Site icon Vistara News

Mollywood Sex Mafia: ಸ್ಟಾರ್‌ ನಟ, ನಿರ್ದೇಶಕನ ವಿರುದ್ಧ ಕಾಸ್ಟ್‌ ಕೌಚಿಂಗ್‌ ಆರೋಪ; SIT ತನಿಖೆಗೆ ಆದೇಶ

Mollywood sex mafia

ತಿರುವನಂತಪುರಂ: ಮಲಯಾಳಂ ಚಿತ್ರರಂಗ(Mollywood Sex Mafia)ದಲ್ಲಿ ಭುಗಿಲೆದ್ದಿರುವ ಕಾಸ್ಟ್‌ ಕೌಚಿಂಗ್‌(Cast Couching) ವಿವಾದ ಇದೀಗ ಕೇರಳ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿದ್ದು, ದಿನೇ ದಿನೇ ವಿಚಾರ ಗಂಭೀರ ಸ್ವರೂಪ ಪಡೆಯುತ್ತಿರುವ ಕಾರಣ ಇದರ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(SIT)ವನ್ನು ಸರ್ಕಾರ ರಚಿಸಿದೆ

ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ನಟರು ಎತ್ತಿರುವ ಆರೋಪಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸ್ಪರ್ಜನ್ ಕುಮಾರ್ ನೇತೃತ್ವದಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲು ನಿರ್ಧರಿಸಲಾಯಿತು.

ತಂಡವು ಎಸ್ ಅಜೀತಾ ಬೇಗಂ (ಡಿಐಜಿ), ಮೆರಿನ್ ಜೋಸೆಫ್ (ಎಸ್ಪಿ ಕ್ರೈಂ ಬ್ರಾಂಚ್ ಹೆಚ್ಕ್ಯು), ಜಿ ಪೂಂಕುಝಲಿ (ಎಐಜಿ ಕರಾವಳಿ ಪೊಲೀಸ್), ಐಶ್ವರ್ಯ ಡೊಂಕ್ರೆ (ಸಹಾಯಕ ನಿರ್ದೇಶಕಿ ಕೇರಳ ಪೊಲೀಸ್ ಅಕಾಡೆಮಿ), ಅಜಿತ್ ವಿ (ಎಐಜಿ, ಕಾನೂನು ಮತ್ತು ಸುವ್ಯವಸ್ಥೆ), ಮತ್ತು ಎಸ್ ಮಧುಸೂದನನ್ (ಎಸ್ಪಿ ಅಪರಾಧ ವಿಭಾಗ) ಅವರನ್ನು ಒಳಗೊಂಡಿದೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೆಲವು ಮಹಿಳೆಯರು ಚಿತ್ರರಂಗದಲ್ಲಿ ಎದುರಿಸಿದ ಸಂಕಷ್ಟಗಳನ್ನು ಬಯಲಾದ ನಂತರ ಸಿಎಂ ವಿಜಯನ್ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಇದಕ್ಕೂ ಮುನ್ನ ಮಲಯಾಳಂ ಚಲನಚಿತ್ರ ನಿರ್ಮಾಪಕ ರಂಜಿತ್ ವಿರುದ್ಧ ಕಾಸ್ಟ್‌ ಕೌಚಿಂಗ್‌ ಆರೋಪ ಕೇಳಿ ಬಂದಿದೆ. ಹೀಗಾಗಿ ಅವರು, ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಂಜೀತ್‌ 2009 ರಲ್ಲಿ ಅವರು ನಿರ್ದೇಶಿಸಿದ ಚಿತ್ರದ ಚಿತ್ರೀಕರಣಕ್ಕೆ ಬಂದಾಗ ಚಲನಚಿತ್ರ ನಿರ್ಮಾಪಕರು ಅನುಚಿತ ರೀತಿಯಲ್ಲಿ ವರ್ತಿಸಿದರು ಎಂದು ಬಂಗಾಳಿ ನಟಿಯೊಬ್ಬರು ಇತ್ತೀಚೆಗೆ ಆರೋಪಿಸಿದರು. ಆದರೆ ಈ ಆರೋಪವನ್ನು ಅವರು ತಿರಸ್ಕರಿಸಿದ್ದಾರೆ.

ರಂಜಿತ್ ರಾಜೀನಾಮೆಯನ್ನು ಘೋಷಿಸಿದ ನಂತರ, ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ರಾಜ್ಯ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚಲನಚಿತ್ರ ನಿರ್ಮಾಪಕರ ರಾಜೀನಾಮೆಯನ್ನು ಅವರು ಕಳುಹಿಸಿದ ತಕ್ಷಣ ಸರ್ಕಾರವು ಅಂಗೀಕರಿಸಿದೆ ಎಂದಿದ್ದಾರೆ.

ನಟ ಸಿದ್ದಿಕ್ ಕೂಡ ರಾಜೀನಾಮೆ

ಮಹಿಳಾ ನಟಿಯೊಬ್ಬರು ಎತ್ತಿರುವ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ನಟ ಸಿದ್ದಿಕ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಎಎಂಎಂಎ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ನಟ, ತಮ್ಮ ರಾಜೀನಾಮೆ ಪತ್ರವನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಲಾಲ್ ಅವರಿಗೆ ಕಳುಹಿಸಿದ್ದಾರೆ.

“ಹೌದು. ನನ್ನ ಅಧಿಕೃತ ರಾಜೀನಾಮೆಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಲಾಲ್ ಅವರಿಗೆ ಸಲ್ಲಿಸಿದ್ದೇನೆ. ನನ್ನ ವಿರುದ್ಧ ಆರೋಪಗಳು ಬಂದಿದ್ದರಿಂದ ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿ ರಾಜೀನಾಮೆ ನೀಡಿದ್ದೇನೆ ಎಂದು ಸಿದ್ದಿಕ್ ಹೇಳಿದ್ದಾರೆ. ಸಿನಿಮಾ ಚರ್ಚೆಗೆ ಆಹ್ವಾನಿಸಿದ ಬಳಿಕ ಸಿದ್ದಿಕ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನಟಿಯೊಬ್ಬರು ಶನಿವಾರ ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ನ್ಯಾ. ಹೇಮಾ ನೇತೃತ್ವದ ಸಮಿತಿ ಮಲಯಾಳಂ ಚಿತ್ರರಂಗ ಸೆಕ್ಸ್‌ ಮಾಫಿಯಾ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ಬಯಲಿಗೆಳೆದಿತ್ತು. ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್‌ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.

ಇದನ್ನೂ ಓದಿ: Mollywood Sex Mafia: ಮಲಯಾಳಂ ಚಿತ್ರರಂಗದ ಸೆಕ್ಸ್‌ ಮಾಫಿಯಾ ಬಟಾಬಯಲು; 15 ಪ್ರಭಾವಿಗಳಿಂದ ದಂಧೆ- ಸ್ಫೋಟಕ ವರದಿ ಔಟ್‌

Exit mobile version