Site icon Vistara News

Monsoon 2023: ಈ ವರ್ಷ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ! ಸ್ಕೈಮೆಟ್ ಹವಾಮಾನ ವರದಿಯಲ್ಲಿ ಏನಿದೆ?

Weather Alert

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ (Monsoon 2023) ಎಂದು ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ (Skymet) ಸೋಮವಾರ ತಿಳಿಸಿದೆ. ಎಲ್ ನಿನೊ ಜೊತೆಗೆ, ಮಾನ್ಸೂನ್ ಮೇಲೆ ಪ್ರಭಾವ ಬೀರುವ ಇತರ ಅಂಶಗಳು ಮಳೆ ಕಡಿಮೆಯಾಗಲು ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಕೇಂದ್ರ ಸರ್ಕಾರದ ಭಾರತೀಯ ಹವಾಮಾನ ಇಲಾಖೆ ಇನ್ನೂ ಮಳೆಗಾಲ ಸಂಬಂಧ ಯಾವುದೇ ವರದಿಯನ್ನು ಬಿಡುಗಡೆ ಮಾಡಿಲ್ಲ. ಈಗ ಬಿಡುಗಡೆಯಾಗಿರುವುದು ಖಾಸಗಿ ಸಂಸ್ಥೆಯ ವರದಿಯಾಗಿದೆ.

ವಿಶೇಷ ಎಂದರೆ, ಇದೇ ಕಂಪನಿಯ 2023ರ ಜನವರಿ 4ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದಲ್ಲಿ ಈ ವರ್ಷ ಮಳೆ ಸಾಮಾನ್ಯವಾಗಿರಲಿದೆ ಎಂದು ಮುನ್ಸೂಚನೆ ನೀಡಿತ್ತು. ಈಗ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ಸ್ಕೈಮೆಟ್ ಮ್ಯಾನೇಜಿಂಗ್ ಡೈರೆಕ್ಟರ್ ಜತಿನ್ ಸಿಂಗ್ ಅವರು, ಟ್ರಿಪಲ್-ಡಿಪ್-ಲಾ ನಿನಾ ಪರಿಣಾಮ ನೈಋತ್ಯ ಮಾನ್ಸೂನ್ ಕಳೆದ 4 ಸತತ ಋತುಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಈಗ, ಲಾ ನಿನಾ ಕೊನೆಗೊಂಡಿದೆ. ಪ್ರಮುಖ ಸಾಗರ ಮತ್ತು ವಾಯುಮಂಡಲದ ಇಎನ್‌ಎಸ್‌ಒ ತಟಸ್ಥ ಸ್ಥಿತಿಗಳೊಂದಿಗೆ ಸ್ಥಿರವಾಗಿವೆ. ಎಲ್ ನಿನೋ ಸಂಭವನೀಯತೆ ಹೆಚ್ಚುತ್ತಿದೆ ಮತ್ತು ಮಳೆಗಾಲದ ಸಮಯದಲ್ಲಿ ಪ್ರಬಲ ವರ್ಗವಾಗಲು ಅದರ ಸಂಭವನೀಯತೆಯು ದೊಡ್ಡದಾಗಿ ಬೆಳೆಯುತ್ತಿದೆ. ಹಾಗಾಗಿ ಎಲ್ ನಿನೋ ವಾಪಸಾತಿಯು ದುರ್ಬಲ ಮಳೆಗಾಲವನ್ನು ಊಹಿಸಬಹುದಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ತಗ್ಗಿದ ಅಬ್ಬರದ ಮಳೆ

ಕರ್ನಾಟಕದಲ್ಲಿ ಹಲವೆಡೆ ಮಳೆಯ (Rain updates) ಅಬ್ಬರ ತಗ್ಗಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿವ ವರದಿ ಆಗಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಣಹವೆಯಿಂದ (Weather Report) ಕೂಡಿತ್ತು. ಧಾರವಾಡ 2 ಹಾಗೂ ಬೆಳಗಾವಿಯ ಲೋಂಡಾದಲ್ಲಿ 1 ಸೆಂ.ಮೀ ಮಳೆಯಾಗಿದ್ದು, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 37.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುಂದಿನ 48 ಗಂಟೆಯಲ್ಲಿ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದ ಕೆಲವು ಭಾಗದಲ್ಲಿ ಜಿಟಿ ಜಿಟಿ ಮಳೆಯಾಗಲಿದೆ. ಉಳಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಇದನ್ನೂ ಓದಿ: Harsh Summer: ಹೆಚ್ಚಾಗಲಿದೆ ಬಿಸಿಲು, 3 ತಿಂಗಳು ದಾಟದಿರಿ ಮನೆಯ ಹೊಸ್ತಿಲು; ಹವಾಮಾನ ವರದಿ ಇಲ್ಲಿದೆ

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

Exit mobile version