Site icon Vistara News

Modi Egypt Visit: ಮೋದಿಗೆ ಮತ್ತೊಂದು ಗರಿ; ಈಜಿಪ್ಟ್‌ನ ಅತ್ಯುನ್ನತ ‘ಆರ್ಡರ್‌ ಆಫ್‌ ದಿ ನೈಲ್’‌ ಪ್ರಶಸ್ತಿ ಪ್ರದಾನ

Order Of The Nile Award For Narendra Modi

Modi Egypt Visit: Egyptian President Abdel Fattah al-Sisi confers PM with Order of the Nile award

ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಹೋದರೂ ಹೆಚ್ಚಿನ ಗೌರವ, ಮನ್ನಣೆ ಸಿಗುತ್ತಿದೆ. ಅದರಲ್ಲೂ, ಕೆಲ ರಾಷ್ಟ್ರಗಳು ಮೋದಿ ತಮ್ಮ ದೇಶಕ್ಕೆ ಬಂದರೆ ತಮ್ಮ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳನ್ನು ನೀಡುತ್ತವೆ. ಕಳೆದ ತಿಂಗಳು ಮೋದಿ ಅವರು ಫಿಜಿ ಹಾಗೂ ಪಪುವಾ ನ್ಯೂಗಿನಿಯಾಗೆ ತೆರಳಿದ್ದಾಗ, ಆ ರಾಷ್ಟ್ರಗಳು ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದ್ದವು. ಈಗ ಮೋದಿ ಅವರಿಗೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ನರೇಂದ್ರ ಮೋದಿ ಅವರಿಗೆ ಈಜಿಪ್ಟ್‌ನ (Modi Egypt Visit) ಅತ್ಯುನ್ನತ “ಆರ್ಡರ್‌ ಆಫ್‌ ದಿ ನೈಲ್‌” (Order Of The Nile) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕೈರೋದಲ್ಲಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್‌-ಸಿಸಿ (Abdel Fattah al-Sisi) ಅವರು ನರೇಂದ್ರ ಮೋದಿ ಅವರಿಗೆ ಆರ್ಡರ್‌ ಆಫ್‌ ದಿ ನೈಲ್‌ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದಕ್ಕೂ ಮೊದಲು ಮೋದಿ ಅವರು ಅಬ್ದೆಲ್‌ ಫತ್ತಾಹ್‌ ಅಲ್‌-ಸಿಸಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಅಲ್ಲದೆ, ಹಲವು ಒಡಂಬಡಿಕೆಗಳಿಗೂ ಸಹಿ ಹಾಕಿದರು. ಅಬ್ದೆಲ್‌ ಫತ್ತಾಹ್‌ ಅಲ್‌-ಸಿಸಿ ಭೇಟಿಗೂ ಮೊದಲು ಮೋದಿ ಅವರು ಅಲ್‌-ಹಕೀಮ್‌ ಐತಿಹಾಸಿಕ ಮಸೀದಿಗೆ ಭೇಟಿ ನೀಡಿದ್ದರು. ಯುದ್ಧ ಸ್ಮಾರಕಕ್ಕೂ ಮೋದಿ ಭೇಟಿ ನೀಡಿದರು.

ಮೋದಿಗೆ ಪ್ರಶಸ್ತಿಯ ಗರಿ

ಈಜಿಪ್ಟ್‌ ಗ್ರ್ಯಾಂಡ್‌ ಮುಫ್ತಿ (ಈಜಿಪ್ಟ್‌ ಸರ್ಕಾರದ ಧಾರ್ಮಿಕ ಪ್ರತಿನಿಧಿ) ಶಾಕಿ ಇಬ್ರಾಹಿಂ ಅಬ್ದೆಲ್‌-ಕರೀಮ್‌ ಅಲ್ಲಂ ಜತೆಗೂ ಕೂಡ ಮೋದಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಶಾಕಿ ಇಬ್ರಾಹಿಂ ಅಬ್ದೆಲ್‌-ಕರೀಮ್‌ ಅಲ್ಲಂ ಅವರು ಮೋದಿ ಅವರನ್ನು ಮೆಚ್ಚಿದ್ದಾರೆ. “ನರೇಂದ್ರ ಮೋದಿ ಅವರನ್ನು ಎರಡು ಬಾರಿ ಭೇಟಿ ಮಾಡಿದೆ. ಪ್ರತಿ ಬಾರಿ ಭೇಟಿಯಾದಾಗಲೂ ಮೋದಿ ಅವರಲ್ಲಿ ಅದ್ಭುತ ನಾಯಕತ್ವದ ಪ್ರತಿಬಿಂಬ ಕಾಣಿಸಿತು. ಮೋದಿ ಅವರು ಭಾರತದಲ್ಲಿ ಜಾಣ ನೀತಿಗಳ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಭಾರತದಂತಹ ಬೃಹತ್‌ ರಾಷ್ಟ್ರಕ್ಕೆ ಮೋದಿ ಉತ್ತಮ ನಾಯಕರಾಗಿದ್ದಾರೆ. ಇದೇ ಕಾರಣಕ್ಕೆ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ” ಎಂದು ಗ್ರ್ಯಾಂಡ್‌ ಮುಫ್ತಿ ವರ್ಣಿಸಿದ್ದಾರೆ.

ಅಲ್‌ ಹಕೀಮ್‌ ಮಸೀದಿಗೆ ಪ್ರಧಾನಿ ಭೇಟಿ

ಇದನ್ನೂ ಓದಿ: Emergency Anniversary: ತುರ್ತು ಪರಿಸ್ಥಿತಿಗೆ 48 ವರ್ಷ; ದೇಶ ಕಂಡ ಕರಾಳ ಅಧ್ಯಾಯ ಎಂದ ಮೋದಿ

ಎರಡು ದಿನಗಳ ಈಜಿಪ್ಟ್‌ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯರು ಹಾಗೂ ಈಜಿಪ್ಟ್‌ನ ದಾವೂದಿ ಬೋಹ್ರಾ ಮುಸ್ಲಿಮರನ್ನು ಭೇಟಿ ಮಾಡಿದ್ದಾರೆ. ಹಾಗೆಯೇ, “ಮೋದಿ ಭಾರತದ ಹೀರೊ” ಎಂದು ಅನಿವಾಸಿ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಐತಿಹಾಸಿಕ ಮಸೀದಿಗೆ ಭೇಟಿ ನೀಡಿದ್ದಾಗ ದಾವೂದಿ ಬೋಹ್ರಾ ಮುಸ್ಲಿಮರು ಆತ್ಮೀಯವಾಗಿ ಸ್ವಾಗತಿಸಿ, ಮಸೀದಿಯನ್ನು ತೋರಿಸಿದರು.

Exit mobile version