ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಳೆದು ಬಂದ ಕುರಿತು, ಅವರ ತಾಯಿಯ ಕುರಿತು ಅನೇಕ ಘಟನೆಗಳನ್ನು ಕೇಳಿರಬಹುದು. ಆದರೆ ಮೋದಿಯವರ ಮಮತೆ, ಪ್ರೀತಿ ಕುರಿತು ಹರ್ಯಾಣದ ಬಿಜೆಪಿ ನಾಯಕಿ ಡಾ. ಸುಧಾ ಯಾದವ್ ಹೇಳಿರುವ ಕಥೆ ಇನ್ನೂ ಅದ್ಭುತವಾಗಿದೆ.
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಪಕ್ಷದ ಅತ್ಯುನ್ನತ ನಿರ್ಧಾರಕ ಸಮಿತಿಯಾದ ಕೇಂದ್ರ ಸಂಸದೀಯ ಮಂಡಳಿಗೆ ಹರ್ಯಾಣದ ಹಿಂದುಳಿದ ವರ್ಗಗಳ ಸಮುದಾಯದ ಡಾ. ಸುಧಾ ಯಾದವ್ ಅವರನ್ನು ಬುಧವಾರ ನೇಮಕ ಮಾಡಿದ್ದಾರೆ. ಸುಧಾ ಯಾದವ್ ಅವರು ಐಐಟಿ ರೂರ್ಕಿಯಿಂದ ಕೆಮಿಸ್ಟ್ರಿ ವಿಷಯದಲ್ಲಿ ಎಂಎಸ್‌ಸಿ ಪಿಎಚ್‌ಡಿ ಮಾಡಿದ್ದು, ಮಾಜಿ ಸಂಸದೆ.
ತಾವು ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಪ್ರಧಾನಿ ಮೋದಿಯವರು ತೋರಿದ ಅಕ್ಕರೆ, ಆತ್ಮೀಯತೆಯನ್ನು ಇತ್ತೀಚೆಗೆ ವಿಡಿಯೊವೊಂದರಲ್ಲಿ ಸುಧಾ ಯಾದವ್ ಹಂಚಿಕೊಂಡಿದ್ದಾರೆ.
ಮೋದಿಯವರು ಆಗಿನ್ನೂ ಮುಖ್ಯಮಂತ್ರಿಯೂ ಆಗಿರಲಿಲ್ಲ ರಾಜ್ಯ ಬಿಜೆಪಿ ಪದಾಧಿಕಾರಿಯಾಗಿ ವಿವಿಧ ರಾಜ್ಯಗಳಲ್ಲಿ ಸಂಚರಿಸುತ್ತಿದ್ದರು. ಈ ಸಮಯದಲ್ಲಿ ಅನೇಕ ವರ್ಷಗಳಿಂದ ತಾಯಿ ಹೀರಾಬೇನ್‌ರನ್ನು ನೋಡಲು ಹೋಗಿರಲಿಲ್ಲ. ಒಮ್ಮೆ ಮನೆಗೆ ಭೇಟಿ ನೀಡಿ ಹೊರಡುವಾಗ, ತಾಯಿ 11 ರೂ. ಕೊಟ್ಟಿದ್ದರು. ಯಾವುದಾದರೂ ಉತ್ತಮ ಕೆಲಸಕ್ಕೆ ಇದನ್ನು ಬಳಸಿಕೊ ಎಂದು ತಿಳಿಸಿ ಈ ಹಣವನ್ನು ಕೈಗೆ ಹಾಕಿದ್ದರು. ಆದರೆ, ಮೋದಿಯವರ ಎಲ್ಲ ಖರ್ಚು ವೆಚ್ಚಗಳನ್ನೂ ಸಂಘಟನೆಯೇ ನೋಡಿಕೊಳ್ಳುತ್ತಿತ್ತು. ಓಡಾಟವೆಲ್ಲವನ್ನೂ ಕಾರ್ಯಕರ್ತರ ಜತೆಗೆ ಮಾಡುತ್ತಿದ್ದರಿಂದ ಹಣವನ್ನು ವೆಚ್ಚ ಮಾಡುವ ಅವಶ್ಯಕತೆ ಇರಲಿಲ್ಲ. ಆ ಹನ್ನೊಂದು ರೂಪಾಯಿ ಮೋದಿಯವರ ಬಳಿಯೇ ಉಳಿದಿತ್ತು. ಈ ಕುರಿತು ಡಾ. ಸುಧಾ ಯಾದವ್ ಮಾತನಾಡಿದ್ದಾರೆ.
“ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುವುದು ಹೇಗೆ ಎಂಬುದು ಗೊತ್ತಿರಲಿಲ್ಲ. ಈ ಸಮಯದಲ್ಲಿ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. ನಾನು ತಾಯಿಯನ್ನು ಭೇಟಿ ಮಾಡಿದಾಗ, ನನಗೆ 11 ರೂ. ಕೊಟ್ಟರು. ಯಾವಾಗಲಾದರೂ ಉತ್ತಮ ಕೆಲಸಕ್ಕೆ ಬಳಸು ಎಂದರು. ನನ್ನ ಎಲ್ಲ ಖರ್ಚನ್ನೂ ಸಂಘಟನೆಯೇ ನೋಡಿಕೊಳ್ಳುತ್ತಿದ್ದರಿಂದ ಆ 11 ರೂ. ಹಾಗೆಯೇ ಉಳಿದಿದೆ”.
“ಇಂದು ನನ್ನ ತಂಗಿಯ ಚುನಾವಣೆಗೆ ಈ ಹಣವನ್ನು ನೀಡುವುದು ಉತ್ತಮ ಕೆಲಸ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ ನನ್ನ ತಾಯಿ ಕೊಟ್ಟ ಹಣವನ್ನು ಈ ನನ್ನ ತಂಗಿಯ ಚುನಾವಣಾ ವೆಚ್ಚಕ್ಕಾಗಿ ನೀಡುತ್ತಿದ್ದೇನೆ ಎಂದು ಒಂದು ಟೀಪಾಯಿಯ ಮೇಲೆ ಬಟ್ಟೆಯನ್ನು ಹಾಸಿ, ಅದರ ಮೇಲೆ ಕಲಶ ಇಟ್ಟರು. ಕಲಶದೊಳಕ್ಕೆ 11 ರೂ. ಹಾಕಿದರು. ಇಲ್ಲಿರುವ ಎಲ್ಲ ಕಾರ್ಯಕರ್ತರೂ, ತಮ್ಮ ಮನೆ ಬಾಡಿಗೆಗೆ ಬೇಕಾದ ಹಣವನ್ನು ಬಿಟ್ಟು, ತಮ್ಮ ಜೇಬಿನಲ್ಲಿರುವ ಅಷ್ಟೂ ಹಣವನ್ನು ನೀಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.”
“ಮೋದಿಯವರು ಕರೆ ನೀಡಿದ್ದೇ ತಡ, ಎಲ್ಲ ಕಾರ್ಯಕರ್ತರೂ ತಮ್ಮ ಬಳಿಯಿದ್ದ ಹಣವನ್ನು ತಂದು ಕಲಶದೊಳಗೆ ಹಾಗೂ ಟೀಪಾಯಿ ಮೇಲೆ ಹಾಕಲಾರಂಭಿಸಿದರು. ನೋಡನೋಡುತ್ತಿದ್ದಂತೆಯೇ ಕೇವಲ ಅರ್ಧ ಗಂಟೆ ಅವಧಿಯಲ್ಲಿ ಏಳೂವರೆ ಲಕ್ಷ ರೂ. ಸಂಗ್ರಹವಾಯಿತು. ಈ ರೀತಿ ನನ್ನ ಚುನಾವಣಾ ಪ್ರಚಾರ ಆರಂಭವಾಯಿತು”.
ಹೀಗೆ ಸುಧಾ ಯಾದವ್ ಅವರು ತಮ್ಮ ಹಾಗೂ ನರೇಂದ್ರ ಮೋದಿ ಬಾಂಧವ್ಯದ ಕುರಿತು ಮಾತನಾಡಿದ್ದಾರೆ. ಕಾರ್ಯಕರ್ತರಿಗೆ ಮೋದಿಯವರು ನೀಡುತ್ತಿದ್ದ ಪ್ರೋತ್ಸಾಹ, ಪ್ರೇರಣೆಯನ್ನು ನೆನೆದಿದ್ದಾರೆ.
ಇದನ್ನೂ ಓದಿ | ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಮಹತ್ವದ ಸ್ಥಾನ