ವಾರಾಣಸಿ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ (Varanasi) ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), ಇಂದು ʼಕೇಸರಿ ವಂದೇ ಭಾರತ್ʼ (Saffron Vande Bharat Train) ರೈಲನ್ನು ಉದ್ಘಾಟಿಸಲಿದ್ದಾರೆ. ಇದು ವಾರಣಾಸಿ ಮತ್ತು ನವದೆಹಲಿ ನಡುವಿನ ಎರಡನೇ ವಂದೇ ಭಾರತ್ ರೈಲು.
ನಿನ್ನೆ ಅವರ ಪ್ರವಾಸದ ಮೊದಲ ದಿನವಾಗಿದ್ದು, ಅವರು ಕನ್ಯಾಕುಮಾರಿ- ವಾರಾಣಸಿ ತಮಿಳು ಸಂಗಮಮ್ ರೈಲನ್ನು ಉದ್ಘಾಟಿಸಿದರು. ಜೊತೆಗೆ ತಿರುಕ್ಕುರಲ್, ಮಣಿಮೇಕಲೈ ಮತ್ತು ಇತರ ಶ್ರೇಷ್ಠ ತಮಿಳು ಸಾಹಿತ್ಯದ ಬಹುಭಾಷಾ ಮತ್ತು ಬ್ರೈಲ್ ಭಾಷಾಂತರಗಳನ್ನು ಲೋಕಾರ್ಪಣೆ ಮಾಡಿದರು. ಹಲವು ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ʼವಿಕಸಿತ್ ಭಾರತ್ ಸಂಕಲ್ಪ ಯಾತ್ರೆʼಯಲ್ಲಿ ಭಾಗವಹಿಸಿದರು. ವಿಕಸಿತ್ ಭಾರತ್ ಯಾತ್ರಾ ವ್ಯಾನ್ ಮತ್ತು ರಸಪ್ರಶ್ನೆ ಕಾರ್ಯಕ್ರಮಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಪ್ರಧಾನಿ ಮೋದಿ ಭೇಟಿಯ ಎರಡನೇ ದಿನದಂದು ನಗರ ಮತ್ತೊಂದು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದೆ. ವಾರಣಾಸಿ ಮತ್ತು ನವದೆಹಲಿ ನಡುವಿನ ಎರಡನೇ ವಂದೇ ಭಾರತ್ ರೈಲು ಸಂಪರ್ಕಕ್ಕೆ ಅವರು ಚಾಲನೆ ನೀಡಲಿದ್ದಾರೆ. ಲಾಜಿಸ್ಟಿಕ್ಸ್ ವಲಯಕ್ಕೆ ಉತ್ತೇಜನ ನೀಡುವ ಹೊಸ ಪೂರ್ವ ಮೀಸಲು ಸರಕು ಸಾಗಣೆ ಕಾರಿಡಾರ್‌ನ (ಡಿಎಫ್‌ಸಿ) ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಮತ್ತು ಭೌಪುರ್ ಜಂಕ್ಷನ್ ನಡುವಿನ ವಿಭಾಗಕ್ಕೆ ಚಾಲನೆ ನೀಡಲಿದ್ದಾರೆ.
ಎರಡನೇ ವಾರಣಾಸಿ-ನವದೆಹಲಿ ವಂದೇ ಭಾರತ್
ಸುಧಾರಿತ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ರೈಲಿನ ಎರಡನೇ ಆವೃತ್ತಿಯನ್ನು ಇಂದು ಮಧ್ಯಾಹ್ನ 2:15ಕ್ಕೆ ಪ್ರಧಾನಿ ಫ್ಲ್ಯಾಗ್ ಆಫ್ ಮಾಡಲಿದ್ದಾರೆ. ಉತ್ತರ ರೈಲ್ವೇ ಪ್ರಕಾರ, ಎರಡನೇ ವಂದೇ ಭಾರತ್ ರೈಲು ಕೇಸರಿ ಬಣ್ಣದಲ್ಲಿರಲಿದೆ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ರೈಲು ಆನ್‌ಬೋರ್ಡ್ ವೈ-ಫೈ ಎನ್ಫೋಟೈನ್‌ಮೆಂಟ್, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಪ್ಲಶ್ ಇಂಟೀರಿಯರ್‌ಗಳು, ಟಚ್-ಫ್ರೀ ಅನುಕೂಲತೆಗಳೊಂದಿಗೆ ಬಯೋ-ವ್ಯಾಕ್ಯೂಮ್ ಟಾಯ್ಲೆಟ್‌ಗಳು, ಡಿಫ್ಯೂಸ್ಡ್ ಎಲ್‌ಇಡಿ ಲೈಟಿಂಗ್, ಪ್ರತಿ ಆಸನದ ಕೆಳಗೆ ಚಾರ್ಜಿಂಗ್ ಪಾಯಿಂಟ್‌ಗಳು, ಕಸ್ಟಮೈಸ್ಡ್ ಟಚ್ ಆಧಾರಿತ ಓದುವಿಕೆ ಸೌಲಭ್ಯ, ದೀಪಗಳು ಮತ್ತು ರೋಲರ್ ಬ್ಲೈಂಡ್‌ಗಳು ಮುಂತಾದ ಉನ್ನತ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ.
ಉದ್ಘಾಟನೆಯ ಬಳಿಕ ರೈಲು ಪ್ರಯಾಗ್‌ರಾಜ್, ಕಾನ್ಪುರ್ ಸೆಂಟ್ರಲ್, ಇಟಾವಾ, ತುಂಡ್ಲಾ ಮತ್ತು ಅಲಿಗಢ್ ಮೂಲಕ ನಿಗದಿತ ಸಮಯಕ್ಕೆ ಹೊಸದಿಲ್ಲಿಯನ್ನು ತಲುಪುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಿಯಮಿತ ಕಾರ್ಯಾಚರಣೆ ಡಿಸೆಂಬರ್ 20ರಂದು ಪ್ರಾರಂಭವಾಗಲಿದೆ. ವಾರಣಾಸಿಯಿಂದ ಮುಂಜಾನೆ 6ಕ್ಕೆ ಹೊರಡುವ ರೈಲು, 7:34ಕ್ಕೆ ಪ್ರಯಾಗರಾಜ್, 9:30ಕ್ಕೆ ಕಾನ್ಪುರ್ ಸೆಂಟ್ರಲ್ ಮತ್ತು ಅಂತಿಮವಾಗಿ ನವದೆಹಲಿಗೆ ಮಧ್ಯಾಹ್ನ 2:05 ಗಂಟೆಗೆ ತಲುಪುತ್ತದೆ. ಹೊಸದಿಲ್ಲಿಯಿಂದ ಮಧ್ಯಾಹ್ನ 3:00 ಗಂಟೆಗೆ ಹೊರಡುತ್ತದೆ. ಕಾನ್ಪುರ ಸೆಂಟ್ರಲ್ ಅನ್ನು 7:12 ಗಂಟೆಗೆ ತಲುಪುತ್ತದೆ, ರಾತ್ರಿ 9:15ಕ್ಕೆ ಪ್ರಯಾಗರಾಜ್ ತಲುಪುತ್ತದೆ ಮತ್ತು 11:05 ಗಂಟೆಗೆ ವಾರಣಾಸಿಯಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸುತ್ತದೆ.
ಸರಕು ಸಾಗಣೆ ಕಾರಿಡಾರ್
ಪಿಎಂ ಮೋದಿ ಇಂದು ಹೊಸ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಹೊಸ ಭೌಪುರ್ ಜಂಕ್ಷನ್‌ನ ನಡುವಿನ ಪೂರ್ವ ಡಿಎಫ್‌ಸಿಗೆ ಚಾಲನೆ ನೀಡಲಿದ್ದಾರೆ. ಕಾರಿಡಾರ್‌ನ ಈ ವಿಭಾಗವನ್ನು ₹10,903 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ದೆಹಲಿ-ಹೌರಾ ರೈಲು ಮಾರ್ಗದಲ್ಲಿದೆ. ಚಂದೌಲಿ, ಮಿರ್ಜಾಪುರ್, ಪ್ರಯಾಗ್‌ರಾಜ್, ಕೌಶಂಬಿ, ಫತೇಪುರ್, ಕಾನ್ಪುರ್ ನಗರ ಮತ್ತು ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಈ ಕಾರಿಡಾರ್ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಪ್ರಮುಖ ಕಲ್ಲಿದ್ದಲು ಕ್ಷೇತ್ರಗಳನ್ನು, ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್, ಸೆಂಟ್ರಲ್ ಕೋಲ್‌ಫೀಲ್ಡ್ ಲಿಮಿಟೆಡ್, ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಸೇರಿದಂತೆ ಉತ್ತರ ಭಾರತದ ವಿದ್ಯುತ್ ಸ್ಥಾವರಗಳನ್ನು ಸಂಪರ್ಕಿಸುತ್ತದೆ.
ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ
ಅಭಿವೃದ್ಧಿ ಕಾರ್ಯಕ್ರಮಗಳ ಪ್ರಾರಂಭದ ಹೊರತಾಗಿ, ಪ್ರಧಾನಿ ಮೋದಿಯವರು ಇಂದು ಮಧ್ಯಾಹ್ನ 1 ಗಂಟೆಗೆ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಗ್ರಾಮ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Vande Bharat Express: ಶೀಘ್ರ ಬೆಂಗಳೂರು-ಕೊಯಮತ್ತೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು