Site icon Vistara News

PM Speech: ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪೂರ್ಣ ಪಾಠ

ಬೆಂಗಳೂರು: ಕೊರೋನಾ ಸೋಂಕು ದೇಶದಲ್ಲಿ ದಿನೇದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಕೊರೊನಾ ಜತೆಗೆ, ಇಂಧನ ಬೆಲೆ ಏರಿಕೆ ಸೇರಿ ಅನೇಕ ವಿಚಾರಗಳನ್ನು ತಮ್ಮ 20 ನಿಮಿಷಗಳ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಮೋದಿಯವರ ಭಾಷಣದ ಪೂರ್ಣ ಪಾಠ ಇಲ್ಲಿದೆ.

ಶ್ರದ್ಧಾಂಜಲಿ

ತಮಿಳುನಾಡಿನ ತಂಜಾವೂರ್‌ನಲ್ಲಿ ವಿದ್ಯುತ್‌ ಘಾತಕ್ಕೆ ಸಿಲುಕಿ ಮೃತಪಟ್ಟವರ ಕುರಿತು ಮೊದಲಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬದ ಜತೆಗೆ ನಮ್ಮ ಕಾಮನೆಗಳಿವೆ.

ಎಲ್ಲರಿಗೂ ಪ್ರಶಂಸೆ

ಕಳೆದ ಎರಡು ವರ್ಷಗಳಲ್ಲಿ ಕೋರೋನಾ ಕುರಿತಂತೆ ನಮ್ಮ 24ನೇ ಸಭೆ ಇದು. ಕೊರೋನಾ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯಗಳು ಒಟ್ಟಿಗೆ ಕೆಲಸ ಮಾಡಿದ್ದು ಕೊರೋನಾ ಎದುರಿಸಲು ಪ್ರಮುಖ ಪಾತ್ರ ವಹಿಸಿದೆ. ಎಲ್ಲ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾಗಳು ಹಾಗೂ ಅಧಿಕಾರಿಗಳಿಗೆ ಇದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸುತ್ತೇನೆ.

ಈಗ ಕೆಲವು ರಾಜ್ಯಗಳಲ್ಲಿ ಕೊರೋನಾ ಹೆಚ್ಚುತ್ತಿರುವ ಕುರಿತು ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವರು ಹಾಗೂ ಅನೇಕ ಮುಖ್ಯಮಂತ್ರಿಗಳೂ ಪ್ರಮುಖ ಅಂಶಗಳನ್ನು ಪ್ರಸ್ತುತಪಡಿಸಿದ್ದೀರ. ಕೊರೋನಾ ಸವಾಲು ಇನ್ನೂ ನಿವಾರಣೆ ಆಗಿಲ್ಲ. ಒಮಿಕ್ರಾನ್‌ ಹಾಗೂ ಅದರ ಎಲ್ಲ ರೂಪಾಂತರಗಳು ಯಾವ ರೀತಿ ಗಂಭಿರ ಪರಿಸ್ಥಿತಿ ನಿರ್ಮಿಸಬಹುದು ಎಂದು ಯೂರೊಪಿಯನ್‌ ದೇಶಗಳಲ್ಲಿ ನಾವು ನೋಡುತ್ತಿದ್ದೇವೆ. ಈ ರೂಪಾಂತರಿಗಳಿಂದಾಗಿ ಅನೇಕ ಅಲೆಗಳು ಬಂದಿವೆ. ಆದರೆ ಭಾರತದಲ್ಲಿ ನಮ್ಮೆಲ್ಲರ ಪ್ರಯತ್ನದಿಂದ ನಿಯಂತ್ರಿಸಿದ್ದೇವೆ.

ಆದರೆ ಕಳೆದ ಕೆಲವು ವಾರಗಳಿಂದ ಸೋಂಕು ಏರಿಕೆ ಕಂಡಿದ್ದು, ನಾವು ಜಾಗರೂಕರಾಗಿರಬೇಕು. ಕೆಲವು ತಿಂಗಳ ಹಿಂದೆ ಬಂದ ಅಲೆಯಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ದೇಶದ ಎಲ್ಲ ಜನರೂ ಈ ಅಲೆಯಿಂದ ಹೊರಬಂದಿದ್ದಾರೆ. ಕಳೆದ ಎರಡು ವರ್ಷದಲ್ಲಿ ಆಕ್ಸಿಜನ್‌ ಸರಬರಾಜಿನಿಂದ ಹಿಡಿದು ಆರೋಗ್ಯ ಮೂಲಸೌಕರ್ಯದವರೆಗೆ ಅನೇಕ ಸುಧಾರಣೆಯನ್ನು ದೇಶ ಕಂಡಿದೆ. ಯಾವುದೇ ರಾಜ್ಯದಲ್ಲಿ ಸ್ಥಿತಿ ಅನಿಯಂತ್ರಿತ ಎಂದು ಕಂಡುಬಂದಿಲ್ಲ. ಕೋವಿಡ್‌ ಲಸಿಕೆಯ ಪಾತ್ರ ಇದರಲ್ಲಿ ಪ್ರಮುಖವಾಗಿದೆ.

ದೇಶದೆಲ್ಲೆಡೆಯೂ ಲಸಿಕೆಯು ಎಲ್ಲ ಭಾರತೀಯರನ್ನೂ ತಲುಪಿದೆ. ಭಾರತದ 96% ವಯಸ್ಕರು ಕರೊನಾ ಮೊದಲ ಡೋಸ್‌ ಪಡೆದಿದ್ದಾರೆ, 15 ವರ್ಷದೊಳಗಿನ 85% ಜನರಿಗೆ ಎರಡನೇ ಡೋಸ್‌ ಸಹ ನೀಡಲಾಗಿದೆ. ಕೊರೋನಾದಿಂದ ಬಚಾವಾಗಲು ವ್ಯಾಕ್ಸಿನ್‌ ಅತಿ ದೊಡ್ಡ ರಕ್ಷಣೆ ಎಂದು ತಜ್ಞರು ಹೇಳಿದ್ದಾರೆ.

ಮಕ್ಕಳಿಗೆ, ಶಿಕ್ಷಕರಿಗೆ ಲಸಿಕೆ

ಅನೇಕ ಸಮಯದ ನಂತರ ಶಾಲೆಗಳು ಆರಂಭವಾಗಿವೆ. ಸೋಂಕು ಹರಡಬಹುದು ಎಂಬ ಚಿಂತೆ ಪೋಷಕರಿಗೆ ಶುರುವಾಗಿದೆ. ಕೆಲವೆಡೆ ಮಕ್ಕಳು ಸೋಂಕಿಗೊಳಗಾಗದ ವರದಿಗಳೂ ಇವೆ. ಆದರೆ ಸಾಕಷ್ಟು ಮಕ್ಕಳಿಗೂ ಲಸಿಕೆ ಸಿಕ್ಕಿರುವುದು ಸಂತಸ. 6-12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಬಹುದು ಎಂಬದು ನಿನ್ನೆ ಅನುಮತಿ ಸಿಕ್ಕಿದೆ. ಎಲ್ಲ ಅರ್ಹ ಮಕ್ಕಳಿಗೆ ಬೇಗನೆ ಲಸಿಕೆ ನೀಡುವುದು ನಮ್ಮ ಪ್ರಾಥಮಿಕ ಆದ್ಯತೆ. ಇದಕ್ಕಾಗಿ ಶಾಲೆಗಳಲ್ಲಿ ವಿಶೇಷ ಅಭಿಯಾನ ನಡೆಸಬೇಕಿದೆ. ಶಿಕ್ಷಕರು ಹಾಗೂ ಪೋಷಕರು ಇದರ ಕುರಿತು ಜಾಗೃತರಾಗಬೇಕು. ದೇಶದ ಎಲ್ಲ ವಯಸ್ಕರಿಗೆ ಮೂರನೇ ಡೋಸ್‌ ಸಹ ಲಭ್ಯವಿದೆ. ಶಿಕ್ಷಕರು, ಪೋಷಕರು ಸೇರಿ ಎಲ್ಲ ಅರ್ಹರೂ ಈ ಮುಂಜಾಗ್ರತಾ ಲಸಿಕೆ ಪಡೆದುಕೊಳ್ಳಬೇಕು.

ಮೂರನೇ ಅಲೆಯಲ್ಲಿ ನಾವು ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣ ಕಂಡಿದ್ದೇವೆ. ಆದರೆ ಇದನ್ನು ನಾವು ಸಫಲವಾಗಿ ನಿರ್ವಹಣೆ ಮಾಡಿದ್ದೇವೆ. ಇದೇ ಮಾರ್ಗವನ್ನು ನಾವು ಮುಂದುವರಿಸಬೇಕಿದೆ. ನಮ್ಮ ತಜ್ಞರು ಎಲ್ಲ ಪರಿಸ್ಥಿತಿಯನ್ನೂ ಅವಲೋಕಿಸುತ್ತಿದ್ದಾರೆ. ಮುಂಚೆಯೇ ಸೋಂಕನ್ನು ತಡೆಯುವ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡುವ ನಿರ್ಧಾರ ಮಾಡಬೇಕು. ಟ್ರೇಸ್‌, ಟ್ರಾಕ್‌, ಟ್ರೀಟ್‌ ಮಾರ್ಗವನ್ನು ನಾವು ಅನುಸರಿಸಬೇಕಿದೆ.

ಕೊರೊನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದವರಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿ ಅದರ ಮಾದರಿಯನ್ನು ಜಿನೋಮ್‌ ಪರೀಕ್ಷೆಗೆ ಕಳಿಸಬೇಕು. ಇದರಿಂದ ರೂಪಾಂತರಿಗಳ ಮಾಹಿತಿ ಲಭಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕರಾಗಿರಬೇಕು. ಆದರೆ ಎಲ್ಲಿಯೂ ಭಯವನ್ನು ಸೃಷ್ಟಿಸಬಾರದು.

ಆರೋಗ್ಯ ಮೂಲಸೌಕರ್ಯ ವೃದ್ಧಿಸುವ ಕಾರ್ಯ ವೇಗವಾಗಿ ನಡೆಯಬೇಕು. ಹಾಸಿಗೆ, ವೆಂಟಿಲೇಟರ್‌, ಪಿಎಸ್‌ಎ ಆಕ್ಸಿಜನ್‌ ಘಟಕ ಸ್ಥಿತಿಯಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದರೂ ಈ ಎಲ್ಲ ಸೌಲಭ್ಯಗಳೆಲ್ಲವೂ ಸಮಯದಲ್ಲಿ ಲಭ್ಯವಾಗಿರುವಂತೆ ಸಿದ್ಧವಾಗಿರಬೇಕು. ಯಾವುದೇ ಕೊರತೆ ಇದ್ದರೂ ಮೇಲ್ಮಟ್ಟದಿಂದ ಪರಿಶೀಲಿಸಿ ಪೂರ್ತಿ ಮಾಡಬೇಕು.

ಮೆಡಿಕಲ್‌ ಕಾಲೇಜ್‌, ಜಿಲ್ಲಾ ಆಸ್ಪತ್ರೆಗಳಲ್ಲಿ ಸೌಲಭ್ಯ ಹಾಗೂ ಮಾನವ ಸಂಪನ್ಮೂಲವನ್ನು ಹೆಚ್ಚಿಸಬೇಕು. ಪರಸ್ಪರ ಸಂವಾದ ಹಾಗೂ ಸಹಯೋಗದಲ್ಲಿ ಕೊರೋನಾ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಹಾಗೂ ಹೊಸ ಮಾರ್ಗ ಹುಡುಕುತ್ತೇವೆ. ಕೊ ಆಪರೇಟಿವ್‌ ಫೇಡರಲಿಸಂಗೆ ಅನುಗುಣವಾಗಿ ಭಾರತ ಕೊರೋನಾ ವಿರುದ್ಧ ಯುದ್ಧ ನಡೆಸುತ್ತಿದೆ. ವೈಶ್ವಿಕ ಕಾರಣಗಳಿಗಾಗಿ ದೇಶದ ಆಂತರಿಕ ಪರಿಸ್ಥಿತಿಗಳ ಮೇಲೆ ಆಗುವ ಪ್ರಭಾವವನ್ನು ಕೇಂದ್ರ ಹಾಗೂ ರಾಜ್ಯಗಳು ಒಟ್ಟಾಗಿ ಎದುರಿಸುತ್ತಿವೆ.

ಇಂಧನ ತೆರಿಗೆ ಕಡಿಮೆ ಮಾಡಿ

ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕ ನಿರ್ಣಯಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಂಯೋಜನೆ ಹಿಂದಿಗಿಂತ ಹೆಚ್ಚು ಅವಶ್ಯಕವಿದೆ. ಯುದ್ಧ ಪರಿಸ್ಥಿತಿ ಉಂಟಾಗಿದೆ. ಸಪ್ಲೈ ಚೈನ್‌ ಪರಿಣಾಮ ನೋಡಿದರೆ, ಪ್ರತಿದಿನ ಸವಾಲು ಹೆಚ್ಚಾಗುತ್ತಿದೆ. ಈ ಯುದ್ಧ ಅನೇಕ ಸವಾಲು ತಂದೊಡ್ಡುತ್ತಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಮನ್ವಯತೆಯನ್ನು ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ.

ಪೆಟ್ರೋಲ್‌ ಡೀಸೆಲ್‌ ದರ ಹೆಚ್ಚಳವಾಗಿರುವುದರ ಕುರಿತು ಚರ್ಚೆ ನಡೆಯುತ್ತಿದೆ. ದೇಶವಾಸಿಗಳ ಮೇಲೆ ಇದರ ಭಾರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಎಕ್ಸೈಸ್‌ ಸುಂಕ ಕಡಿಮೆ ಮಾಡಿದೆ. ರಾಜ್ಯಗಳೂ ತಮ್ಮ ತೆರಿಗೆಯನ್ನು ಕಡಿತ ಮಾಡಲು ಕಳೆದ ನವೆಂಬರ್‌ನಲ್ಲೆ ಆಗ್ರಹ ಮಾಡಲಾಗಿತ್ತು. ಇದರ ಲಾಭವನ್ನು ನಾಗರಿಕರಿಗೆ ತಲುಪಿಸಲು ಕೋರಿದ್ದೆವು. ಕೆಲವು ರಾಜ್ಯಗಳು ಕಡಿಮೆ ಮಾಡಿದವು. ಆದರೆ ಕೆಲವು ರಾಜ್ಯಗಳಿಂದಾಗಿ ಅವರ ನಾಗರಿಕರಿಗೆ ಅದರ ಲಾಭ ಸಿಕ್ಕಿಲ್ಲ. ಇದರಿಂದಾಗಿ ಈ ರಾಜ್ಯಗಳಲ್ಲಿ ಬೇರೆಯವರ ಹೋಲಿಕೆಯಲ್ಲಿ ಇಂಧನ ದರ ಹೆಚ್ಚಿದೆ. ಇದು ಈ ರಾಜ್ಯಗಳ ಜನರಿಗೆ ಅನ್ಯಾಯ ಹಾಗೂ ಪಕ್ಕದ ರಾಜ್ಯಗಳ ಮೇಲೆಯೂ ಹೊರೆಯಾಗುತ್ತಿದೆ.

ಕರ್ನಾಟಕ ತೆರಿಗೆ ಕಡಿತ ಮಾಡದಿದ್ದರೆ ₹5,000 ಕೋಟಿಯಷ್ಟು, ಗುಜರಾತ್‌ 3,500 ಕೋಟಿಯಷ್ಟು ಹೆಚ್ಚು ತೆರಿಗೆ ಸಂಗ್ರಹಿಸುತ್ತಿದ್ದವು. ಗುಜರಾತ್‌ ಹಾಗೂ ಕರ್ನಾಟಕದ ಪಕ್ಕದ ರಾಜ್ಯಗಳು ಇದೇ ಸಮಯದಲ್ಲಿ ₹3,500-₹5,000 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹಿಸಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ಜಾರ್ಖಂಡ್‌ ಸೇರಿ ಅನೇಕ ಕಾರಣಗಳಿಂದ ಈ ಮಾತನ್ನು ಕೇಳಿಲ್ಲ. ಆ ರಾಜ್ಯದ ಜನರ ಮೇಲಿನ ಹೊರೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಈ ರಾಜ್ಯಗಳು ಹೆಚ್ಚು ಆದಾಯ ಗಳಿಸಿವೆ. ದೇಶ ಹಿತದಲ್ಲಿ, ಕಳೆದ ನವೆಂಬರ್‌ನಲ್ಲಿ ಕಡಿಮೆ ಮಾಬೇಕತ್ತು. ಈಗಲಾದರೂ ನಿಮ್ಮ ರಾಜ್ಯದ ನಾಗರಿಕರಿಗೆ ಇದರ ಲಾಭ ವರ್ಗಾವಣೆ ಮಾಡಿ ಎಂದು ಕೋರುತ್ತೇನೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯದಲ್ಲಿ 42% ರಾಜ್ಯಗಳಿಗೇ ಸಿಗುತ್ತದೆ. ಜಾಗತಿಕ ಸಂಕಷ್ಟದ ಸಮಯದಲ್ಲಿ ಒಂದು ತಂಡವಾಗಿ ನಾವೆಲ್ಲರೂ ಕೆಲಸ ಮಾಡಬೇಕು. ರಸಗೊಬ್ಬರಕ್ಕಾಗಿ ನಾವು ಬೇರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ರೈತರ ಮೇಲೆ ನಾವು ಹೊರೆ ಹೊರಿಸಿಲ್ಲ. ನಿಮ್ಮ ರಾಜ್ಯ, ನೆರೆ ರಾಜ್ಯ ಹಾಗೂ ದೇಶವಾಸಿಗಳ ಹಿತದಲ್ಲಿ ಪ್ರಾಥಮಿಕತೆ ನೀಡಿ.

ತೆರಿಗೆ ಕಡಿತ ಮಾಡದಿದ್ದದ್ದಕ್ಕೆ ಚೆನ್ನೈನಲ್ಲಿ ಪೆಟ್ರೋಲ್‌ ದರ ₹112, ಜೈಪುರದಲ್ಲಿ ₹118, ಹೈದರಾಬಾದ್‌ನಲ್ಲಿ ₹119, ಕೊಲ್ಕತಾದಲ್ಲಿ ₹115, ಮುಂಬೈಯಲ್ಲಿ ₹120ಕ್ಕಿಂತ ಹೆಚ್ಚಿದೆ. ಅದೇ ತೆರಿಗೆ ಕಡಿತ ಮಾಡಿರುವ ದಿಯು ದಮನ್‌ನಲ್ಲಿ ₹ 102, ಲಖನೌನಲ್ಲಿ ₹ 101, ಜಮ್ಮುವಿನಲ್ಲಿ ₹106, ಗುವಾಹಟಿಯಲ್ಲಿ ₹105, ಗುರುಗ್ರಾಮ್‌ನಲ್ಲಿ ₹103, ಡೆಹ್ರಾಡೂನ್‌ನಲ್ಲಿ ₹105 ಇದೆ. ಆರು ತಿಂಗಳಲ್ಲಿ ಎಷ್ಟು ಸಂಪಾದಿಸಿದರೋ ಅರು ಒಂದೆಡೆ. ಈಗಲಾದರೂ ದೇಶದೊಂದಿಗೆ ಸಹಯೋಗ ನೀಡಿ ಎಂದು ಪ್ರಾರ್ಥನೆ ಮಾಡುತ್ತೇನೆ.

ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆ

ದೇಶದಲ್ಲಿ ಬಿಸಿಲು ಹೆಚ್ಚುತ್ತಿದೆ. ಸಮಯಕ್ಕೂ ಮೊದಲೇ ಬಿಸಿಲು ಏರಿಕೆ ಕಾಣುತ್ತಿದೆ. ಅಗ್ನಿ ಅವಘಡಗಳು ಹೆಚ್ಚುತ್ತಿವೆ. ಅರಣ್ಯ, ಕಟ್ಟಡ, ಆಸ್ಪತ್ರೆಗಳಲ್ಲಿ ಅವಘಡ ನಡೆಯುತ್ತಿದೆ. ಕಳೆದ ವರ್ಷ ಅನೇಕ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡದಿಂದ ಸಾಕಷ್ಟು ತೊಂದರೆ ಅನುಭವಿಸಿದೆವು, ಅನೇಕರು ಪ್ರಾಣ ತೆತ್ತರು. ಈ ವರ್ಷ ವಿಶೇಷವಾಗಿ ಆಸ್ಪತ್ರೆಗಳ ಸೇಫ್ಟಿ ಆಡಿಟ್‌ ಮಾಡಬೇಕು. ಇಂತಹ ಘಟನೆಗಳು ಕಡಿಮೆಯಾಗುವಂತೆ ಹಾಗೂ ಇಂತಹ ಘಟನೆಗಳು ಸಂಭವಿಸಿದಾಗ ಪ್ರತಿಕ್ರಿಯೆಯ ಸಮಯವನ್ನೂ ಕಡಿಮೆ ಮಾಡುವತ್ತ ಕ್ರಮ ಕೈಗೊಳ್ಳಬೇಕಿದೆ.

Exit mobile version