Site icon Vistara News

Mohan Bhagwat: ಕೆಲವರು ದೇವರಾಗಲು ಬಯಸುತ್ತಾರೆ; ಪರೋಕ್ಷವಾಗಿ ಮೋದಿಗೆ ತಿವಿದ್ರಾ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್?

Mohan Bhagwat

Mohan Bhagwat

ರಾಂಚಿ: ಕೆಲವರು ಸೂಪರ್‌ ಮ್ಯಾನ್ ಆಗಲು ಬಯಸುತ್ತಾರೆ, ನಂತರ ‘ಭಗವಾನ್’ (ದೇವರು) ಆಗಲು ಬಯಸುತ್ತಾರೆ, ಬಳಿಕ ವಿಶ್ವರೂಪ ಹೊಂದಲು ನೋಡುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಗುರುವಾರ ಹೇಳಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಹೇಳಿಕೆ ಪ್ರಧಾನಿ ಮೋದಿ ಅವರ ಮೇಲಿನ ಪರೋಕ್ಷ ವಾಗ್ದಾಳಿ ಎಂದೇ ಹಲವರು ವಿಶ್ಲೇಷಿಸುತ್ತಿದ್ದಾರೆ.

ಜಾರ್ಖಂಡ್‌ನ ಗುಮ್ಲಾದಲ್ಲಿ ವಿಕಾಸ್ ಭಾರತಿ ಆಯೋಜಿಸಿದ್ದ ಕಾರ್ಯಕರ್ತರ ಮಾತನಾಡಿದ ಭಾಗವತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ, ಒಬ್ಬ ಮನುಷ್ಯನು ‘ಸೂಪರ್‌ಮ್ಯಾನ್‌’, ನಂತರ ‘ದೇವತೆ’, ‘ಭಗವಾನ್’ ಮತ್ತು ‘ವಿಶ್ವರೂಪ’ ಆಗಲು ಬಯಸಬಹುದು. ಆದರೆ ಮುಂದೇನು ಎಂದು ಯಾರಿಗೂ ಖಚಿತವಿಲ್ಲ. ಆಂತರಿಕ ಮತ್ತು ಬಾಹ್ಯ ಆತ್ಮದ ಬೆಳವಣಿಗೆಗೆ ಅಂತ್ಯವಿಲ್ಲ ಮತ್ತು ಮಾನವೀಯ ಕಾರ್ಯಕಕ್ಕಾಗಿ ಅವಿರತವಾಗಿ ಶ್ರಮಿಸಬೇಕು. ಒಬ್ಬ ಕಾರ್ಮಿಕನು ತನ್ನ ಕೆಲಸದಿಂದ ಎಂದಿಗೂ ತೃಪ್ತನಾಗಬಾರದುʼʼ ಎಂದು ಹೇಳಿದ್ದಾರೆ.

“ಕೆಲಸ ಮುಂದುವರಿಯಬೇಕು. ಪರಿಸರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರವಾಗಿ ಕೆಲಸ ಮಾಡಲು ಪ್ರಯತ್ನಿಸಬೇಕು. ಇದಕ್ಕೆ ಅಂತ್ಯವಿಲ್ಲ ಮತ್ತು ವಿವಿಧ ಕ್ಷೇತ್ರಗಳಲ್ಲಿ ನಿರಂತರ ಕೆಲಸವು ಏಕೈಕ ಪರಿಹಾರ. ಭಾರತದ ಪ್ರಕೃತಿಯಂತೆ ಈ ಜಗತ್ತನ್ನು ಸುಂದರ ಸ್ಥಳವನ್ನಾಗಿ ಮಾಡಲು ನಾವು ಶ್ರಮಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.

ಸಮಾಜದ ಕಲ್ಯಾಣಕ್ಕಾಗಿ ಪ್ರತಿಯೊಬ್ಬರೂ ಅವಿರತವಾಗಿ ಶ್ರಮಿಸಬೇಕು ಎಂದ ಅವರು ʼʼದೇಶದ ಭವಿಷ್ಯದ ಬಗ್ಗೆ ಯಾವುದೇ ಸಂದೇಹವಿಲ್ಲ. ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸುತ್ತಿದ್ದಾರೆʼʼ ಎಂದಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಭಾರತವು ಜಗತ್ತಿಗೆ ಶಾಂತಿ ಮತ್ತು ಸಂತೋಷದ ಮಾರ್ಗವನ್ನು ತೋರಿದೆ. ‘ಸನಾತನ ಧರ್ಮ’ ಮಾನವಕುಲದ ಕಲ್ಯಾಣದಲ್ಲಿ ನಂಬಿಕೆ ಇಟ್ಟಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್‌ ವಾಗ್ದಾಳಿ

ಭಾಗವತ್ ತಮ್ಮ ಭಾಷಣದಲ್ಲಿ ಮೋದಿ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸದಿದ್ದರೂ ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್‌ ಮುಖ್ಯಸ್ಥರು ಪ್ರಧಾನಿ ತನ್ನನ್ನು ದೇವರು ಕಳುಹಿಸಿದ್ದಾರೆ ಎಂಬ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ. ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ‘ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂತನೇ ಕಳಿಸಿದ್ದಾನೆ ಎನಿಸುತ್ತಿದೆ’ ಎಂಬ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಭಾಗವತ್‌ ಅವರು ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಕೆಲವು ನಾಯಕರ ಅಹಂಕಾರವೇ ಕಾರಣ ಎಂದು ಹೇಳಿದ್ದರು. ಜತೆಗೆ ಭಾಗವತ್ ಅವರು ಮಣಿಪುರ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕಲಹ ಪೀಡಿತ ಈಶಾನ್ಯ ರಾಜ್ಯದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದರು.

ಸದ್ಯ ಭಾಗವತ್‌ ಅವರ ಹೇಳಿಕೆಯನ್ನು ಜೈರಾಂ ರಮೇಶ್‌ ʼಇದು ನಾಗಪುರದಿಂದ (ಆರ್‌ಎಸ್‌ಎಸ್‌ ಕಚೇರಿಯಿಂದ) ಲೋಕಕಲ್ಯಾಣ ಮಾರ್ಗದತ್ತ (ಪ್ರಧಾನಿ ನಿವಾಸದತ್ತ) ಹಾರಿಸಿದ ಅಗ್ನಿಕ್ಷಿಪಣಿ’ ಎಂದು ವ್ಯಂಗ್ಯವಾಡಿದ್ದಾರೆ.

Exit mobile version