ಮಥುರಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಫೋಟೊಗಳನ್ನು ಕಸದ ಗಾಡಿಯಲ್ಲಿಟ್ಟು ಸಾಗಿಸಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಲಾದ ಪೌರ ಕಾರ್ಮಿಕನಿಗೆ ಮರಳಿ ಉದ್ಯೋಗ ನೀಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಕೇಳಿ ಬಂದ ತೀವ್ರ ಆಕ್ಷೇಪಗಳಿಗೆ ತಲೆ ಬಾಗಿ ಮಥುರಾ-ಬೃಂದಾವನ್ ನಗರ ನಿಗಮ ಬಾಬ್ಬಿ ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಂಡಿದೆ.
ಪೌರ ಕಾರ್ಮಿಕರಾಗಿರುವ ಬಾಬ್ಬಿ ಅವರು ಜನರಲ್ ಗಂಜ್ ಪ್ರದೇಶದಲ್ಲಿ ಕಸ ಸಾಗಿಸುವ ವಾಹನದಲ್ಲಿ ಮೋದಿ ಮತ್ತು ಯೋಗಿ ಅವರ ಫ್ರೇಮ್ ಹಾಕಿದ ದೊಡ್ಡ ಗಾತ್ರದ ಭಾವಚಿತ್ರಗಳನ್ನು ತುಂಬಿಕೊಂಡಿರುವ ಚಿತ್ರ ಮತ್ತು ವಿಡಿಯೊ ಕಳೆದ ಶನಿವಾರ ಭಾರಿ ಸಂಚಲನ ಸೃಷ್ಟಿಸಿತ್ತು. ದೇಶದ ಪ್ರಧಾನಿ ಮತ್ತು ಮುಖ್ಯಮಂತ್ರಿಯ ಚಿತ್ರವನ್ನು ಈ ರೀತಿ ಸಾಗಿಸಿ ಅಪಮಾನ ಮಾಡಲಾಗಿದೆ ಎಂದು ಭಾವಿಸಿದ ಮಥುರಾ ಆಡಳಿತ ಬಾಬ್ಬಿಯನ್ನು ಕೆಲಸದಿಂದ ಕಿತ್ತು ಹಾಕಿತ್ತು. ಮಥುರಾ-ಬೃಂದಾವನ ನಗರ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಸತ್ಯೇಂದ್ರ ದುಬೆ ಅವರು ನಿರ್ಲಕ್ಷ್ಯದಿಂದ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ವಜಾ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ್ದರು.
ಆದರೆ, ಈ ರೀತಿ ಒಬ್ಬ ಪೌರಕಾರ್ಮಿಕನನ್ನು ಕಿತ್ತು ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ಪೌರ ಕಾರ್ಮಿಕನೇನೂ ಉದ್ದೇಶಪೂರ್ವಕವಾಗಿ ಭಾವಚಿತ್ರಗಳನ್ನು ಕಸದ ತೊಟ್ಟಿಯಲ್ಲಿ ತುಂಬಿಕೊಂಡು ಹೋಗಿಲ್ಲ. ಆತ ದಾರಿಯಲ್ಲಿ ಬಿದ್ದಿದ್ದ, ಕಸದ ತೊಟ್ಟಿಯಲ್ಲಿದ್ದ ಫ್ರೇಮ್‌ಗಳನ್ನು ಎತ್ತಿಕೊಂಡಿದ್ದಾನೆ. ಆತ ತನ್ನ ಕೆಲಸವನ್ನು ಸರಿಯಾಗಿ ಮಾಡಿದ್ದಾನೆ. ಹಾಗಿರುವಾಗ ಅವನದೇನು ತಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಜತೆಗೆ ಬಾಬ್ಬಿ ಮತ್ತು ಅವನ ಕುಟುಂಬವೂ ಇದೇ ವಾದ ಮಂಡಿಸಿತ್ತು. ʻನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಕಸದ ತೊಟ್ಟಿಯಲ್ಲಿ ಆ ಭಾವಚಿತ್ರಗಳು ಇದ್ದರೆ ನನ್ನ ತಪ್ಪು ಹೇಗಾಗುತ್ತದೆʼ ಎಂದು ಅದು ಕೇಳಿದೆ. ಇದನ್ನು ಗಮನಿಸಿದ ಮುನ್ಸಿಪಲ್ ಕಮಿಷನರ್ ಅನಸೂಯಾ ಝಾ ಅವರು ಬಾಬ್ಬಿಯನ್ನು ಮರಳಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ.
ಇದನ್ನೂ ಓದಿ ಕಸದ ಗಾಡಿಯಲ್ಲಿ ಮೋದಿ, ಯೋಗಿ ಫೋಟೊ ಸಾಗಿಸಿದ ಪೌರ ಕಾರ್ಮಿಕ ವಜಾ!