ನವ ದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವವನ್ನು ಒಂದು ಸಾಮೂಹಿಕ ಅಭಿಯಾನವಾಗಿ ಮಾರ್ಪಡುತ್ತಿದೆ. ಇದನ್ನು ಇನ್ನಷ್ಟು ಅದ್ಧೂರಿಗೊಳಿಸುವ, ಎಲ್ಲರನ್ನೂ ಒಳಗೊಳಿಸುವ ಉದ್ದೇಶದಿಂದ ಆಗಸ್ಟ್ ೨ರಿಂದ ೧೫ರವರೆಗೆ ನಾವೆಲ್ಲರೂ ನಮ್ಮ ಸಾಮಾಜಿಕ ಜಾಲ ತಾಣದ ಪ್ರೊಫೈಲ್ ಪಿಕ್ಚರ್ ಆಗಿ ರಾಷ್ಟ್ರಧ್ವಜವನ್ನು ಬಳಸೋಣ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಸಿಕ ಮನ್ ಕಿ ಬಾತ್‌ನಲ್ಲಿ ಈ ಮನವಿ ಮಾಡಿರುವ ಅವರು, ಆಗಸ್ಟ್ ೧೩ರಿಂದ ೧೫ರವರೆಗೆ ನಡೆಯುವ ಹರ್ ಘರ್ ತಿರಂಗಾ ಆಂದೋಲನವನ್ನು ಕೂಡಾ ಯಶಸ್ವಿಗೊಳಿಸುವಂತೆ ದೇಶವಾಸಿಗಳ ಮುಂದೆ ಮನವಿ ಮಾಡಿದ್ದಾರೆ. ಪ್ರೊಫೈಲ್ ಪಿಕ್ಚರ್‌ಗಳಲ್ಲಿ ತಿರಂಗಾ ರಾರಾಜಿಸಲಿ, ಅದರ ಜತೆಗೆ ಮನೆ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸೋಣ, ಅಭಿಯಾನಕ್ಕೆ ಇನ್ನಷ್ಟು ಶಕ್ತಿ ತುಂಬೋಣ ಎಂದು ಮನವಿ ಮಾಡಿದರು.
ಆಜಾದಿ ಕಾ ಅಮೃತ್ ಮಹೋತ್ಸವ- ಸ್ವಾತಂತ್ರ್ಯದ ೭೫ನೇ ವರ್ಷಾಚರಣೆ ಒಂದು ದೊಡ್ಡ ಅಭಿಯಾನವಾಗುತ್ತಿದೆ. ಸಮಾಜದ ಪ್ರತಿಯೊಂದು ವರ್ಗದ ಜನರು ಕೂಡಾ ಇದರಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರಾದ್ಯಂತ ನಾನಾ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವಂತಾಗಲಿ ಎಂದರು.
ಇದು ಮನ್ ಕಿ ಬಾತ್‌ನ ೯೧ನೇ ಭಾಷಣವಾಗಿದ್ದು, ಇದರಲ್ಲಿ ಮೋದಿ ಅವರು ೧೯೭೫ರಲ್ಲಿ ವಿಧಿಸಲಾದ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಕೂಡಾ ನೆನಪು ಮಾಡಿಕೊಂಡರು. ತುರ್ತು ಪರಿಸ್ಥಿತಿಯನ್ನು ಭಾರತೀಯ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಎಂದು ಬಣ್ಣಿಸಿದ ಮೋದಿ, ಅಂತಿಮವಾಗಿ ಇಲ್ಲೂ ಪ್ರಜಾಪ್ರಭುತ್ವವೇ ಗೆದ್ದಿತು ಎಂದು ಹರ್ಷ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿದ ಎಲ್ಲರನ್ನೂ ಅವರು ಶ್ಲಾಘಿಸಿದರು.
ಇದನ್ನೂ ಓದಿ| ಪ್ರಧಾನಿ ನರೇಂದ್ರ ಮೋದಿ 90ನೇ ಮನ್ ಕೀ ಬಾತ್; ಪ್ರಾರಂಭದಲ್ಲಿಯೇ ʼತುರ್ತು ಪರಿಸ್ಥಿತಿʼ ಪ್ರಸ್ತಾಪ