Site icon Vistara News

Mohan Bhagwat: ಜನ ಸೇವಕ ಎಂದಿಗೂ ಅಹಂಕಾರಿ ಆಗಿರುವುದಿಲ್ಲ: ಮೋಹನ್‌ ಭಾಗವತ್‌

Mohan Bhagwat

Mohan Bhagwat

ಮುಂಬೈ: ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಶಿಷ್ಟಾಚಾರವನ್ನು ಕಾಪಾಡಿಕೊಳ್ಳಲಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಹೇಳಿದ್ದಾರೆ. ನಿಜವಾದ ಜನ ಸೇವಕ ಎಂದಿಗೂ ಅಹಂಕಾರವನ್ನು ತೋರಿಸುವುದಿಲ್ಲ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವಾಗಲೂ ಸಭ್ಯತೆಯನ್ನು ಕಾಪಾಡಿಕೊಳ್ಳುತ್ತಾನೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ನಿಜವಾದ ಜನ ಸೇವಕನು ಕೆಲಸ ಮಾಡುವಾಗ ಸಭ್ಯತೆಯನ್ನು ಕಾಪಾಡಿಕೊಳ್ಳುತ್ತಾನೆ. ನಾನು ಇದನ್ನು ಮಾಡಿದ್ದೇನೆ ಎಂಬ ಅಹಂಕಾರವಿಲ್ಲದ ವ್ಯಕ್ತಿಗೆ ಮಾತ್ರ ಜನ ಸೇವಕ ಎಂದು ಕರೆಯಲ್ಪಡುವ ಹಕ್ಕಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ಹಿಂಸಾಚಾರ ಭುಗಿಲೆದ್ದಿದೆ. ಮಣಿಪುರದ ನಾಗರಿಕರು ಶಾಂತಿ ಸ್ಥಾಪನೆಗಾಗಿ ಒಂದು ವರ್ಷದಿಂದ ಕಾಯುತ್ತಿದ್ದಾರೆ. ಹಾಗಾಗಿ ಮಣಿಪುರದಲ್ಲಿ ಆದ್ಯತೆಯ ಮೇರೆಗೆ ಶಾಂತಿಸ್ಥಾಪನೆ ಮಾಡಬೇಕು. ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರವನ್ನು ಸಂಪೂರ್ಣವಾಗಿ ತಡೆಯಬೇಕು” ಎಂದು ಹೇಳಿದ್ದಾರೆ.

“ಮಣಿಪುರವು ಒಂದು ವರ್ಷದಿಂದ ಶಾಂತಿಯನ್ನು ಹುಡುಕುತ್ತಿದೆ. ಇದನ್ನು ಆದ್ಯತೆಯ ಮೇರೆಗೆ ಚರ್ಚಿಸಬೇಕು. ಕಳೆದ 10 ವರ್ಷಗಳಿಂದ ರಾಜ್ಯವು ಶಾಂತಿಯುತವಾಗಿತ್ತು. ಹಳೆಯ ‘ಬಂದೂಕು ಸಂಸ್ಕೃತಿ’ ಕೊನೆಗೊಂಡಂತೆ ಭಾಸವಾಗಿತ್ತು. ಆದರೆ ಅಲ್ಲಿ ಇದ್ದಕ್ಕಿದ್ದಂತೆ ಉದ್ಭವಿಸಿದ ಉದ್ವಿಗ್ನತೆಯ ಬೆಂಕಿ ಇನ್ನೂ ಉರಿಯುತ್ತಿದೆ. ಅದರ ಬಗ್ಗೆ ಯಾರು ಗಮನ ಹರಿಸುತ್ತಾರೆ? ಅದಕ್ಕೆ ಆದ್ಯತೆ ನೀಡುವುದು ಮತ್ತು ಅದನ್ನು ಗಮನಿಸುವುದು ಆದ್ಯ ಕರ್ತವ್ಯವಾಗಲಿ” ಎಂದು ಅವರು ಸಲಹೆ ನೀಡಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಚುನಾವಣೆ ಸ್ಪರ್ಧೆ ಮಾತ್ರ ಯುದ್ಧವಲ್ಲ

ಇದೇ ವೇಳೆ ಅವರು ಚುನಾವಣೆ ಯುದ್ಧವಲ್ಲ, ಅದೊಂದು ಸ್ಪರ್ಧೆ ಮಾತ್ರ ಎಂದು ಹೇಳಿದ್ದಾರೆ. “ಚುನಾವಣೆಗಳು ಪ್ರಜಾಪ್ರಭುತ್ವದ ಅತ್ಯಗತ್ಯ ಪ್ರಕ್ರಿಯೆ. ಚುನಾವಣೆ ಸ್ಪರ್ಧೆ ಒಂದು ಮುಖವಾದರೆ, ಪ್ರಜಾಪ್ರಭುತ್ವದ ಘನತೆ ಮತ್ತೊಂದು ಮುಖವಾಗಿದೆ. ಹಾಗಾಗಿ, ಚುನಾವಣೆಯನ್ನು ಯುದ್ಧವಾಗಿ ಪರಿಗಣಿಸಬಾರದು. ಸುಳ್ಳುಗಳನ್ನು ಹೇಳಬಾರದು. ಸ್ಪರ್ಧಿಯೊಬ್ಬ ಎದುರಾಳಿ ಕುರಿತು ಟೀಕೆ ಮಾಡಬಹುದು, ವಿಮರ್ಶೆ ಮಾಡಬಹುದು. ಆದರೆ ಅವು ವೈಯಕ್ತಿಕವಾಗಿರಬಾರದು, ಸಮಾಜಕ್ಕೆ ಹಾನಿ ಮಾಡುವಂತೆ ಇರಬಾರದು. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ವಿಭಿನ್ನವಾಗಿರುತ್ತದೆ. ಆದ್ದರಿಂದ ಎಲ್ಲರೂ ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಲು ಸಾಧ್ಯವಿಲ್ಲ. ಆದರೆ ಸಮಾಜದಲ್ಲಿನ ಜನರು ವಿಭಿನ್ನ ಮನಸ್ಸುಗಳನ್ನು ಹೊಂದಿದ್ದರೂ ಒಟ್ಟಿಗೆ ಮುಂದುವರಿಯಲು ನಿರ್ಧರಿಸಿದಾಗ, ಪರಸ್ಪರ ಒಪ್ಪಿಗೆ ರೂಪುಗೊಳ್ಳುತ್ತದೆ” ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಅನ್ನು ಚುನಾವಣೆಗೆ ಎಳೆದು ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಜತೆಗೆ ಚುನಾವಣೆಯ ಸಮಯದಲ್ಲಿ ಶಿಷ್ಟಾಚಾರವನ್ನು ಅನುಸರಿಸುವುದು ಮುಖ್ಯ ಎಂದು ಒತ್ತಿ ಹೇಳಿದ್ದಾರೆ. “ಚುನಾವಣೆಯಲ್ಲಿ ಸ್ಪರ್ಧಿಸುವಾಗಲೂ ಸಭ್ಯತೆ ಇದೆ. ಈ ಬಾರಿ ಆ ಶಿಷ್ಟಾಚಾರವನ್ನು ಅನುಸರಿಸಲಾಗಿಲ್ಲ” ಎಂದು ಅವರು ತಿಳಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ ಎಂದು ಮೋಹನ್ ಭಾಗವತ್ ಶ್ಲಾಘಿಸಿದ್ದಾರೆ. ಆದಾಗ್ಯೂ, ಭಾರತವು ಸವಾಲುಗಳಿಂದ ಮುಕ್ತವಾಗಿಲ್ಲ ಎಂದು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Mohan Bhagwat: ಮಣಿಪುರ ಹಿಂಸೆ ನಿಲ್ಲಿಸಿ; ಅಧಿಕಾರ ಹಿಡಿದ ಮೋದಿಗೆ ಟಾಸ್ಕ್‌ ಕೊಟ್ಟ ಮೋಹನ್‌ ಭಾಗವತ್!

Exit mobile version