ನವದೆಹಲಿ: ಕರ್ನಾಟಕದ ಹಲವೆಡೆ ಈಗಾಗಲೇ ಭಾರಿ ಮಳೆಯಾಗುತ್ತಿದೆ. ಕರ್ನಾಟಕ (Karnataka) ಮಾತ್ರವಲ್ಲದೆ ಮಹಾರಾಷ್ಟ್ರ, ಗುಜರಾತ್ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗುತ್ತಿದೆ. ಇದರ ಬೆನ್ನಲ್ಲೇ, ಹವಾಮಾನ ಇಲಾಖೆ ವರದಿ (Rain Alert) ಬಿಡುಗಡೆ ಮಾಡಿದ್ದು, ಮುಂದಿನ ಮೂರು ದಿನ ದೇಶಾದ್ಯಂತ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.
“ಕಳೆದ 24 ಗಂಟೆಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ. ಮುಂದಿನ 3 ದಿನಗಳವರೆಗೆ ಹೀಗೆಯೇ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ, ಪಂಜಾಬ್, ಹರಿಯಾಣದಲ್ಲಿ ಸಾಸಿವೆ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಹಲವೆಡೆ ಗೋಧಿ ಮತ್ತು ಕಾಳಿನ ಬೆಳೆಗಳ ಕಟಾವು ಮಾಡಬಾರದು” ಎಂದು ಹವಾಮಾನ ಇಲಾಖೆ ರಾಜ್ಯಗಳಿಗೆ ಸೂಚನೆ ನೀಡಿದೆ.
“ದೇಶದ ಬಹುತೇಕ ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಲಿದೆ. ಇನ್ನೂ ಕೆಲವು ಭಾಗಗಳಲ್ಲಿ ಗುಡುಗು-ಮಿಂಚು ಇರಲಿದೆ. ಹಾಗಾಗಿ, ಬೆಳೆಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ ರೈತರು ಕಟಾವು ಮಾಡಬಾರದು. ಆದಾಗ್ಯೂ, ಕೆಲ ರಾಜ್ಯಗಳಲ್ಲಿ ಮಾರ್ಚ್ 20ರ ವೇಳೆಗೆ ಕಡಿಮೆಯಾಗಲಿದೆ” ಎಂದು ತಿಳಿಸಿದೆ.
ಎಲ್ಲೆಲ್ಲಿ ಭಾರಿ ಮಳೆ ಸಾಧ್ಯತೆ?
ಕರ್ನಾಟಕದಲ್ಲಿ ಮಾರ್ಚ್ 18ರಂದು ಮಾತ್ರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿ, ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ. ಹಾಗೆಯೇ, ಅರುಣಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಲಡಾಕ್, ಉತ್ತರಾಖಂಡ, ರಾಜಸ್ಥಾನದ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಹಾಗೆಯೇ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ, ಜಾರ್ಖಂಡ್, ಒಡಿಶಾ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ವರುಣನ ಆರ್ಭಟ ಇರಲಿದೆ ಎಂದು ಹೇಳಿದೆ.
ಇದನ್ನೂ ಓದಿ: Bangalore Rain : ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆ ಮತ್ತೆ ಜೋರು ಮಳೆ, ವಾಹನ ಸವಾರರ ಪರದಾಟ
ಗುಜರಾತ್, ಮಹಾರಾಷ್ಟ್ರದಲ್ಲಿ 10 ಜನ ಸಾವು
ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದುವರೆಗೆ ಸಂಭವಿಸಿದ ಮಳೆ ಸಂಬಂಧಿತ ಅವಘಡಗಳಿಂದ 10 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗುಜರಾತ್‌ನಲ್ಲಿ ಶುಕ್ರವಾರ ಒಂದೇ ದಿನ ಭೂಕುಸಿತ, ಕಟ್ಟಡ ಕುಸಿತ, ಸಿಡಿಲು ಸೇರಿ ಹಲವು ಅವಘಡಗಳಿಂದ ಐವರು ಮೃತಪಟ್ಟಿದ್ದಾರೆ. ಮಾರ್ಚ್ 4ರಿಂದ ಇದುವರೆಗೆ ರಾಜ್ಯದಲ್ಲಿ 12 ಜನ ಇಂತಹ ದುರಂತಗಳಲ್ಲಿ ಮೃತಪಟ್ಟಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲೂ ಭಾರಿ ಮಳೆಗೆ ಐವರು ಬಲಿಯಾಗಿದ್ದಾರೆ.