ಟೋಕಿಯೊ: ಮಹತ್ವದ ಕ್ವಾಡ್ ಶೃಂಗ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಜಪಾನ್‌ನ ರಾಜಧಾನಿ ಟೋಕಿಯೊ ತಲುಪಿದ್ದಾರೆ (Modi in Japan). ಎರಡು ದಿನಗಳ ಭೇಟಿಗಾಗಿ ಬಂದಿರುವ ಅವರಿಗೆ ಜಪಾನ್‌ನಲ್ಲಿರುವ ಭಾರತೀಯರು ಮತ್ತು ಅಲ್ಲಿನ ನಾಗರಿಕರು ಅದ್ಧೂರಿ ಸ್ವಾಗತ ಕೋರಿದರು. ಭಾರತ ಸಿಂಹ ಎಂಬ ಘೋಷಣೆಗಳೊಂದಿಗೆ ಅವರನ್ನು ಎದುರ್ಗೊಳ್ಳಲಾಯಿತು. ಈ ನಡುವೆ, ಮೋದಿ ಅವರು ಮಕ್ಕಳೂ ಸೇರಿದಂತೆ ಹಲವರ ಜತೆ ಆತ್ಮೀಯವಾಗಿ ಹರಟಿದ ವಿಡಿಯೊಗಳು ಬಿಡುಗಡೆಯಾಗಿವೆ. ಅದರಲ್ಲೂ ಮುಖ್ಯವಾಗಿ ಬಾಲಕನೊಬ್ಬ ಹಿಂದಿಯಲ್ಲಿ ಮಾತನಾಡಿದ್ದು ಕೇಳಿ ಪ್ರಧಾನಿ ಮೋದಿ ಸಿಕ್ಕಾಪಟ್ಟೆ ಥ್ರಿಲ್ಲಾಗಿದ್ದಾರೆ.
ಟೋಕಿಯೊದ ಒಂದು ಹೋಟೆಲ್‌ನಲ್ಲಿ ಭಾರತೀಯ ನಾಗರಿಕರು ಸಭೆಯನ್ನು ಆಯೋಜಿಸಿದ್ದರು. ಅದರಲ್ಲಿ ಭಾಗವಹಿಸಿದ ಮೋದಿ ಮಕ್ಕಳೊಡನೆ ಆತ್ಮೀಯವಾಗಿ ಬೆರೆತರು. ಈ ಸಂದಭದಲ್ಲಿ ಪುಟ್ಟ ಹುಡುಗನೊಬ್ಬ ಹಿಂದಿಯಲ್ಲೇ ಮಾತನಾಡಿದ್ದು ಮೋದಿ ಅವರಿಗೆ ಸಿಕ್ಕಾಪಟ್ಟೆ ಖುಷಿ ಆಯಿತು.
“ನನ್ನ ಹೆಸರು ರಿಟ್ಸುಕಿ ಕೊಬಯಾಶಿ. ಜಪಾನ್‌ಗೆ ನಿಮಗೆ ಸ್ವಾಗತʼ ಎಂದು ಹುಡುಗ ಹೇಳಿದಾಗ ಖುಷಿಯಾದರು ಮೋದಿ. ʻʻವ್ಹಾ! ಹಿಂದಿ ಎಲ್ಲಿ ಕಲಿತಿಯೋ? ತುಂಬಾ ಚೆನ್ನಾಗಿ ಮಾತನಾಡುತ್ತಿʼ ಎಂದು ಬೆನ್ನುತಟ್ಟಿದರು.
ʻʻನನಗೆ ಹಿಂದಿ ಜಾಸ್ತಿ ಮಾತನಾಡಲು ಬರುವುದಿಲ್ಲ. ಆದರೆ, ನನಗೆ ಅರ್ಥ ಆಗ್ತದೆ. ನನ್ನ ಸ್ವಾಗತ ಪತ್ರಕ್ಕೆ ಮೋದಿ ಅವರಿಂದ ಸಹಿ ಪಡೆದುಕೊಂಡೆ. ತುಂಬ ಖುಷಿಯಾಗಿದೆʼʼ ಎಂದು ಮೋದಿ ಜತೆ ಮಾತನಾಡಿದ ರಿಟ್ಸುಕಿ ಹೇಳಿದ.
ಹಲವಾರು ಮಕ್ಕಳು ಮೋದಿ ಜತೆ ಸಂವಾದ ನಡೆಸಿ ಅವರ ಆಟೋಗ್ರಾಫ್ ಪಡೆದು ಖುಷಿಪಟ್ಟರು. ಅಲ್ಲಿನ ಭಾರತೀಯರು ಮೋದಿ ಅವರನ್ನು ʻಭಾರತ್ ಮಾ ಕಾ ಶೇರ್ʼ ಎಂದು ಜೋರಾಗಿ ಘೋಷಣೆ ಕೂಗುತ್ತಾ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಕ್ವಾಡ್ ಸಮಾವೇಶದಲ್ಲಿ ಭಾಗಿ
ಸೋಮವಾರ ಮತ್ತು ಮಂಗಳವಾರ ಟೋಕಿಯೊದಲ್ಲಿ ನಡೆಯಲಿರುವ ಕ್ವಾಡ್ ರಾಷ್ಟ್ರಗಳ ಸಮಾವೇಶದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರ ವೈಯಕ್ತಿಕ ಆಮಂತ್ರಣದ ನೆಲೆಯಲ್ಲಿ ಆಗಮಿಸಿರುವ ಅವರು ಹಲವು ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಮೋದಿ ಅವರು ಕ್ವಾಡ್ ಶೃಂಗ ಸಭೆಯಲ್ಲಿ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಭಾವಶಾಲಿಯಾದ ಒಂದು ಗುಂಪನ್ನು ಸೃಷ್ಟಿಸಿಕೊಳ್ಳುವುದು, ಸಹಕಾರ, ಅಭಿವೃದ್ಧಿಯ ನಾನಾ ಸಾಧ್ಯತೆಗಳನ್ನು ಚರ್ಚಿಸುವುದು ಶೃಂಗ ಸಭೆಯ ಮುಖ್ಯ ಉದ್ದೇಶ. ಅದರಲ್ಲೂ ಮುಖ್ಯವಾಗಿ ತೈವಾನ್‌ನಲ್ಲಿ ಶಾಂತಿ ಸ್ಥಾಪನೆ ಬಗ್ಗೆ ಚರ್ಚೆ ನಡೆಯಲಿದೆ.
ಮೋದಿ ಅವರು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ, ಅಮೆರಿಕ ಅಧ್ಯಕ್ಷ ಜೋ ಬಿಡೆನ್, ನೂತನವಾಗಿ ಆಯ್ಕೆಯಾಗಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಟೊನಿ ಅಲ್ಬಾನಿಸ್ ಅವರ ಜತೆಗೂ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ʻʻಕ್ವಾಡ್ ಧನಾತ್ಮಕ ಮತ್ತು ನಿರ್ಮಾಣಾತ್ಮಕ ಕಾರ್ಯಸೂಚಿಯನ್ನು ಹೊಂದಿದೆ. ಹೀಗಾಗಿ ನಾವು ಯಾವುದೇ ರಾಷ್ಟ್ರ ಅಥವಾ ಪ್ರದೇಶವನ್ನು ಗುರಿಯಾಗಿಟ್ಟುಕೊಳ್ಳುವುದಿಲ್ಲ. ನಮಗೆ ಮುಖ್ಯವಾಗಿ ಬೇಕಾಗಿರುವುದು ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ನಿರ್ಮಾಣ ಎಂದು ಜಪಾನ್‌ನಲ್ಲಿ ಭಾರತದ ರಾಯಭಾರಿಯಾಗಿರುವ ಸಂಜಯ್ ಕುಮಾರ್ ವರ್ಮ.
ಇದನ್ನೂ ಓದಿ | ಭಾಷಾ ವೈವಿಧ್ಯತೆ ದೇಶದ ಹೆಮ್ಮೆ, ಅದರಲ್ಲಿ ವೈಷಮ್ಯ ಸೃಷ್ಟಿಸುವ ಪ್ರಯತ್ನ ಬೇಡ: ಪ್ರಧಾನಿ ಮೋದಿ