮುಖ ಆಶ್ರಮಗಳು ಅಮೆರಿಕದ ಪೆನ್ಸಿಲ್ವೇನಿಯಾ ಹಾಗೂ ತಮಿಳುನಾಡಿನ ಕೊಯಮತ್ತೂರುಗಳಲ್ಲಿ ಇವೆ. ವೇದಾಂತ ವಿದ್ಯಾಪ್ರತಿಪಾದಕರಾದ ಇವರು ʼಆರ್ಷ ವಿದ್ಯಾ ಗುರುಕಲಮ್‌ʼನ ಸ್ಥಾಪಕರು. ಇದರ ಹಲವು ಶಾಖೆಗಳು ದೇಶದಾದ್ಯಂತ ಇವೆ.

ಇದನ್ನೂ ಓದಿ | Cheetah | ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದೇ ಭಾರತಕ್ಕೆ ಬರಲಿವೆ ಎಂಟು ಚೀತಾಗಳು!

ತಮಿಳುನಾಡಿನ ತಿರುವಾಯೂರಿನಲ್ಲಿ ನಟರಾಜನ್‌ ಎಂಬ ಹೆಸರಿನಿಂದ 1930ರಲ್ಲಿ ಜನಿಸಿದ ಇವರು, ಸ್ವಾಮಿ ಚಿನ್ಮಯಾನಂದರ ಶಿಷ್ಯರು. ಚಿನ್ಮಯ ಮಿಷನ್‌ನ ಸಕ್ರಿಯ ಸದಸ್ಯರಾಗಿದ್ದ ಇವರ ಆಶ್ರಮದಲ್ಲಿ ಹಿಮಾಲಯದ ಭೇಟಿಯ ವೇಳೆ ನರೇಂದ್ರ ಮೋದಿಯವರು ಉಳಿದುಕೊಂಡು ಇವರಿಂದ ಆಧ್ಯಾತ್ಮ ಹಾಗೂ ಸಾಮಾಜಿಕ ಸೇವೆಯ ದೀಕ್ಷೆಯನ್ನು ಪಡೆದಿದ್ದರು. 2016ರಲ್ಲಿ ಇವರು ಮೃತಪಟ್ಟರು. ಇವರಿಗೆ ಮರಣೋತ್ತರ ಪದ್ಮಭೂಷಣ ಪುರಸ್ಕಾರ ನೀಡಲಾಯಿತು.

ಸ್ವತಃ ಆಧ್ಯಾತ್ಮಿಕ ತಾಣಗಳಿಗೆ, ಸಾಧು ಸಂತರು ಇರುವಲ್ಲಿಗೆ ಭೇಟಿ ನೀಡುವುದೆಂದರೆ ಪಿಎಂ ಮೋದಿಯವರಿಗೆ ಅತ್ಯಾಸಕ್ತಿ. ಕೆಲ ವರ್ಷಗಳ ಹಿಂದೆ ಕೇದಾರನಾಥ ದೇವಾಲಯ ತಾಣಕ್ಕೆ ಭೇಟಿ ನೀಡಿ, ಅಲ್ಲಿರುವ ಗುಹೆಯಲ್ಲಿ ಧ್ಯಾನನಿರತರಾಗಿದ್ದುದನ್ನು ನೆನಪಿಸಿಕೊಳ್ಳಬಹುದು. ವಿದೇಶಗಳಿಗೆ ಪ್ರಯಾಣ ಹೋದರೂ ಅವರು ನವರಾತ್ರಿ ಸಂದರ್ಭದಲ್ಲಿ ಮಾಡುವ ವ್ರತಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಬರಿಯ ತುಳಸಿ ನೀರು ಕುಡಿದು ಇಡೀ ದಿನ ಕಳೆಯುತ್ತಾರೆ. ಮುಂಜಾನೆ ಬಲುಬೇಗನೆ ಎದ್ದು ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಮಾಡುವುದು ಅವರ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ತರುಣರೂ ಮಾಡಲು ಕಷ್ಟಪಡುವ ಕೆಲವು ಯೋಗಾಸನಗಳನ್ನು ಅವರು ಸುಲಲಿತವಾಗಿ ಮಾಡಬಲ್ಲರು. ಇದೆಲ್ಲದಕ್ಕೂ ತಾವು ತಾರುಣ್ಯದಲ್ಲಿ ಪಡೆದ ಆಧ್ಯಾತ್ಮಿಕ ಮಾರ್ಗದರ್ಶನವೇ ಪ್ರೇರಣೆ ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ | MYSURU DASARA | ಜಂಬೂ ಸವಾರಿ ದಿನ ಪುಷ್ಪಾರ್ಚನೆ ಮಾಡಲು ಬರ್ತಾರಾ ಪ್ರಧಾನಿ ನರೇಂದ್ರ ಮೋದಿ?

Exit mobile version