ಹೊಸದಿಲ್ಲಿ: ಆಡಳಿತವನ್ನು ಇನ್ನಷ್ಟು ಸುಧಾರಿಸಲು ಹೆಚ್ಚಿನ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಇಪ್ಪತ್ತೈದು ಖಾಸಗಿ ವಲಯಗಳ ತಜ್ಞರು (private sector experts) ಶೀಘ್ರದಲ್ಲೇ ಕೇಂದ್ರದ (central government) ಪ್ರಮುಖ ಹುದ್ದೆಗಳಿಗೆ ಸೇರಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಮೂರು ಜಂಟಿ ಕಾರ್ಯದರ್ಶಿಗಳು ಮತ್ತು 22 ನಿರ್ದೇಶಕರು/ಉಪ ಕಾರ್ಯದರ್ಶಿಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕ ಮಾಡಲು ಅನುಮೋದಿಸಿದೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳ ಹುದ್ದೆಗಳನ್ನು ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಭಾರತೀಯ ಅರಣ್ಯ ಸೇವೆ (IFoS) ಅಧಿಕಾರಿಗಳು ಹೊಂದಿರುತ್ತಾರೆ.
ಇತ್ತೀಚಿನ ನೇಮಕಗಳನ್ನು ಲ್ಯಾಟರಲ್ ಎಂಟ್ರಿ ಮೋಡ್ (Lateral entry mode) ಮೂಲಕ ಮಾಡಲಾಗುತ್ತಿದೆ. ಇದನ್ನು ಸರ್ಕಾರಿ ಇಲಾಖೆಗಳಲ್ಲಿ ಖಾಸಗಿ ವಲಯದ ತಜ್ಞರ ನೇಮಕಾತಿ ಎಂದು ಉಲ್ಲೇಖಿಸಲಾಗುತ್ತದೆ. ಸರ್ಕಾರಕ್ಕೆ ಹೊಸ ಪ್ರತಿಭೆ ಮತ್ತು ದೃಷ್ಟಿಕೋನವನ್ನು ತರುವ ಗುರಿಯನ್ನು ಇದು ಹೊಂದಿದೆ.
2018ರಲ್ಲಿ ಪ್ರಾರಂಭವಾದ ಲ್ಯಾಟರಲ್ ಎಂಟ್ರಿ ಯೋಜನೆಯಡಿ, ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಮಟ್ಟದಲ್ಲಿ ನೇಮಕಾತಿಗಳನ್ನು ಮಾಡಲಾಗುತ್ತದೆ. ಈ ಹಂತದ ಅಧಿಕಾರಿಗಳು ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಲ್ಯಾಟರಲ್ ಎಂಟ್ರಿ ಪ್ರಕ್ರಿಯೆಯ ಮೂಲಕ ಬರುವ ಅಧಿಕಾರಿಗಳು ಸರ್ಕಾರಿ ವ್ಯವಸ್ಥೆಯ ಭಾಗವಾಗುತ್ತಾರೆ.
ಸಿಬ್ಬಂದಿ ಸಚಿವಾಲಯವು ಜೂನ್ 2018ರಲ್ಲಿ ಮೊದಲ ಬಾರಿಗೆ ಲ್ಯಾಟರಲ್ ಎಂಟ್ರಿ ಮೋಡ್ ಮೂಲಕ 10 ಜಂಟಿ ಕಾರ್ಯದರ್ಶಿ-ಶ್ರೇಣಿಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ನೇಮಕಾತಿಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಮಾಡಿದೆ.
ಆಯೋಗವು ಅಕ್ಟೋಬರ್ 2021ರಲ್ಲಿ ಮತ್ತೆ 31 ಅಭ್ಯರ್ಥಿಗಳನ್ನು ಜಂಟಿ ಕಾರ್ಯದರ್ಶಿಗಳು (3), ನಿರ್ದೇಶಕರು (19), ಮತ್ತು ಉಪ ಕಾರ್ಯದರ್ಶಿಗಳು (9) ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕ ಮಾಡಲು ಶಿಫಾರಸು ಮಾಡಿದೆ. 10 ಜಂಟಿ ಕಾರ್ಯದರ್ಶಿಗಳು ಮತ್ತು 28 ನಿರ್ದೇಶಕರು/ಉಪ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 38 ಖಾಸಗಿ ವಲಯದ ತಜ್ಞರು ಇದುವರೆಗೆ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ.
ಪ್ರಸ್ತುತ ಎಂಟು ಜಂಟಿ ಕಾರ್ಯದರ್ಶಿಗಳು, 16 ನಿರ್ದೇಶಕರು ಮತ್ತು ಒಂಬತ್ತು ಉಪ ಕಾರ್ಯದರ್ಶಿಗಳು ಸೇರಿದಂತೆ 33 ಅಂತಹ ತಜ್ಞರು ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಜಂಟಿ ಕಾರ್ಯದರ್ಶಿಗಳು ತಮ್ಮ ಪೂರ್ಣ ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ.
ಲ್ಯಾಟರಲ್ ಎಂಟ್ರಿ ಸ್ಕೀಮ್ ಅಡಿಯಲ್ಲಿ, ಖಾಸಗಿ ವಲಯದಿಂದ ಅಥವಾ ರಾಜ್ಯ ಸರ್ಕಾರ/ಸ್ವಾಯತ್ತ ಸಂಸ್ಥೆಗಳು/ಸಾರ್ವಜನಿಕ ವಲಯದ ಉದ್ಯಮಗಳು ಇತ್ಯಾದಿಗಳಿಂದ ವಿಶೇಷ ಅಗತ್ಯವಿರುವ ಪೋಸ್ಟ್‌ಗಳಿಗೆ ನೇಮಕಾತಿಗಳನ್ನು ಮಾಡಲಾಗುತ್ತದೆ.
ಇದನ್ನೂ ಓದಿ: Bill Gates India Visit: “ಯಾವಾಗಲೂ ಸ್ಫೂರ್ತಿದಾಯಕ… ” ಮೋದಿ ಭೇಟಿ ಬಳಿಕ ಬಿಲ್ ಗೇಟ್ಸ್ ಹೇಳಿದ್ದೇನು?