Site icon Vistara News

Morbi bridge collapse | ಸಾವಿನ ಸಂಖ್ಯೆ 120ಕ್ಕೆ, 150 ಮಂದಿಯ ರಕ್ಷಣೆ

Morbi

ಗಾಂಧಿನಗರ: ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ ತೂಗುಸೇತುವೆ ಕುಸಿದ ದುರಂತದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 100ನ್ನು ದಾಟಿದೆ. 150 ಮಂದಿಯನ್ನು ರಕ್ಷಿಸಲಾಗಿದೆ. ಸಶಸ್ತ್ರ ಪಡೆಗಳು, ಎನ್‌ಡಿಆರ್‌ಎಫ್‌ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.

ಕಾರ್ಯಾಚರಣೆಯಲ್ಲಿ ದೊರೆತ ದೇಹಗಳ ಸಂಖ್ಯೆ 120. ಇನ್ನಷ್ಟು ಮಂದಿ ಸತ್ತಿರುವ ಭೀತಿ ಇದೆʼʼ ಎಂದು ಪೊಲೀಸ್‌ ಅಧಿಕಾರಿ ಪಿ. ದೇಕವಾಡಿಯಾ ಎಂಬವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಹೀಗಾಗಿ ಸಾವಿನ ಸಂಖ್ಯೆ 120ನ್ನೂ ಮೀರಿರಬಹುದು ಎಂದೂ ಶಂಕಿಸಲಾಗಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಭಾನುವಾರ ರಾತ್ರಿ ಸ್ಥಳವನ್ನು ತಲುಪಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ʼʼಪ್ರಧಾನ ಮಂತ್ರಿ ಮೋದಿಯವರು ಈ ದುರಂತದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ನನ್ನ ಜತೆಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಮಾಹಿತಿ ಪಡೆಯುತ್ತಿದ್ದಾರೆ.ʼʼ ಎಂದವರು ಟ್ವೀಟ್‌ ಮಾಡಿದ್ದರು. ಅಧಿಕಾರಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಸಭೆ ನಡೆಸಿದರು.

ಪ್ರಧಾನಿ ಮೋದಿಯವರು ಈಗಾಗಲೇ ಗುಜರಾತ್‌ನಲ್ಲಿದ್ದು, ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ | Morbi Bridge Collapse | 150 ಜನರ ಸಾಮರ್ಥ್ಯದ ಸೇತುವೆ ಮೇಲೆ 675 ಮಂದಿ ನಿಂತಿದ್ದೇ ಕುಸಿತಕ್ಕೆ ಕಾರಣ?

ದುರಸ್ತಿಗಾಗಿ ಮುಚ್ಚಿದ್ದ ಸೇತುವೆ ಕಳೆದ ವಾರವಷ್ಟೇ ಮರುತೆರೆದಿತ್ತು. ದುರಸ್ತಿ ಹಾಗೂ 15 ವರ್ಷಗಳ ನಿರ್ವಹಣೆಗಾಗಿ ಈ ಸೇತುವೆಯನ್ನು ಒರೆವಾ ಕಂಪನಿಗೆ ಒಪ್ಪಿಸಲಾಗಿತ್ತು. ಇದರ ಬಳಕೆಗೆ ಫಿಟ್‌ನೆಸ್‌ ಸರ್ಟಿಫಿಕೇಟ್‌ ನೀಡಲಾಗಿತ್ತೇ ಇಲ್ಲವೇ ಎಂಬುದು ತಿಳಿದುಬಂದಿಲ್ಲ.

150 ಮಂದಿಯ ಭಾರವನ್ನು ಮಾತ್ರ ಹೊರಬಹುದಾದ ಈ ಸೇತುವೆಯ ಮೇಲೆ 300ಕ್ಕೂ ಅಧಿಕ ಜನ ಸೇರಿದ್ದರಿಂದ ಈ ದುರಂತ ಸಂಭವಿಸಿತ್ತು. ಕೇವಲ ಕೆಲವೇ ನಿಮಿಷಗಳಲ್ಲಿ ಸೇತುವೆ ಕುಸಿದಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಹಾಗೂ ವಾರಾಂತ್ಯ ರಜೆ ಇದ್ದುದರಿಂದ ಹೆಚ್ಚಿನ ಜನ ಸೇರಿದ್ದರು.

ದುರ್ಘಟನೆಗೆ ಹೊಣೆಗಾರರಾದವರ ಮೇಲೆ ಸೆಕ್ಷನ್‌ 304, ಸೆಕ್ಷನ್‌ 308, ಸೆಕ್ಷನ್‌ 114 ಅಡಿ ಅನುದ್ದೇಶಿತ ಹತ್ಯೆ, ಹತ್ಯೆಗೆ ಕಾರಣವಾದ ಉದ್ದೇಶಿತ ಹಲ್ಲೆಗಳ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ. ತನಿಖೆಗೆ ಸಮಿತಿ ರಚಿಸಲಾಗಿದೆ.

ಇದನ್ನೂ ಓದಿ | Morbi Bridge Collapse | ಸೇತುವೆ ಕುಸಿತ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ, ಮೋದಿ ಕಾರ್ಯಕ್ರಮ ರದ್ದು, ಸಾವಿನ ಸಂಖ್ಯೆ 91

Exit mobile version