Site icon Vistara News

Mohan Bhagwat: ಎರಡು ಸುತ್ತಿನ ರಹಸ್ಯ ಸಭೆ ನಡೆಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್-ಯೋಗಿ ಆದಿತ್ಯನಾಥ್‌

Mohan Bhagwat

Mohan Bhagwat

ಲಕ್ನೋ: ಲೋಕಸಭೆ ಚುನಾವಣೆಯಲ್ಲಿ (Loksabha Election 2024) ಬಿಜೆಪಿ (BJP) ಸ್ಪಷ್ಟ ಬಹುಮತದ ಕೊರತೆಯನ್ನು ಅನುಭವಿಸಿದ ಅನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಸೇರಿದಂತೆ ಕೆಲವು ನಾಯಕರು ನೀಡಿರುವ ಹೇಳಿಕೆಗಳು ದೇಶಾದ್ಯಂತ ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿವೆ. ಈ ಮಧ್ಯೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಮತ್ತು ಮೋಹನ್ ಭಾಗವತ್ ಅವರು ಶನಿವಾರ ಎರಡು ಗೌಪ್ಯ ಸಭೆ (Closed-door meetings) ನಡೆಸಿರುವುದು ಕುತೂಹಲ ಮೂಡಿಸಿದೆ. ಈ ಸಭೆ ತಲಾ ಅರ್ಧ ಗಂಟೆಗಳ ಕಾಲ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಗೋರಖ್ಪುರದಲ್ಲಿ ಗುರುವಾರ ಪ್ರಾರಂಭವಾದ ನಾಲ್ಕು ದಿನಗಳ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋಹನ್ ಭಾಗವತ್ ಅಲ್ಲೇ ತಂಗಿದ್ದಾರೆ. ಆದಿತ್ಯನಾಥ್ ಶನಿವಾರ ಮಧ್ಯಾಹ್ನ ಭಾಗವತ್ ಅವರನ್ನು ಮೊದಲು ಕ್ಯಾಂಪಿಯರ್ಗಂಜ್‌ನ ಶಾಲೆಯಲ್ಲಿ ಭೇಟಿಯಾದರು. ಅಲ್ಲಿ ಇಬ್ಬರು ನಾಯಕರು ಸಭೆ ನಡೆಸಿದರು ಮತ್ತು ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಈ ನಾಯಕರು ಮತ್ತೊಂದು ಸುತ್ತಿನ ಮಾತಿಕತೆಗಾಗಿ ರಾತ್ರಿ 8:30ರ ಸುಮಾರಿಗೆ ನಗರದ ಪಕ್ಕಿಬಾಗ್‌ನ ಸರಸ್ವತಿ ಶಿಶು ಮಂದಿರಕ್ಕೆ ಭೇಟಿ ನೀಡಿದರು ಎಂದು ವರದಿಯೊಂದು ತಿಳಿಸಿದೆ.

ಭೇಟಿಯ ಉದ್ದೇಶವೇನು?

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರದೇ ಇರುವ ಹಿನ್ನೆಲೆಯಲ್ಲಿ ಭಾಗವತ್ ಅವರ ಗೋರಖ್ಪುರ ಪ್ರವಾಸವು ಮಹತ್ವ ಪಡೆದಿದೆ. ಇದು ವಾಡಿಕೆಯ ಭೇಟಿ ಅಲ್ಲ ಎಂದು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. “ಉತ್ತರಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ತೋರಿದೆ. ಈ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿರುವ ಸಾಧ್ಯತೆ ಇದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಬರೋಬ್ಬರಿ 80 ಲೋಕಸಭಾ ಕ್ಷೇತ್ರಗಳಿದ್ದು 2014ರಲ್ಲಿ ಬಿಜೆಪಿ 71 ಮತ್ತು 2019ರಲ್ಲಿ 62 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಕೇವಲ 33 ಸ್ಥಾನಗಳಿಗೆ ಸೀಮಿತವಾಗಿದೆ. ಇತ್ತ ಪ್ರತಿಪಕ್ಷಗಳ ಇಂಡಿ ಮೈತ್ರಿಕೂಟ ಇಲ್ಲಿ ಜಾದೂ ಮಾಡಿ 43 ಕಡೆ ಗೆಲುವಿನ ನಗೆ ಬೀರಿದೆ. ಆ ಪೈಕಿ ಸಮಾಜವಾದಿ ಪಾರ್ಟಿ 37 ಕಡೆ ಮತ್ತು ಕಾಂಗ್ರೆಸ್‌ 6 ಕಡೆ ಗೆದ್ದಿದೆ. ಈ ಎಲ್ಲ ವಿಚಾರಗಳನ್ನು ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋತಿರುವುದು ಪಕ್ಷಕ್ಕೆ ಆಘಾತ ತಂದಿತ್ತಿದೆ. ಎರಡು ಬಾರಿ ಸಂಸದರಾಗಿದ್ದ ಲಲ್ಲು ಸಿಂಗ್ ಅವರನ್ನು ಎಸ್‌ಪಿಯ ಅವಧೇಶ್ ಪ್ರಸಾದ್ ಸೋಲಿಸಿದ್ದು, ಈ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿದೆ.

ಇದನ್ನೂ ಓದಿ: RSS V/S BJP: ಮೋಹನ್ ಭಾಗವತ್ ʼಅಹಂಕಾರʼದ ಹೇಳಿಕೆ ಮೋದಿ ವಿರುದ್ಧವೆ? ಆರ್‌ಎಸ್‌ಎಸ್ ಸ್ಪಷ್ಟನೆ ಇದು!

ಮೂಲಗಳ ಪ್ರಕಾರ ಭಾಗವತ್ ಬುಧವಾರ ಗೋರಖ್ಪುರಕ್ಕೆ ತಲುಪಿದ ನಂತರ, ಸ್ಥಳೀಯ ಆರ್‌ಎಸ್‌ಎಸ್‌ ಪದಾಧಿಕಾರಿಗಳೊಂದಿಗೆ ಅನೇಕ ಸುತ್ತಿನ ಸಭೆಗಳನ್ನು ನಡೆಸಿ ಚುನಾವಣೆ ಫಲಿತಾಂಶದ ಬಗ್ಗೆ ಅವರಿಂದ ವರದಿಗಳನ್ನು ಪಡೆದಿದ್ದಾರೆ. ಸೋಲಿನ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಉಭಯ ನಾಯಕರ ಗೌಪ್ಯ ಮಾತುಕತೆ ಕುತೂಹಲ ಮೂಡಿಸಿದೆ.

Exit mobile version