Site icon Vistara News

MP Urinating Case: ಮೂತ್ರ ವಿಸರ್ಜನೆ ಕೇಸ್;‌ ಆದಿವಾಸಿ ವ್ಯಕ್ತಿಯ ಕಾಲು ತೊಳೆದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್;‌ ವಿಡಿಯೊ ವೈರಲ್

Shivraj Singh Chouhan Washes Pee Case Victims Feet

MP CM Shivraj Singh Chouhan Washes Sidhi Pee Case Victim's Feet, Video Goes Viral

ಭೋಪಾಲ್:‌ ಮಧ್ಯಪ್ರದೇಶದಲ್ಲಿ ಆದಿವಾಸಿ ಕಾರ್ಮಿಕ ದಶಮತ್‌ ರಾವತ್‌ ಎಂಬುವರ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ (MP Urinating Case) ವಿಕೃತಿ ಮೆರೆದ ಪ್ರವೇಶ್‌ ಶುಕ್ಲಾನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಲ್ಲದೆ, ಆತನ ಮನೆಯನ್ನು ಕೂಡ ಧ್ವಂಸ ಮಾಡಲಾಗಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಆದಿವಾಸಿ ಕಾರ್ಮಿಕ ದಶಮತ್‌ ರಾವತ್‌ ಅವರ ಕಾಲು ತೊಳೆದಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ದಶಮತ್‌ ರಾವತ್‌ ಅವರನ್ನು ಕೈ ಹಿಡಿದು ಕರೆದುಕೊಂಡು ಬಂದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು, ಅವರನ್ನು ಕುರ್ಚಿಯ ಮೇಲೆ ಕೂರಿಸಿ ಕಾಲು ತೊಳೆದಿದ್ದಾರೆ. ಇದೇ ವೇಳೆ ಅವರು, “ವಿಡಿಯೊ ನೋಡಿ ನನಗೆ ತುಂಬ ದುಃಖವಾಯಿತು. ಜನ ಎಂದರೆ ನನಗೆ ದೇವರ ಸಮಾನ. ನಾನು ನಿಮಗೆ ಕ್ಷಮೆಯಾಚಿಸುತ್ತೇನೆ” ಎಂಬುದಾಗಿ ಶಿವರಾಜ್‌ ಸಿಂಗ್‌ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸಂತ್ರಸ್ತನ ಪಾದ ತೊಳೆದಿರುವುದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅಪರಾಧಿಗಳಿಗೆ ಕಠಿಣ ಕ್ರಮದ ಎಚ್ಚರಿಕೆ

“ಮಧ್ಯಪ್ರದೇಶದಲ್ಲಿ ಅಪರಾಧ ಎಸಗುವವರು 10 ಬಾರಿ ಯೋಚಿಸಬೇಕು. ಇಲ್ಲದಿದ್ದರೆ ಮಾಮಾಜಿ ಸರ್ಕಾರವು (ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಜನ ಮಾಮಾಜಿ ಎಂದು ಕರೆಯುತ್ತಾರೆ) ಅಪರಾಧ ಎಸಗುವವರನ್ನು 10 ಅಡಿ ಆಳದ ಭೂಮಿಯಲ್ಲಿ ಹೂತು ಹಾಕುತ್ತದೆ” ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಕಚೇರಿಯು ಟ್ವೀಟ್‌ ಮಾಡುವ ಮೂಲಕ ಅಪರಾಧ ಎಸಗುವವರಿಗೆ ಎಚ್ಚರಿಕೆ ನೀಡಿದೆ. ಅಕ್ರಮವಾಗಿ ನಿರ್ಮಿಸಿದ ಪ್ರವೇಶ್‌ ಮಿಶ್ರಾ ಮನೆಯನ್ನು ಈಗಾಗಲೇ ಬುಲ್ಡೋಜರ್‌ ಮೂಲಕ ಧ್ವಂಸಗೊಳಿಸಿದ್ದು, ಅಪರಾಧಿಗಳಿಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂಬ ಸಂದೇಶ ರವಾನಿಸಲಾಗಿದೆ.

ಇದನ್ನೂ ಓದಿ: MP Urinating Case: ಆದಿವಾಸಿ ಮೇಲೆ ಮೂತ್ರ ವಿಸರ್ಜನೆ ಮಾಡಿದವನ ಮನೆ ಧ್ವಂಸ; ಹೂತು ಹಾಕುತ್ತೇವೆ ಎಂದ ಸಿಎಂ

ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆಯನ್ನು ಖಂಡಿಸಿದ್ದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಈ ಘಟನೆಯ 10 ದಿನಗಳ ಹಿಂದೆ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಂತೂ ಹೆಚ್ಚಿನ ಆಕ್ರೋಶ ವ್ಯಕ್ತವಾಗಿತ್ತು. ಎನ್‌ಎಸ್‌ಎ ಪ್ರಕರಣ ದಾಖಲಾದ ಬಳಿಕ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

Exit mobile version