ನವ ದೆಹಲಿ: ಕೋಮು ಗಲಭೆಗೆ ಪ್ರಚೋದನೆ ನೀಡುವ ಟ್ವೀಟ್ ಮಾಡಿ ಬಂಧನಕ್ಕೊಳಗಾಗಿರುವ ಪತ್ರಕರ್ತ ಮೊಹಮ್ಮದ್ ಜುಬೇರ್ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಇನ್ನೂ 4 ದಿನಗಳ ಕಾಲ ಕಸ್ಟಡಿಯಲ್ಲಿರಿಸಿ ವಿಚಾರಣೆ ನಡೆಸಲು ಪೊಲೀಸರಿಗೆ ನ್ಯಾಯಾಲಯವು ಒಪ್ಪಿಗೆ ನೀಡಿದೆ.
ಪೊಲೀಸರು ಸೋಮವಾರ (ಜೂನ್ 27) ಈತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಪಡಿಸಿದ್ದರು. ಆಲ್ಟ್ ನ್ಯೂಸ್ (alt news) ಮಾಧ್ಯಮದಲ್ಲಿ ಹಿಂದುತ್ವ ವಿರೋಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನೇಕ ಸುದ್ದಿಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು. ಇದು ವಿವಾದದ ಕಿಡಿ ಎಬ್ಬಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಇಲಾಖೆಯ ಇಂಟಲಿಜೆನ್ಸ್ ಫ್ಯೂಷನ್ ಹಾಗೂ ಸ್ಟ್ರಾಟಜಿಕ್ ಆಪರೇಷನ್ ವಿಭಾಗ ಜುಬೇರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಈತ ದೇಶದಲ್ಲಿ ಸಮುದಾಯಗಳ ನಡುವಿನ ಸೌಹಾರ್ದತೆ ಹಾಳು ಮಾಡುವಂತಹ ಟ್ವೀಟ್ ಮಾಡಿದ್ದಾನೆ ಎಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ, ಈ ಪ್ರಕರಣದ ಕುರಿತು ವಿಚಾರಣೆಗೆ ಜುಬೇರ್ ಸರಿಯಾದ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 2018ರಲ್ಲಿ ಉಪಯೋಗಿಸಿದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪೊಲೀಸರ ವಶಕ್ಕೆ ನೀಡಲು ಜುಬೇರ್ ನಿರಾಕರಿಸಿದ್ದಾನೆ. ಪೊಲೀಸರ ತನಿಖೆಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಅಲ್ಲದೆ ತನಿಖೆಗೆ ಮುಖ್ಯವಾಗಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರಸ್ತುತಪಡಿಸುತ್ತಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಒಂದು ದಿನದ ಕಸ್ಟಡಿಯ ಅವಧಿ ಮುಕ್ತಾಯದ ವೇಳೆಗೆ ಪಟಿಯಾಲ ನ್ಯಾಯಾಲಯದ ನ್ಯಾಯಾಧೀಶರಾದ ಸ್ನಿಗ್ಧ ಸರ್ವಾರಿಯ ಎದುರು ಪ್ರಸ್ತುತಪಡಿಸಲಾಗಿತ್ತು. ತನಿಖೆಯನ್ನು ಮುಂದುವರಿಸಲು ಪೊಲೀಸರು ಇನ್ನು ಐದು ದಿನಗಳ ಅನುಮತಿ ಕೇಳಿದ್ದರು. ಅದಕ್ಕೆ ನ್ಯಾಯಾಧೀಶರು 4 ದಿನಗಳ ಕಸ್ಟಡಿಗೆ ಅನುಮತಿ ನೀಡಿದ್ದಾರೆ.
ಇದನ್ನೂ ಓದಿ: ಟ್ವೀಟ್ ಮೂಲಕ ಕೋಮು ಕಿಡಿ ಎಬ್ಬಿಸುತ್ತಿದ್ದ ಜುಬೇರ್, ಪೊಲೀಸ್ ವಿಚಾರಣೆ ತೀವ್ರ