Site icon Vistara News

Monkey attack: ಏಕಾಏಕಿ ದಾಳಿ ನಡೆಸಿದ ಮಂಗಗಳು; ಈ ಬಾಲಕಿ ಏನು ಮಾಡಿದಳು ಗೊತ್ತೇ

Monkey attack

ಉತ್ತರಪ್ರದೇಶ: ಅತ್ಯಾಧುನಿಕ ತಂತ್ರಜ್ಞಾನಗಳು ಕೇವಲ ನಮ್ಮ ಮನೋರಂಜನೆಗಾಗಿ, ನಮ್ಮ ಕೆಲಸವನ್ನು ಸುಲಭಗೊಳಿಸುವುದಕ್ಕೆ ಮಾತ್ರ ಎಂದರೆ ತಪ್ಪಾಗುವುದು. ಯಾಕೆಂದರೆ ಇದು ಕೆಲವೊಮ್ಮೆ ನಮ್ಮನ್ನು ಪ್ರಾಣಾಪಾಯದಿಂದಲೂ ರಕ್ಷಿಸುತ್ತದೆ ಎಂಬುದನ್ನು ಅಮೆಜಾನ್ ನ ಅಲೆಕ್ಸಾ (Amazon’s Alexa) ಸಾಬೀತು ಪಡಿಸಿದೆ. ಬಾಲಕಿಯೊಬ್ಬಳು (girl) ಮಂಗಗಳ ದಾಳಿ (Monkey attack) ವೇಳೆ ಸಮಯಪ್ರಜ್ಞೆ ಹಾಗೂ ಮನೆಯಲ್ಲಿದ್ದ ಅಲೆಕ್ಸಾದಿಂದಾಗಿ ತನ್ನನ್ನು ಮತ್ತು ಒಂದು ವರ್ಷದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿಕೊಂಡ ಪ್ರಕರಣ ಉತ್ತರಪ್ರದೇಶದಲ್ಲಿ (uttarpradesh) ನಡೆದಿದೆ.

ಉತ್ತರ ಪ್ರದೇಶದ ಬಸ್ತಿಯ 13 ವರ್ಷದ ಬಾಲಕಿ ನಿಕಿತಾ (nikita) ಅಮೆಜಾನ್‌ನ ವರ್ಚುವಲ್ ವಾಯ್ಸ್ ಅಸಿಸ್ಟೆಂಟ್ (virtual voice assistant) ಅಲೆಕ್ಸಾವನ್ನು ಬಳಸಿಕೊಂಡು ತನ್ನನ್ನು ಮತ್ತು ತನ್ನ 15 ತಿಂಗಳ ಮಗುವನ್ನು ಮಂಗಗಳ ದಾಳಿಯಿಂದ ರಕ್ಷಿಸಿರುವ ಘಟನೆ ನಡೆದಿದೆ.

ಕೊಠಡಿಯಲ್ಲಿ ಮಗು ವಾಮಿಕ ಜೊತೆ ನಿಕಿತಾ ಆಟವಾಡುತ್ತಿದ್ದಾಗ ಮಂಗಗಳು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮನೆಯ ಸದಸ್ಯರು ಹೊರಗಡೆ ಇದ್ದರು. ಹೀಗಾಗಿ ಮಂಗಗಳು ದಾಳಿ ನಡೆಸಿದ ವೇಳೆ ನಿಕಿತಾಗೆ ಅಲ್ಲಿಂದ ಹೊರಹೋಗಿ ಮನೆಯವರನ್ನು ಕರೆಯುವುದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Child Trafficking: 5 ಲಕ್ಷ ರೂ.ಗೆ ಒಂದು ಮಗು ಮಾರಾಟ; 10 ಮಕ್ಕಳನ್ನು ರಕ್ಷಿಸಿದ ಸಿಬಿಐ!

ಏಕಾಏಕಿ ಮಂಗಗಳ ದಾಳಿ

ಏಕಾಏಕಿ ಐದರಿಂದ ಆರು ಮಂಗಗಳ ಗುಂಪು ಕೊಠಡಿಗೆ ನುಗ್ಗಿದ್ದು, ಅಡುಗೆ ಮನೆಯಲ್ಲಿದ್ದ ಆಹಾರ ಪದಾರ್ಥಗಳನ್ನು ಎಸೆದಿದೆ. ಅಲ್ಲದೇ ಹಲವು ಬಾರಿ ಮಗುವಿನ ಬಳಿ ಬರಲು ಪ್ರಯತ್ನಿಸಿದೆ. ನಿಕಿತಾ ಭಯಭೀತಳಾದರೂ ಧೈರ್ಯದಿಂದ ಅವನ್ನು ಎದುರಿಸಲು ಪ್ರಯತ್ನಿಸಿದಳು.


ಬಾಲಕಿಯ ಸಮಯಪ್ರಜ್ಞೆ

ಮಾತ್ರವಲ್ಲದೇ ಸಮಯಪ್ರಜ್ಞೆಯ ಮೂಲಕ ರೆಫ್ರಿಜರೇಟರ್‌ನಲ್ಲಿದ್ಧ ಅಲೆಕ್ಸಾ ಸಾಧನವನ್ನು ಗುರುತಿಸಿ ಅದಕ್ಕೆ ನಾಯಿಯ ಬೊಗಳುವ ಶಬ್ದವನ್ನು ಪ್ಲೇ ಮಾಡಲು ಆದೇಶಿಸಿದಳು. ಆಕೆಯ ಧ್ವನಿ ಆಜ್ಞೆಯನ್ನು ಸ್ವೀಕರಿಸಿದ ಬಳಿಕ ಅಲೆಕ್ಸಾ ಜೋರಾಗಿ ನಾಯಿ ಬೊಗಳುವ ಶಬ್ದಗಳನ್ನು ಉಂಟುಮಾಡಿತು. ಇದರಿಂದ ಹೆದರಿದ ಮಂಗಗಳು ಬಾಲ್ಕನಿಯ ಮೂಲಕ ಟೆರೇಸ್ ಕಡೆಗೆ ಓಡಿದವು.

ಮನೆಯೊಳಗಿನ ಸದ್ದು ಗದ್ದಲ ಕೇಳಿ ನಿಕಿತಾ ಅವರ ತಾಯಿ ಶಿಪ್ರಾ ಓಜಾ ಓಡಿ ಬಂದರು. ಮಗಳ ಸಮಯಪ್ರಜ್ಞೆಗೆ ಅವರು ಮೆಚ್ಚುಗೆ ಸೂಚಿಸಿದ್ದು, ಇದರಿಂದಾಗಿ ಸಣ್ಣ ಮಗು ಹಾಗೂ ಆಕೆಯ ಜೀವ ಉಳಿಯಿತು ಎಂದು ಹೇಳಿದ್ದಾರೆ.

ಹಸುಳೆ ಮೇಲೆ ಮಂಗನಿಂದ ದಾಳಿ

ಕೆಲವು ತಿಂಗಳ ಹಿಂದೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ತೋರೇಕೋಲಮ್ಮನ ಹಳ್ಳಿಯಲ್ಲಿ ಮಂಜುಳಾ ಹಾಗೂ ಸಿದ್ದೇಶ್ ದಂಪತಿಯ 9 ದಿನದ ಹಸುಳೆಯ ಮೇಲೆ ಮಂಗವೊಂದು ದಾಳಿ ನಡೆಸಿ ಹಣೆಯನ್ನು ಕಚ್ಚಿ ಗಾಯಗೊಳಿಸಿತ್ತು.

ಮಗುವಿನ ಕಿರುಚಾಟ ಕೇಳಿ ಮನೆಯವರು ಓಡಿ ಬಂದಾಗ ಮಂಗ ದಾಳಿ ಮಾಡುತ್ತಿರುವುದು ಗೊತ್ತಾಗಿದೆ. ಕೂಡಲೇ ಕೋತಿಯನ್ನು ಓಡಿಸಿ ಮಗುವನ್ನು ರಕ್ಷಿಸಲಾಗಿದೆ. ಮಂಜುಳಾ ಹಾಗೂ ಸಿದ್ದೇಶ್ ಎಂಬುವವರ ಮಗುವು ದಾಳಿಗೆ ಒಳಗಾಗಿರುವುದು.

ಮನೆಯಲ್ಲಿ ಮಲಗಿಸಿದ್ದ ವೇಳೆ ಮಂಗ ದಾಳಿ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಗುವಿಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

Exit mobile version