Site icon Vistara News

Poverty in Uttar Pradesh : ಉತ್ತರಪ್ರದೇಶಲ್ಲಿ 5 ವರ್ಷಗಳಲ್ಲಿ 3.4 ಕೋಟಿ ಮಂದಿ ಬಡತನದಿಂದ ಪಾರು

Uttar Pradesh roads

ನವ ದೆಹಲಿ: ಭಾರತದಲ್ಲಿ ಕಳೆದ 2015-16 ಮತ್ತು 2019-21ರಲ್ಲಿ 13.5 ಕೋಟಿ ಮಂದಿ ಬಡತನದ ದವಡೆಯಿಂದ ಪಾರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಉತ್ತರಪ್ರದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಿನ ವೇಗದಲ್ಲಿ ಇಳಿಕೆಯಾಗಿದೆ. ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನದಲ್ಲಿ ಬಡತನದ ತೀವ್ರತೆ ಗಣನೀಯ ತಗ್ಗಿದೆ ಎಂದು ನೀತಿ ಆಯೋಗ (Niti Aayog) ಬಿಡುಗಡೆ ಮಾಡಿರುವ ವರದಿ ನ್ಯಾಶನಲ್‌ ಮಲ್ಟಿ ಡೈಮೆನ್ಷನಲ್‌ ಪವರ್ಟಿ ಇಂಡೆಕ್ಸ್‌ 2022 ( National Multidimentional poverty Index 2023 ) ವರದಿ ತಿಳಿಸಿದೆ.

2015-16 ಮತ್ತು 2019-21ರಲ್ಲಿ ದೇಶದ ನಗರ ಪ್ರದೇಶಗಳಲ್ಲಿ ಬಡವರ ಸಂಖ್ಯೆ 8.65%ರಿಂದ 5.27%ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ 32.59%ರಿಂದ 19.28%ಕ್ಕೆ ಇಳಿಕೆಯಾಗಿದೆ. ಪೌಷ್ಟಿಕಾಹಾರ ಸೇವನೆ, ಶಾಲಾ ಶಿಕ್ಷಣ, ಅಡುಗೆ ಇಂಧನ ಪೂರೈಕೆಯಲ್ಲಿ ಗಣನೀಯ ಸುಧಾರಣೆ ಆಗಿದ್ದು, ಬಡತನ ಇಳಿಕೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಉತ್ತರಪ್ರದೇಶದಲ್ಲಿ 2015-16 ಮತ್ತು 2019-21ರಲ್ಲಿ 3.43 ಕೋಟಿ ಮಂದಿ ಬಡತನದ ದವಡೆಯಿಂದ ಪಾರಾಗಿದ್ದಾರೆ. ನೀತಿ ಆಯೋಗದ ವರದಿಯಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 707 ಜಿಲ್ಲೆಗಳನ್ನು ಸಮೀಕ್ಷೆ ಒಳಗೊಂಡಿದೆ ಎಂದು ವರದಿಯಾಗಿದೆ. ಜಾಗತಿಕ ದರ್ಜೆಗೆ ಅನುಗುಣವಾಗಿ ಸಂಶೋಧನೆ ನಡೆಸಿ ಈ ಅಧ್ಯಯನ ವರದಿ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 2015-16 ಮತ್ತು 2019-21ರ ಅವಧಿಯಲ್ಲಿ ಎಂಪಿಎ ವಾಲ್ಯೂ 0.117ರಿಂದ 0.066%ಕ್ಕೆ ಇಳಿಕೆಯಾಗಿದೆ. ಸರ್ಕಾರವು ಅಭಿವೃದ್ಧಿಗೆ ಆದ್ಯತೆ ನೀಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. 2030ರ ವೇಳೆಗೆ ಬಡತನವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಸರ್ಕಾರವು ಕಮಿಟ್‌ಮೆಂಟ್‌ ಟುವಾರ್ಡ್ಸ್‌ ಸಸ್ಟನೇಬಲ್ ಡೆವಲಪ್‌ಮೆಂಟ್‌ ಗೋಲ್ಸ್‌ (Commitment towards sustainable goals) ಸಾಧಿಸಲು ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಮಕ್ಕಳ ಆರೋಗ್ಯ, ಶಾಲೆಗೆ ಹಾಜರಾತಿ, ತಾಯ್ತನದ ಆರೋಗ್ಯ, ನೈರ್ಮಲ್ಯ, ಅಡುಗೆ ಇಂಧನ ಬಳಕೆ, ಕುಡಿಯುವ ನೀರು, ವಿದ್ಯುತ್‌, ಹೌಸಿಂಗ್‌, ಬ್ಯಾಂಕ್‌ ಖಾತೆ, ಆಸ್ತಿ, ಇತ್ಯಾದಿ ವಿಷಯಗಳನ್ನು ಪರಿಗಣಿಸಲಾಗಿದೆ.

ಸರ್ಕಾರದ ಪೋಷಣ್‌ ಅಭಿಯಾನ್‌, ಅನೀಮಿಯಾ ಮುಕ್ತ ಭಾರತ ಅಭಿಯಾನವು ಆರೋಗ್ಯ ವಲಯದ ಸುಧಾರಣೆಗೆ ಕಾರಣವಾಗಿದೆ. ಸ್ವಚ್ಛ ಭಾರತ, ( Swachh Bharat Mission) ಮತ್ತು ಜಲ್‌ ಜೀವನ್‌ ಮಿಶನ್‌, ಸಕಾರಾತ್ಮಕ ಪ್ರಭಾವ ಬೀರಿದೆ. ಪ್ರಧಾನ ಮಂತ್ರಿ ಆವಾಸ್‌ ಸ್ಕೀಮ್‌, ಪ್ರಧಾನ ಮಂತ್ರಿ ಜನ್‌ ಧನ್‌ ಯೋಜನೆ, ಸಮಗ್ರ ಶಿಕ್ಷಾ ಯೋಜನೆಗಳು ಬಡವರನ್ನು ಆಕರ್ಷಿಸಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬಡತನ ನಿರ್ಮೂಲನೆಗೆ ವಿಶ್ವ ಸಂಸ್ಥೆ ಶ್ಲಾಘನೆ, ಇನ್ನಷ್ಟು ಹಾದಿ ಕ್ರಮಿಸಬೇಕಿದೆ

ಸಾಮಾನ್ಯವಾಗಿ ಬಡತನವನ್ನು ಹೊದ್ದುಕೊಂಡಿರುವ ರಾಜ್ಯಗಳು ಎಂಬ ಹಣೆಪಟ್ಟಿ ಹೊಂದಿದ್ದ ಉತ್ತರ ಭಾರತದ ರಾಜ್ಯಗಳು ಕ್ರಮೇಣ ಅಭಿವೃದ್ಧಿಯತ್ತ ಸಾಗುತ್ತಿರುವುದು ಮತ್ತು ಗ್ರಾಮೀಣ ಪ್ರದೇಶಗಳೂ ಸುಧಾರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಜ್ಞರು ಹೇಳಿದ್ದಾರೆ.

Exit mobile version